ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ ಸೀತಾರಾಂ ಯೆಚೂರಿ
ಹೊಸದಿಲ್ಲಿ: ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಮಂಗಳವಾರ ತಿಳಿಸಿರುವ ಸಿಪಿಎಂ, ಧರ್ಮವು ವೈಯಕ್ತಿಕ ಆಯ್ಕೆಯಾಗಿದೆ ಎನ್ನುವುದು ತನ್ನ ನಂಬಿಕೆಯಾಗಿದೆ ಎಂದು ಒತ್ತಿ ಹೇಳಿದೆ.
“ಧಾರ್ಮಿಕ ನಂಬಿಕೆಗಳನ್ನು ಮತ್ತು ತಮ್ಮ ನಂಬಿಕೆಯನ್ನು ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯ ಹಕ್ಕನ್ನು ಗೌರವಿಸುವುದು ನಮ್ಮ ನೀತಿಯಾಗಿದೆ. ಧರ್ಮವು ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ರಾಜಕೀಯ ಗಳಿಕೆಗಾಗಿ ಸಾಧನವನ್ನಾಗಿ ಮಾಡಿಕೊಳ್ಳುವಂತಿಲ್ಲ. ಹೀಗಾಗಿ ಯೆಚೂರಿಯವರು ಆಹ್ವಾನವನ್ನು ಸ್ವೀಕರಿಸಿದ್ದರೂ ಅವರು ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ” ಎಂದು ಸಿಪಿಎಂ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ಧಾರ್ಮಿಕ ಸಮಾರಂಭವನ್ನು ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಇತರ ಸರಕಾರಿ ಪದಾಧಿಕಾರಿಗಳನ್ನು ನೇರವಾಗಿ ತೊಡಗಿಸಿಕೊಳ್ಳುವ ಮೂಲಕ ಸರಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನಾಗಿ ಪರಿವರ್ತಿಸಿವೆ ಎಂದು ಹೇಳಿರುವ ಸಿಪಿಎಂ, ಸರ್ವೋಚ್ಚ ನ್ಯಾಯಾಲಯವು ಪುನರುಚ್ಚರಿಸಿರುವಂತೆ ಸಂವಿಧಾನದಡಿ ಭಾರತದಲ್ಲಿ ಸರಕಾರವು ಯಾವುದೇ ಧಾರ್ಮಿಕ ಸಂಯೋಜನೆಯನ್ನು ಹೊಂದಿರಬಾರದು ಎನ್ನುವುದು ದೇಶದಲ್ಲಿ ಆಡಳಿತದ ಮೂಲಭೂತ ತತ್ವವಾಗಿದೆ. ಆಡಳಿತವು ಕಾರ್ಯಕ್ರಮದ ಆಯೋಜನೆಯಲ್ಲಿ ಇದನ್ನು ಉಲ್ಲಂಘಿಸುತ್ತಿದೆ ಎಂದು ತಿಳಿಸಿದೆ.
ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ಮೋದಿ ಸೇರಿದಂತೆ 6,000ಕ್ಕೂ ಅಧಿಕ ಗಣ್ಯರು ‘ಪ್ರಾಣ ಪ್ರತಿಷ್ಠಾ’ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.