ಸೇನಾ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ

Update: 2016-07-19 17:27 GMT

ಹೊಸದಿಲ್ಲಿ,ಜು.19: ಸೇನೆಗೆ ಸೇರ್ಪಡೆಗೊಳ್ಳಲು ಸಲ್ಲಿಸುವ ಅರ್ಜಿಗಳನ್ನು ಈಗ ಅನ್‌ಲೈನ್ ಮೂಲಕ ಸ್ವೀಕರಿಸಲಾಗುತ್ತಿದೆಯೆಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಈ ಹಿಂದೆ ಅರ್ಜಿಗಳನ್ನು ಅಭ್ಯರ್ಥಿಗಳಿಂದ ನೇಮಕಾತಿ ನಡೆಯುವ ಸ್ಥಳದಲ್ಲೇ ಪಡೆಯುತ್ತಿದ್ದುದರಿಂದ ವಿಪರೀತ ನೂಕುನುಗ್ಗಲು ಉಂಟಾಗುತ್ತಿತ್ತು ಹಾಗೂ ಅದನ್ನು ನಿಯಂತ್ರಿಸಲು ಲಾಠಿಜಾರ್ಜ್ ಅಥವಾ ಅಶ್ರುವಾಯು ಪ್ರಯೋಗಿಸಿದ ಸಂದರ್ಭಗಳೂ ಇದ್ದವೆಂದು ಪಾರಿಕ್ಕರ್ ಸದನಕ್ಕೆ ತಿಳಿಸಿದರು. ಕಳೆದ ವರ್ಷದಿಂದ ಸೇನಾ ಸೇರ್ಪಡೆಗೆ ಅಭ್ಯರ್ಥಿಗಳಿಂದ ಅನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಆರಂಭಿಸಿದ್ದು, ಇದರಿಂದಾಗಿ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಸಂಘಟಿತವಾದ ರೀತಿಯಲ್ಲಿ ನಡೆಸಲು ಸಾಧ್ಯವಾಗಿದೆಯೆಂದು ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸೇನಾ ನೇಮಕಾತಿ ರ್ಯಾಲಿಗಳನ್ನು ನಡೆಸಲಾಗುವುದೆಂದು ಅವರು ತಿಳಿಸಿದರು. ಆದರೆ ಕೆಲವು ಪ್ರದೇಶಗಳಲ್ಲಿ ಅಭ್ಯರ್ಥಿಗಳ ಆನ್‌ಲೈನ್ ನೋಂದಣಿಗೆ ಸಮರ್ಪಕ ಸೌಲಭ್ಯಗಳಿಲ್ಲವೆಂದು ಕೆಲವು ಸದಸ್ಯರು ಕಳವಳ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ಪಾರಿಕ್ಕರ್, ಸದಸ್ಯರು ತನಗೆ ಈ ಬಗ್ಗೆ ನಿರ್ದಿಷ್ಟ ವಿವರಗಳನ್ನು ನೀಡಿದಲ್ಲಿ, ಅಂತಹ ಸ್ಥಳಗಳಲ್ಲಿ ನೇರ ನೋಂದಣಿ ವ್ಯವಸ್ಥೆಯನ್ನು ಒದಗಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
ದೇಶದ ಎಲ್ಲಾ ಜಿಲ್ಲೆಗಳಲ್ಲಿಯೂ ಕನಿಷ್ಠ ಪಕ್ಷ ವರ್ಷಕ್ಕೊಂದು ಸಲವಾದರೂ ಸೇನಾ ನೇಮಕಾತಿ ರ್ಯಾಲಿಗಳನ್ನು ನಡೆಸಲಾಗುವುದೆಂದು ಅವರು ಸದನಕ್ಕೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News