ದಿಲ್ಲಿಯಲ್ಲಿ ಭೀಕರ ಬೆಂಕಿ ದುರಂತ: ಪ್ರಸಿದ್ಧ ಮ್ಯೂಸಿಯಂಗೆ ಭಾರೀ ಹಾನಿ

Update: 2016-04-26 18:25 GMT

ಹೊಸದಿಲ್ಲಿ, ಎ.26: ಫಿಕಿ ಕಟ್ಟಡದಲ್ಲಿ ಮಂಗಳವಾರ ನಸುಕಿನ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ನೈಸರ್ಗಿಕ ಚರಿತ್ರೆಯ ರಾಷ್ಟ್ರೀಯ ವಸ್ತು ಸಂಗ್ರಹಾಲಯವು ಭಾರೀ ಹಾನಿಗೀಡಾಗಿದೆ.

6 ಮಂದಿ ಅಗ್ನಿಶಾಮಕ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಸ್ಥಿರವಾಗಿದೆಯೆನ್ನಲಾಗಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ವರ್ಷ ಸಾರೋಪೋಡ್ ಎಂದು ಕರೆಯಲಾಗಿರುವ, ಹಲ್ಲಿಯ ಕಾಲಿನ ಡೈನೋಸಾರ್‌ನ 16 ಕೋಟಿ ವರ್ಷ ಹಳೆಯ ಪಳೆಯುಳಿಕೆ ಎಲುಬಿತ್ತು. ಅಲ್ಲಿ ಮೈಸೂರು ಮೂಲದ ಖ್ಯಾತ ವಾನ್ ಇಂಜೆನ್ ಆ್ಯಂಡ್ ವಾನ್ ಇಂಜೆನ್ ತಯಾರಿಸಿದ್ದ, ಸತ್ತ ಪ್ರಾಣಿಗಳ ಚರ್ಮದೊಳಗೆ ಏನಾದರೂ ತುಂಬಿಸಿ, ಜೀವಂತ ಇಡೀ ಪ್ರಾಣಿಯಂತೆ ತೋರುವ ಹಲವು ಗೊಂಬೆಗಳಿದ್ದವು.

ಪರಿಸರ ಸಚಿವ ಪ್ರಕಾಶ ಜಾವಡೇಕರ್ ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೊಂದು ಘೋರ ದುರಂತವಾಗಿದೆ. ನೈಸರ್ಗಿಕ ಚರಿತ್ರೆಯ ವಸ್ತು ಸಂಗ್ರಹಾಲಯ ರಾಷ್ಟ್ರೀಯ ಸಂಪತ್ತಾಗಿದೆ. ಅದರ ನಷ್ಟವನ್ನು ಹಣದಿಂದ ಅಳೆಯಲಾಗದೆಂದು ಅವರು ಹೇಳಿದ್ದಾರೆ.

1978 ಜೂ.5ರಂದು ಈ ವಸ್ತು ಸಂಗ್ರಹಾಲಯ ಲೋಕಾರ್ಪಣೆಗೊಂಡಿತ್ತು.

ಬೆಂಕಿಯು ಇಂದು ನಸುಕಿನ 1:30ರಿಂದ2 ಗಂಟೆಯೊಳಗೆ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಲ್ಯುಟೆನ್ಸ್ ದಿಲ್ಲಿಯ ತಾನ್‌ಸೇನ್ ರಸ್ತೆಯ ಕಟ್ಟಡದ ತುದಿಯ ಮಹಡಿಯಲ್ಲಿ ಬೆಂಕಿ ಆರಂಭವಾಗಿ, ಬಳಿಕ ತ್ವರಿತವಾಗಿ ಹರಡಿದೆಯೆಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ 40 ಅಗ್ನಿಶಾಮಕ ವಾಹನಗಳು ಧಾವಿಸಿದವು. ಕಟ್ಟಡದ ಅಗ್ನಿ ಸುರಕ್ಷಾ ವ್ಯವಸ್ಥೆ ಕೆಲಸ ಮಾಡುತ್ತಿರಲಿಲ್ಲ. ಆದರೂ 2 ತಾಸುಗಳೊಳಗೆ ಬೆಂಕಿಯನ್ನು ನಿಯಂತ್ರಿಸಿದ್ದೇವೆಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News