ಕರ್ಣನ್: ಘನತೆಯನ್ನು ಮರಳಿ ಪಡೆಯುವ ಹೋರಾಟದ ಕಥನ

Update: 2021-04-24 19:30 GMT

 ತಳಸಮುದಾಯದ assertionನ್ನು ತುಂಬು ವಿಶ್ವಾಸದಲ್ಲಿ ನಿರೂಪಿಸುವ ಮಾರಿ ಸೆಲ್ವರಾಜ್ ಈ ಆತ್ಮ ಗೌರವವನ್ನು ಮರಳಿ ಪಡೆಯುವ ಹೋರಾಟವನ್ನು ಇಡೀ ಸಿನೆಮಾದ ಚೌಕಟ್ಟಿಗೆ ಹೆಣೆದಿದ್ದಾರೆ. ಮದುರೈ ಜಿಲ್ಲೆಯ ಮೇಲೂರು ಪ್ರಾಂತದ ಕೋಡಿಯಾಂಕುಲಂ ಹಳ್ಳಿಯ ವಂಚಿತ ಸಮುದಾಯಗಳ ಕಥನವನ್ನು ಮೆಟಫರ್‌ಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಆ ಪ್ರದೇಶದ ಸ್ಥಳೀಯತೆ ಮತ್ತು ನೆಲದ ಸಂಸ್ಕೃತಿಯ ಅನೇಕ ಕತೆಗಳು, ಜನಪದೀಯ ಸಂಕಥನಗಳು, ಸಾಂಸ್ಕೃತಿಕ ರೂಹುಗಳನ್ನು ಚೆನ್ನಾಗಿ ಅರಿತಿರುವ ಮಾರಿ ಸೆಲ್ವರಾಜ್ ಅದನ್ನು ತನ್ನ ಕರ್ಣನ್ ಸಿನೆಮಾದ ಮುಖ್ಯವಾಹಿನಿ ನಿರೂಪಣೆಗೆ ಅದ್ಭುತವಾಗಿ ಅಳವಡಿಸಿಕೊಂಡಿದ್ದಾರೆ. 


‘ಪೆರಿಯೇರಂ ಪೆರುಮಾಳ್’ ಸಿನೆಮಾದಲ್ಲಿ ದಲಿತ ಸಮುದಾಯದ ಪ್ರೊಟಗಾನಿಸ್ಟ್ ‘‘ನಿಮಗೆ ನಮ್ಮನ್ನು ಅರ್ಥ ಮಾಡಿಕೊಳ್ಳಲು ಇನ್ನು ಎಷ್ಟು ಸಮಯ ಹಿಡಿಯುತ್ತದೆ?’’ ಎಂದು ಜಾತಿ ಸಮಾಜವನ್ನು ಪ್ರಶ್ನಿಸುತ್ತಾನೆ. ಮೇಲ್ಜಾತಿಗಳಿಗೆ ನೇಗಿಲನ್ನು ಹಿಡಿಯುವ ಕೈಗಳು ಕತ್ತಿಯನ್ನು ಹಿಡಿಯಬಲ್ಲವು ಎಂದು ವಿನಯದಿಂದ ಎಚ್ಚರಿಸುತ್ತಾನೆ. ಸಿನೆಮಾದ ಕ್ಲೈಮಾಕ್ಸ್‌ನಲ್ಲಿ ಬಲಿಷ್ಠ ಜಾತಿಗೆ ಸೇರಿದ ನಾಯಕಿಯ ತಂದೆಗೆ ‘‘ನೀವು ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವನ್ನೇ ಕೊಡಲಿಲ್ಲ, ನನ್ನ ಮನದಾಳದ ಮಾತುಗಳನ್ನು ಕೇಳಿಸಿಕೊಳ್ಳಲು ಸಹ ನೀವು ತಯಾರಿಲ್ಲ’’ ಎಂದು ಮಾರ್ಮಿಕವಾಗಿ ನುಡಿಯುತ್ತಾನೆ. ಎರಡು ವರ್ಷಗಳ ಹಿಂದೆ ಈ ಸಿನೆಮಾ ಮೂಲಕ ಮಾರಿ ಸೆಲ್ವರಾಜ್ ನಾನು ಬಂದಿದ್ದೇನೆ ಎನ್ನುವ ಛಾಪು ಮೂಡಿಸಿದ್ದರು. ಮುಖ್ಯವಾಗಿ ಅಂಬೇಡ್ಕರ್ ಕನ್ನಡಕದ ಮೂಲಕ ಜಾಗತೀಕರಣ ನಂತರ ಭಾರತದ ಬ್ರಾಹ್ಮಣ್ಯ-ಫ್ಯೂಡಲ್ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಚಿಸಿದರು. ಅಂಬೇಡ್ಕರ್‌ವಾದದ ಹೊಸ ದೃಷ್ಟಿಕೋನ ಮತ್ತು ಪ್ರಜ್ಞೆಯನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ವಿವರಿಸಿದರು. ಆದರೆ ಇಷ್ಟು ಮಾತ್ರ ಸಾಕೇ ಎನ್ನುವ ಪ್ರಶ್ನೆಗಳಿಗೆ ಉತ್ತರವೆಂಬಂತೆ ತಮ್ಮ ಎರಡನೇ ನಿರ್ದೇಶನದ ‘ಕರ್ಣನ್’ ಸಿನೆಮಾದ ಮೂಲಕ ‘‘ನಮ್ಮ ಘನತೆ ಮತ್ತು ಆತ್ಮಸಾಕ್ಷಿಯನ್ನು ಮರಳಿ ಪಡೆಯಲು ಬಂದಿದ್ದೇವೆ’’ ಎಂದು ಎದೆಗೆ ಗುಂಡು ಹೊಡೆದಂತೆ ಇಲ್ಲಿನ ಬ್ರಾಹ್ಮಣ್ಯ-ಫ್ಯೂಡಲ್ ವ್ಯವಸ್ಥೆಗೆ ಸ್ಪಷ್ಟ ಸಂದೇಶವನ್ನು, ಸ್ಟೇಟ್‌ಮೆಂಟ್‌ನ್ನು ಕೊಟ್ಟಿದ್ದಾರೆ. ಇದು ಶೋಷಿತ ಸಮುದಾಯಗಳ ಪ್ರತಿರೋಧದ ಕಥನ. ತಮ್ಮ ಘನತೆಯನ್ನು ರಕ್ಷಿಸಿಕೊಳ್ಳಲು ಶಕ್ತಿಶಾಲಿ ಪ್ರಭುತ್ವದ, ಬಲಾಢ್ಯ ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೂ ಮುಂದಾಗುತ್ತಾರೆ.

ಅಂಬೇಡ್ಕರ್ ಅವರ ಅಧ್ಯಯನ, ಹೋರಾಟ, ಸಂಘಟನೆ, ರಾಜಕಾರಣ ಎಲ್ಲದರ ಆಶಯವು ವಂಚಿತ ಸಮುದಾಯಗಳಿಗೆ "reclaimation of dignity'  ತಂದು ಕೊಡುವುದಾಗಿತ್ತು. ‘ಕರ್ಣನ್’ ಸಿನೆಮಾದ ನಿರೂಪಣೆಯು ‘‘ನಮಗೆ ಘನತೆಯನ್ನು ಮರಳಿ ಕೊಡಿ-reclaimation of dignity'' ಎಂದು ಶೋಷಿತ ಸಮುದಾಯಗಳ ದನಿಯನ್ನು ಗಟ್ಟಿಯಾಗಿ, ದೃಢವಾಗಿ ಧ್ವನಿಸುತ್ತದೆ. ತಳಸಮುದಾಯದ assertionನ್ನು ತುಂಬು ವಿಶ್ವಾಸದಲ್ಲಿ ನಿರೂಪಿಸುವ ಮಾರಿ ಸೆಲ್ವರಾಜ್ ಈ ಆತ್ಮ ಗೌರವವನ್ನು ಮರಳಿ ಪಡೆಯುವ ಹೋರಾಟವನ್ನು ಇಡೀ ಸಿನೆಮಾದ ಚೌಕಟ್ಟಿಗೆ ಹೆಣೆದಿದ್ದಾರೆ. ಮದುರೈ ಜಿಲ್ಲೆಯ ಮೇಲೂರು ಪ್ರಾಂತದ ಕೋಡಿಯಾಂಕುಲಂ ಹಳ್ಳಿಯ ವಂಚಿತ ಸಮುದಾಯಗಳ ಕಥನವನ್ನು ಮೆಟಫರ್‌ಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಆ ಪ್ರದೇಶದ ಸ್ಥಳೀಯತೆ ಮತ್ತು ನೆಲದ ಸಂಸ್ಕೃತಿಯ ಅನೇಕ ಕತೆಗಳು, ಜನಪದೀಯ ಸಂಕಥನಗಳು, ಸಾಂಸ್ಕೃತಿಕ ರೂಹುಗಳನ್ನು ಚೆನ್ನಾಗಿ ಅರಿತಿರುವ ಮಾರಿ ಸೆಲ್ವರಾಜ್ ಅದನ್ನು ತನ್ನ ಕರ್ಣನ್ ಸಿನೆಮಾದ ಮುಖ್ಯವಾಹಿನಿ ನಿರೂಪಣೆಗೆ ಅದ್ಭುತವಾಗಿ ಅಳವಡಿಸಿಕೊಂಡಿದ್ದಾರೆ.

‘ಕೋಡಿಯಾಂಕುಲಂ’ ಎಂಬ ಗ್ರಾಮವೇ ದಲಿತ ಸಮುದಾಯದ ಪ್ರತಿನಿಧಿಯಂತಿದೆ. ಈ ಹಳ್ಳಿಯ ಪ್ರವೇಶ ದ್ವಾರದಲ್ಲಿ ರುಂಡವಿಲ್ಲದ ದೇಹದ ಪ್ರತಿಮೆ ಸ್ಥಾಪಿಸಲ್ಪಟ್ಟಿದೆ. ಅಂದರೆ ಈ ಹಳ್ಳಿಗೆ ಭೌಗೋಳಿಕತೆಯಿದೆ ಆದರೆ ಆಸ್ತಿತ್ವವಿಲ್ಲ, ಅಸ್ಮಿತೆಯಿಲ್ಲ. ಜಾತಿ ತಾರತಮ್ಯ ಮತ್ತು ಪೊಲೀಸ್ ದೌರ್ಜನ್ಯದಿಂದ ಇಡೀ ಗ್ರಾಮ ನಲುಗುತ್ತಿದೆ. ಪೊಲೀಸರು ಇಲ್ಲಿನ ಗ್ರಾಮಸ್ಥರನ್ನು ಅರಾಜಕರು ಎಂದು ಹಂಗಿಸುತ್ತಾರೆ. ಆ ಗ್ರಾಮದಲ್ಲಿ ಮುಂಗಾಲುಗಳನ್ನು ಕಟ್ಟಿರುವ ಕತ್ತೆಯೊಂದು ಸದಾ ಕುಂಟುತ್ತಿರುತ್ತದೆ. ಇದು ಇಡೀ ಗ್ರಾಮವೇ ಜಾತಿಯ ಸಂಕೋಲೆಗಳಿಂದ ಬಿಗಿಯಲ್ಪಟ್ಟಿರುವುದನ್ನು ಸಂಕೇತಿಸುತ್ತದೆ. ರಣಹದ್ದು ಎಗರಿ ಬಂದು ಕೋಳಿಮರಿಯನ್ನು ಕಚ್ಚಿಕೊಂಡು ಹೋಗುವ ದೃಶ್ಯವು ಜಾತಿ ದೌರ್ಜನ್ಯದ ಹಿಂಸೆಯ ಅನ್ಯೋಕ್ತಿಯಾಗಿದೆ. ಮೀನು ಹಿಡಿಯುವ ಗಾಳವು ನ್ಯಾಯವನ್ನು ಕೇಳುವ ದಮನಿತರು ಪ್ರಭುತ್ವದ ದಬ್ಬಾಳಿಕೆಗೆ ಬಲಿಪಶುಗಳಾಗುವ ದುರಂತವನ್ನು ಸಂಕೇತಿಸುತ್ತದೆ.

ದುರ್ಯೋಧನ, ದ್ರೌಪದಿ, ಕರ್ಣ, ಮಾದಸ್ವಾಮಿ ಎನ್ನುವ ಪುರಾಣ ಕತೆಗಳ ಹೆಸರುಗಳನ್ನು ಹೊಂದಿರುವ ಅಲ್ಲಿನ ಪಾತ್ರಗಳ ದಿಟ್ಟತೆ ಮತ್ತು ಶೋಷಣೆಯನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆ ಇಡೀ ಸಿನೆಮಾದ ಉದ್ದಕ್ಕೂ ಪ್ರವಹಿಸುತ್ತಿರುತ್ತದೆ. ಸೂತಪುತ್ರ ಎಂದು ಕರೆಯಲ್ಪಡುವ ಮಹಾಭಾರತದ ಕರ್ಣ ಶೌರ್ಯ, ಸಾಹಸಗಳನ್ನು ಮೈಗೂಡಿಸಿಕೊಂಡಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳು ಪ್ರತಿ ಸಂದರ್ಭದಲ್ಲಿ ಎದುರಾಗುತ್ತಾ ಆತನನ್ನು ಅವಮಾನಿಸುತ್ತಿರುತ್ತವೆ. ಆದರೆ ಫ್ಲಾಶ್‌ಬ್ಯಾಕ್‌ನ ಮೂಲಕ ಕರ್ಣ ಹುಟ್ಟಿನಿಂದ ಕ್ಷತ್ರಿಯ ಎಂದು ಬಹಿರಂಗವಾದಾಗ ‘‘ಓಹ್ ಹಾಗಿದ್ದರೆ ಆತ ಶೂದ್ರನಲ್ಲ, ಅದಕ್ಕೇ ಆತನಲ್ಲಿ ಆ ಶೌರ್ಯವಿದೆ’’ ಎಂದು ಎಲ್ಲರಲ್ಲಿ ಸಮಾಧಾನ ಮೂಡುತ್ತದೆ.

ಅದು ವರ್ಣಾಶ್ರಮದ ಜ್ವಲಂತ ನಿದರ್ಶನ. ಆದರೆ ಸೆಲ್ವರಾಜ್‌ರ ಕರ್ಣನಿಗೆ ಜಾತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಆತನ ಬಂಡಾಯಕ್ಕೆ ಯಾವುದೇ ಜಾತಿಯ ಹಂಗಿಲ್ಲ. ತಳಸಮುದಾಯದಲ್ಲಿ ಹುಟ್ಟಿದ ಆತ ಶೌರ್ಯವಂತ ಮತ್ತು ಆತನಿಗೆ ಯಾವುದೇ ಕವಚ ಕುಂಡಲಗಳಿಲ್ಲ. ಆದರೆ ಮಹಾಭಾರತದ ಕರ್ಣನಂತೆ ಈತನೂ ಸಹ ಸಮಾನತೆ ಮತ್ತು ಬಂಧುತ್ವಕ್ಕಾಗಿ ಹೋರಾಡುತ್ತಾನೆ. ಈ ಕರ್ಣನ್ ದಮನಿತ ಸಮುದಾಯಗಳ ರಕ್ಷಣೆಗೆ ಕತ್ತಿಯನ್ನು ಝಳಪಿಸುವ ಧೀರ. ಕುಪಿತ ಯುವಕ.

ಆರಂಭದ ದೃಶ್ಯದಲ್ಲಿ ಕರ್ಣನ ತಂಗಿಯು ರಸ್ತೆಯ ಮೇಲೆ ಮೂರ್ಛೆರೋಗದಿಂದ ಅನಾಥಳಾಗಿ ವಿಲವಿಲನೆ ಒದ್ದಾಡುತ್ತಿರುವುದು ಆ ಗ್ರಾಮದ ವಾಸ್ತವವನ್ನು ಬಿಚ್ಚಿಡುವ ರೂಪಕ. ಅಲ್ಲಿ ಚಲಿಸುವ ಗಾಡಿಗಳು, ಬಸ್ಸುಗಳಿಂದ ಯಾವುದೇ ನೆರವು ದೊರಕದೆ ಸಾವನ್ನಪ್ಪುತ್ತಾಳೆ. ಆದರೆ ಆಕೆ ಸಾಯುವುದಿಲ್ಲ. ಮುಖವಿಲ್ಲದ ದೈವವಾಗುತ್ತಾಳೆ. ಮಾಂತ್ರಿಕ ವಾಸ್ತವತೆಯ ರೂಪದಲ್ಲಿ ಶೋಷಣೆಯ ವಿರುದ್ಧದ ಚೈತನ್ಯವಾಗುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಗೋಡೆಯ ಮೇಲೆ ದೈವದ ಚಿತ್ರ ಬಿಡಿಸುತ್ತಿರುವ ಆ ಗ್ರಾಮದ ಕಲಾವಿದರು ಮುಖವನ್ನು ಚಿತ್ರಿಸದೆ ಅಲ್ಲಿಗೆ ನಿಲ್ಲಿಸುತ್ತಾರೆ. ಈ ಮುಖರಹಿತ ತೋರಿಕೆಯು ಈ ಸಿನೆಮಾದ ಸ್ಥಾಯೀಭಾವ. ಆದರೆ ತಳಸಮುದಾಯದ ಗ್ರಾಮಸ್ಥರು ‘ಆತ್ಮಗೌರವ’ದ ಮುಖವುಳಿಸಿಕೊಳ್ಳಲು ನಡೆಸುವ ಹೋರಾಟಕ್ಕೆ ಕರ್ಣ ಮುಖವಾಗುತ್ತಾನೆ.

ಈ ಗ್ರಾಮ ಶೋಷಣೆಯನ್ನು ತೊಲಗಿಸಲು ಯೋಧನನ್ನು ಕಳುಹಿಸು ಎಂದು ದೈವವನ್ನು ಬೇಡಿಕೊಳ್ಳುವ ‘ಕಂಡಾ ವರಸೊಲ್ಲುಂಗ’ ಎನ್ನುವ ಜನಪದ ಹಾಡಿನ ಮೂಲಕ ಸಿನೆಮಾ ಆರಂಭವಾಗುತ್ತದೆ. ಪೋಡಿಯಾಂಕುಲಂ ಗ್ರಾಮದ ಹಿರಿಯರು ಆಸ್ತಿತ್ವಕ್ಕಾಗಿ ಪ್ರಭುತ್ವ-ವ್ಯವಸ್ಥೆಯ ಶೋಷಣೆಯನ್ನು ಮೌನವಾಗಿ ಒಪ್ಪಿಕೊಂಡರೆ ಕರ್ಣನ್ ಮತ್ತು ಹದಿಹರೆಯದವರು ಬದಲಾವಣೆಗಾಗಿ ತುಡಿಯುತ್ತಿರುತ್ತಾರೆ. ಪ್ರಭುತ್ವವು ಆ ಗ್ರಾಮಕ್ಕೆ ವಾಸಿಸಲು ತುಂಡು ಭೂಮಿಯನ್ನು ಕೊಟ್ಟಿದೆ. ಅದರಾಚೆಗೆ ಮತ್ಯಾವುದೇ ಸೌಲಭ್ಯಗಳಿಲ್ಲ. ಅಲ್ಲಿ ಬಸ್ ನಿಲ್ದಾಣವಿಲ್ಲ ಮತ್ತು ಕರ್ಣನ್ ಹಾಗೂ ಗ್ರಾಮಸ್ಥರು ಈ ಬಸ್ ನಿಲ್ದಾಣಕ್ಕಾಗಿ ನಡೆಸುವ ಹೋರಾಟವು ಒಂದು ದೈನಂದಿನ ಅವಶ್ಯಕತೆ. ಇದು ದಲಿತರ ಆತ್ಮಗೌರವವನ್ನು ಮರಳಿ ಪಡೆಯುವ ಪ್ರತಿರೋಧದ ಸಂಕೇತವಾಗಿದೆ. ಇದು ಅನೇಕ ತಿರುವುಗಳನ್ನು ಪಡೆದುಕೊಂಡು ದುರಂತದಲ್ಲಿ ಅಂತ್ಯಗೊಳ್ಳುತ್ತದೆ.

‘‘ಬಸ್ ನಿಲ್ದಾಣಕ್ಕಾಗಿ ನಡೆಸುವ ಗಲಾಟೆಯ ಕಾರಣಕ್ಕೆ ಪ್ರಭುತ್ವವು ಸಿಟ್ಟಿಗೇಳುವುದಿಲ್ಲ. ಆದರೆ ಶತಮಾನಗಳಿಂದ ತಲೆ ಬಗ್ಗಿಸಿದ ಶೋಷಿತ ಸಮುದಾಯವು ಈಗ ಮುಖ ಎತ್ತಿ ಮಾತನಾಡತೊಡಗಿರುವುದು, ತಲೆಗೆ ಸುತ್ತಿದ ಮುಂಡನ್ನು ಬಿಚ್ಚಲು ನಿರಾಕರಿಸುವುದು, ತೆವಳಲು ನಿರಾಕರಿಸುತ್ತಿರುವುದು ಬಲಿಷ್ಠ ಜಾತಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ’’ ಎಂದು ಪೋಡಿಯಾಂಕುಲಂ ಗ್ರಾಮಸ್ಥರಿಗೆ ಮನವರಿಕೆಯಾಗಿದೆ. ಆದರೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದು ಆತ್ಮಹತ್ಯೆ ಮಾಡಿಕೊಂಡಂತೆ ಎನ್ನುವ ವಾಸ್ತವ ಸಹ ಗ್ರಾಮಸ್ಥರಿಗೆ ಗೊತ್ತಿದೆ. ಈ ಅರಿವು ಮತ್ತು ಪ್ರಜ್ಞೆಯನ್ನು ಸೆಲ್ವರಾಜ್ ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಕ್ಲೈಮಾಕ್ಸ್‌ನಲ್ಲಿ ಕರ್ಣನ್ ಇನ್‌ಸ್ಪೆಕ್ಟರ್‌ಗೆ ‘‘ನಿನ್ನ ಅಪ್ಪನ ಹೆಸರು ಕಂದಯ್ಯ, ನೀನು ಕನ್ನಾಬಿರಾನ್ ಎಂದು ಹೆಸರಿಟ್ಟುಕೊಳ್ಳಬಹುದು. ಆದರೆ ನಾನ್ಯಾಕೆ ಮಾದಸ್ವಾಮಿಯ ಮಗ ಕರ್ಣನ್ ಎಂದು ಹೆಸರಿಟ್ಟುಕೊಳ್ಳಬಾರದು’’ ಎಂದು ಪ್ರಶ್ನಿಸುತ್ತಾನೆ. ಇದು ‘ಘನತೆಯನ್ನು ಮರಳಿ ಪಡೆಯುವುದಕ್ಕಾಗಿ’ ನಡೆಸುವ ಪ್ರತಿರೋಧ. ನಿರ್ದೇಶಕ ಮಾರಿ ಸೆಲ್ವರಾಜ್ ‘‘ನಾವು ಸುಮ್ಮನಿಲ್ಲ, ಎಚ್ಚೆತ್ತಿದ್ದೇವೆ’’ ಎಂದು ಹೇಳುತ್ತಿದ್ದಾರೆ. ತುಳಿತಕ್ಕೊಳಗಾದವರು ಹಾಡು, ತಮಟೆ, ಕುಣಿತದ ಸಾಂಸ್ಕೃತಿಕ ಸಂಭ್ರಮದ ಮೂಲಕ ಸಮಷ್ಠಿ ಪ್ರಜ್ಞೆಯಲ್ಲಿ ಕಂಡುಕೊಳ್ಳುವ ಪ್ರೀತಿ ಮತ್ತು ಅನುಭೂತಿಯನ್ನು ಮಾರ್ಮಿಕವಾಗಿ ನಿರೂಪಿಸಿದ್ದಾರೆ.

ಇಲ್ಲಿ ಕತೆ ಹೆಣೆಯುವಿಕೆಯಲ್ಲಿ, ನಿರೂಪಣೆಯಲ್ಲಿ ಕೆಲ ತೊಡಕುಗಳಿವೆ. ಶೋಷಣೆಯನ್ನು ತನ್ನ ನರನಾಡಿಗಳಲ್ಲಿ ಹುದುಗಿಸಿಕೊಂಡಿರುವ ವ್ಯವಸ್ಥೆಯ ಕ್ರೌರ್ಯವು ಎಲ್ಲಿಯೂ ಬಿಚ್ಚಿಕೊಳ್ಳದೆ ಬದಲಿಗೆ ಪೊಲೀಸ್ ಇಲಾಖೆಯ ದೌರ್ಜನ್ಯವನ್ನು ಅದರ ಪ್ರತಿನಿಧಿಯಂತೆ ನಿರೂಪಿಸಿರುವುದು ಸಮಸ್ಯಾತ್ಮಕವಲ್ಲವೇ ಎನ್ನುವ ಪ್ರಶ್ನೆಗಳು ಕೇಳಿಬಂದಿದೆ. ಆದರೆ ಇದಕ್ಕೂ ಕಾರಣವಿದೆ. ಮೂಲದಲ್ಲಿ ಈ ಸಿನೆಮಾವು 1990ರ ದಶಕದ ಮಧ್ಯಭಾಗದಲ್ಲಿ ದಲಿತರು ವಾಸಿಸುವ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋಡಿಯಾಂಕುಲಂ ಹಳ್ಳಿಯಲ್ಲಿ ನಡೆದ ಹಿಂಸಾಕಾಂಡವನ್ನು ಆಧರಿಸಿದೆ ಎನ್ನಲಾಗುತ್ತಿದೆ. 500ಕ್ಕೂ ಹೆಚ್ಚಿನ ಸಂಖ್ಯೆಯ ಪೊಲೀಸರು ಆ ಹಳ್ಳಿಯ ಮೇಲೆ ದಾಳಿ ಮಾಡಿ ದಲಿತರ ಮನೆಗಳಲ್ಲಿನ ಟಿವಿ, ಫ್ಯಾನ್, ಟೇಪ್ ರೆಕಾರ್ಡರ್, ಮೋಟಾರ್ ಬೈಕ್, ಟ್ರಾಕ್ಟರ್, ಕೃಷಿ ಉಪಕರಣಗಳು ಮುಂತಾದವುಗಳನ್ನು ನಾಶಮಾಡಿ ಅಲ್ಲಿನ ಆಸ್ತಿಯನ್ನು ಧ್ವ್ವಂಸಗೊಳಿಸಿದರು. ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದರು. ಬಲಿಷ್ಠ ಜಾತಿಗಳು ಮತ್ತು ಪ್ರಭುತ್ವದ ನಿರ್ದೇಶನದ ಮೇಲೆ ಪೊಲೀಸರು ಈ ಹಿಂಸಾಕಾಂಡ ನಡೆಸಿದರು. ಇದಕ್ಕೆ ಒಂದು ಹಿನ್ನೆಲೆಯೂ ಇದೆ.

ಈ ದಾಳಿಗೂ ಮುಂಚೆ ಸಮೀಪದ ವೀರಸಿಂಗಮಣಿ ಗ್ರಾಮದ ಬಲಿಷ್ಠ ಮಾರವರ್ ಜಾತಿಯ ಹುಡುಗರು ದಲಿತ ಸಮುದಾಯದ ಬಸ್ ಚಾಲಕನನ್ನು ಥಳಿಸಿದ್ದರು. ಈ ಘಟನೆಯಿಂದ ಕುಪಿತರಾದ ದಲಿತರು ನ್ಯಾಯಕ್ಕಾಗಿ ಆ ಗ್ರಾಮದವರ ಜೊತೆ ಜಗಳವಾಡಿದರು ಮತ್ತು ಕೈ ಮಿಲಾಯಿಸಿದರು ಎಂದು ಹೇಳಲಾಗುತ್ತದೆ. ಒಟ್ಟಾರೆಯಾಗಿ ದಲಿತರು ಜೀನ್ಸ್ ಹಾಕುವಂತಿಲ್ಲ, ಟಿವಿ, ಫ್ರಿಡ್ಜ್, ಗ್ರೈಂಡರ್ ಮುಂತಾದ ಆಧುನಿಕ ಸೌಲಭ್ಯಗಳನ್ನು ಬಳಸುವಂತಿಲ್ಲ ಎನ್ನುವ ಆ ಜಾತಿ-ಫ್ಯೂಡಲ್ ಮನೋಭಾವದ ಕಾರಣದಿಂದ ಆ ಗ್ರಾಮದಲ್ಲಿ ಹಿಂಸಾಕಾಂಡ ನಡೆಯಿತು ಎನ್ನುವ ವಾಸ್ತವವನ್ನು ಮಾರಿ ಸೆಲ್ವರಾಜ್ ಕ್ಲೈಮಾಕ್ಸ್ ನಲ್ಲಿ ನಿರೂಪಿಸಿದ್ದಾರೆ. ಆದರೆ ಸಿನೆಮಾ ಈ ಘಟನೆಯನ್ನು ಆಧರಿಸಿದೆ ಎಂದು ಸಂಬಂಧಪಟ್ಟವರು ಎಲ್ಲಿಯೂ ಹೇಳಿದಂತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಮಾರಿ ಸೆಲ್ವರಾಜ್ ‘‘ಕರ್ಣನ್ ಕಾಲ್ಪನಿಕ ಕತೆಯನ್ನು ಆಧರಿಸಿದೆ. ಈ ಸಿನೆಮಾದಲ್ಲಿ ಸತ್ಯದ ಘಟನೆಗಳಿರಬಹುದು, ಆದರೆ ನಿರ್ದೇಶಕರು ನಿಜ ಘಟನೆಗಳನ್ನು ಯಥಾವತ್ತಾಗಿ ಚಿತ್ರಿಸಬೇಕೆಂದು ನಿಯಮವಿಲ್ಲ. ನಾವು ನೂರಾರು ನಿಜ ಬದುಕಿನ ಕತೆಗಳನ್ನು, ಘಟನೆಗಳನ್ನು ಕೇಳುತ್ತಿರುತ್ತೇವೆ. ಅವು ಸಿನೆಮಾದ ಚಿತ್ರಕತೆಗೆ ಸ್ಫೂರ್ತಿಯಾಗುತ್ತವೆ’’ ಎಂದು ಹೇಳಿದ್ದಾರೆ. ಇವೆಲ್ಲವೂ ನಿರ್ದೇಶಕ ಜಾತಿ-ಫ್ಯೂಡಲ್ ಸಮಾಜದ ಎದೆಗೆ ತಾಕುವಂತೆ ಹೇಳಬಯಸುವ ದಿಟ್ಟ ಸ್ಟೇಟ್‌ಮೆಂಟ್‌ಗೆ ಮಿತಿಯಾಗುವುದಿಲ್ಲ ಮತ್ತು ಈ ಸಿನೆಮಾದ ಕೆಲ ದೃಶ್ಯಗಳು ಮತ್ತು ಕ್ಲೈಮಾಕ್ಸ್‌ನ್ನು ಆಧರಿಸಿ ಹೀರೋ ವಿಜೃಂಭಣೆ ಎನ್ನುವ ತೀರ್ಮಾನಕ್ಕೆ ಬರುವುದು ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಸಾಮಾಜಿಕ ಬದ್ಧತೆ ಮತ್ತು ಸಮಷ್ಟಿ ಪ್ರಜ್ಞೆಯ ಕುರಿತಾದ ಆಳವಾದ ನಂಬಿಕೆಯನ್ನು ಅನುಮಾನಿಸಿದಂತೆ ಮತ್ತು ಜಾತಿ ತಾರತಮ್ಯದ ಸೂಕ್ಷ್ಮತೆಯ ಅವಜ್ಞತೆ ಎನ್ನಬಹುದು.

ಇದೆಲ್ಲದರಾಚೆ ‘ಕರ್ಣನ್’ ಸಿನೆಮಾವನ್ನು ಭಾವತೀವ್ರತೆಯಲ್ಲಿ ಅರಿತುಕೊಳ್ಳಬೇಕು ಮತ್ತು ಸಂವೇದಿಸಬೇಕು. "reclaimation of dignity' ಎಲ್ಲಾ ಮಗ್ಗಲುಗಳನ್ನು, ಅದರ ಆಶಯಗಳನ್ನು ಮತ್ತು ಸಂಕೋಲೆಗಳನ್ನು ಕಳಚಿಕೊಳ್ಳುವ ತುರ್ತನ್ನು ಅರಿತ ಕುಪಿತ ಯುವಕ ಕರ್ಣನ್ ಪಾತ್ರವನ್ನು ಧನುಷ್ ಉಸಿರಾಡಿದ್ದಾನೆ, ಅದರೊಳಗೆ ಪರಕಾಯ ಪ್ರವೇಶ ಮಾಡಿದ್ದಾನೆ. ಆ ಪಾತ್ರದ ಜೀವಂತಿಕೆಯನ್ನು ಕಾಪಿಟ್ಟಿದ್ದಾನೆ. ಕರ್ಣನ್‌ನ ಅಕ್ಕ ಪದ್ಮಿನಿಯಾಗಿ ಲಕ್ಷ್ಮೀಪ್ರಿಯಾ ಮತ್ತು ಆತನ ತಾತ ಯಮರಾಜನ್ ಆಗಿ ಲಾಲ್ ಇಬ್ಬರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ ಮತ್ತು ಆ ಪಾತ್ರಗಳು ಕೊಂಚವೂ ಮುಕ್ಕಾದಂತೆ ಜೀವಂತಿಕೆಯ ಸ್ಪರ್ಶ ಕೊಟ್ಟಿರುವ ಇವರಿಬ್ಬರ ಈ ನೆಲದ ಈಸ್ತಟಿಕ್ ಪ್ರಜ್ಞೆ ಅನನ್ಯ. ಅದನ್ನು ನೋಡಿಯೇ ಅನುಭವಿಸಬೇಕು. ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಮಾಂತ್ರಿಕತೆಯನ್ನು ಸೃಷ್ಟಿಸಿದ್ದಾರೆ. ಇದುವರೆಗಿನ ಸಿದ್ಧ ಮಾದರಿಗಳನ್ನು ಒಡೆದು delearning and deconstructing ಮೂಲಕ ಮರು ಕಟ್ಟುವಿಕೆಯ ಹೊಸ ಹೆಜ್ಜೆ ಹೊಸ ಹಾದಿಯನ್ನು ತುಳಿದಿರುವ ಮಾರಿ ಸೆಲ್ವರಾಜ್ ನಮ್ಮ ಕಾಲದ ಒಂದು ವಿಸ್ಮಯ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News