ಪ್ರಶಾಂತ್ ಕಿಶೋರ್, ರಾಜಕೀಯ ತಂತ್ರಗಾರಿಕೆ ಮತ್ತು 2024 ಮಿಷನ್

Update: 2022-05-03 09:37 GMT

ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷಗಳ ಹಿರಿಯ ನಾಯಕರಿಂದ ತೊಡಗಿ ಸಾಮಾನ್ಯ ಕಾರ್ಯಕರ್ತರವರೆಗೆ ಹಾಗೂ ಜನಸಾಮಾನ್ಯರೂ ಕೂಡಾ ನಂಬಿರುವುದು ಏನೆಂದರೆ ಧಾರ್ಮಿಕ ಧ್ರುವೀಕರಣ ಪ್ರಸ್ತುತ ಚುನಾವಣಾ ರಾಜಕೀಯದ ಕೇಂದ್ರ ಶೈಲಿ ಆಗಿದೆ. ಎಲ್ಲಾ ಪಕ್ಷಗಳು ಸತತವಾಗಿ ಚುನಾವಣೆಗಳನ್ನು ಧಾರ್ಮಿಕ ಧ್ರುವೀಕರಣದ ಆಧಾರದ ಮೇಲೆಯೇ ಎದುರಿಸುತ್ತಿವೆ ಎಂಬುದಾಗಿದೆ.



ಭಾರತದ ಇತ್ತೀಚಿನ ರಾಜಕೀಯ ಚುನಾವಣಾ ರಾಜಕೀಯ ಸಂದರ್ಭದಲ್ಲಿ ಚುನಾವಣಾ ಸ್ಟ್ರಾಟಜಿಸ್ಟ್ ಅಥವಾ ತಂತ್ರಗಾರ ಪ್ರಶಾಂತ್ ಕಿಶೋರ್ ಅತೀ ಚರ್ಚೆಯಲ್ಲಿರುವ ಒಂದು ಹೆಸರು; ರಾಷ್ಟ್ರೀಯ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚಿನ ಪ್ರಚಾರ ಮತ್ತು ಆದ್ಯತೆಯನ್ನು ಪಡೆದುಕೊಂಡು ಕೇಂದ್ರ ಬಿಂದುವಾಗಿ ಚರ್ಚಿಸಲ್ಪಟ್ಟ ಚುನಾವಣಾ ತಂತ್ರಗಾರ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪದವಿಗೇರಲು ನಡೆದ ಚುನಾವಣೆಯಲ್ಲಿನ ಮೋದಿ ಪರ ಚುನಾವಣಾ ತಂತ್ರಗಾರಿಕೆಯಿಂದ ತೊಡಗಿ, 2015ರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್, ಆಂಧ್ರದ ಜಗನ್‌ಮೋಹನ್ ರೆಡ್ಡಿ, ಪಂಜಾಬ್‌ನ ಅಮರಿಂದರ್ ಸಿಂಗ್, ದಿಲ್ಲಿಯಲ್ಲಿನ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಮುಂತಾದವರು ಮುಖ್ಯಮಂತ್ರಿಗಳಾಗಿ ವಿಜಯ ಗಳಿಸಲು ಪ್ರಶಾಂತ್ ಕಿಶೋರ್ ಮಾಡಿದ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ್‌ಗೆ ಚುನಾವಣಾ ವಿಶ್ಲೇಷಣೆ ಮತ್ತು ತಂತ್ರಗಾರಿಕೆಯಲ್ಲಿ ವಿಶೇಷವಾದ ಆದ್ಯತೆ ಮತ್ತು ಪ್ರಚಾರ ಲಭ್ಯವಾಗಿದೆ. ಬೇರೆಯವರಿಗೆ ಹೋಲಿಸಿದರೆ ಚುನಾವಣಾ ತಂತ್ರಗಾರಿಕೆಗೆ ಪ್ರೊಫೆಶನಲ್ ಟಚ್ ಕೊಟ್ಟದ್ದು ಪ್ರಶಾಂತ್‌ರ ವಿಶೇಷತೆ ಎಂಬಂತೆ ಕಂಡುಬರುತ್ತಿದೆ. ಪ್ರಶಾಂತ್‌ರ ಜೊತೆಗೆ ಇರುವ ಐಪ್ಯಾಕ್ ಸಂಸ್ಥೆ ರಾಜಕೀಯ ತಂತ್ರಗಾರಿಕೆ ರೂಪಿಸುವಿಕೆ ಮತ್ತು ಜಾರಿಯಲ್ಲಿನ ಕಾರ್ಯನಿರ್ವಾಹಕ ಶಕ್ತಿಯಾಗಿದೆ. ಸುಮಾರು 5,000 ಜನ-ವಿವಿಧ ಸಂಶೋಧನಾ-ಉನ್ನತ ಶಿಕ್ಷಣ ಕೇಂದ್ರಗಳಲ್ಲಿ- ಸಂಶೋಧನೆಗಳನ್ನು ಮಾಡಿದ ಅನುಭವಸ್ಥರು, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಸಮೂಹ ಮಾಧ್ಯಮ, ಕಲೆ-ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅನುಭವ ಇರುವ ನೌಕರರು ಐಪ್ಯಾಕ್‌ನಲ್ಲಿ ಉದ್ಯೋಗಿಗಳು ಆಗಿದ್ದಾರೆ ಎಂಬುದಾಗಿ ಹೇಳಲಾಗಿದೆ.

ಚುನಾವಣಾ ತಂತ್ರಗಾರಿಕೆ ಅಂದರೇನು?
ಇತ್ತೀಚೆಗೆ ಅತ್ಯಂತ ಹೆಚ್ಚಿನ ಗಮನ ಪಡೆದುಕೊಂಡಿರುವ ಚುನಾವಣಾ ತಂತ್ರಗಾರಿಕೆ ಅಂದರೆ ಏನು ಅಂತ ತಿಳಿದುಕೊಳ್ಳುವುದು ಕೂಡಾ ಮುಖ್ಯ ಆಗುತ್ತದೆ. ಯಾಕೆಂದರೆ ಚುನಾವಣಾ ತಂತ್ರಗಾರಿಕೆ ಅಂದರೆ ಮಂತ್ರ ದಂಡದಿಂದ ಯಾವುದೋ ಪಕ್ಷವನ್ನು ಗೆಲ್ಲಿಸುವುದು ಅಂತಲೇ ಜನ ಸಾಮಾನ್ಯರು ನಂಬಿರುವಂತಿದೆ ಅಥವಾ ಚುನಾವಣಾ ತಂತ್ರಗಾರಿಕೆ ಅಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೋ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವುದು ಅಂತ ಸಾಮಾನ್ಯೀಕರಿಸಲಾಗಿದೆ ಅಥವಾ ಹಾಗೆಯೇ ಸಾಮಾನ್ಯವಾಗಿ ನಂಬಲಾಗಿದೆ. ಇದು ವಾಸ್ತವ ಅಲ್ಲ. ರಿಯಲ್ ಡೇಟಾವನ್ನು ಪ್ರಾಥಮಿಕ ಮೂಲಗಳಿಂದ ಸಂಗ್ರಹಿಸಿ ಅವುಗಳ ಆಧಾರದ ಮೇಲೆ ಚುನಾವಣಾ ಪ್ರಚಾರದ ನೀತಿ ನಿಯಮಗಳನ್ನು/ಉದ್ದೇಶಗಳನ್ನು/ತಂತ್ರಗಾರಿಕೆಯನ್ನು ಮತ್ತು ಕೊನೆಯದಾಗಿ ಚುನಾವಣಾ ಮೆಟಿರಿಯಲ್ಸ್ ಆಥವಾ ಕಂಟೆಂಟ್ಸ್ ಅನ್ನು ಸೃಷ್ಟಿಸಿ ಅದರ ಪ್ರಕಾರ ನಿಯಂತ್ರಿತ ಹಾಗೂ ನಿಗದಿತ ಮತ್ತು ಮುಖ್ಯವಾಗಿ ಫಲಿತಾಂಶ ಉದ್ದೇಶಿತ ಚುನಾವಣಾ ಪ್ರಚಾರ ಅಭಿಯಾನವನ್ನು ನಡೆಸುವುದೇ ಆಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಮೈಕ್ರೋ-ಲೆವೆಲ್‌ನಲ್ಲಿ ಜನರು ಮತ್ತು ಮತದಾರರ ನಡುವೆ ನೆಗೆಟೀವ್ ಆಗಿ ಬಿಂಬಿಸಲ್ಪಟ್ಟ ನಾಯಕರ ಇಲ್ಲವೇ ಪಕ್ಷದ ಇಮೇಜ್ ಮತ್ತು ಜನ ಅಭಿಪ್ರಾಯವನ್ನು ಪಾಸಿಟಿವ್ ಆಗಿ ಬದಲಾಯಿಸಿ ಚುನಾವಣೆಯಲ್ಲಿ ಫಲಿತಾಂಶ ಇಲ್ಲವೇ ಯಶಸ್ಸು ತಂದುಕೊಡುವುದೇ ರಾಜಕೀಯ ತಂತ್ರಗಾರಿಕೆ ಆಗಿದೆ. ಚುನಾವಣಾ ತಂತ್ರಗಾರಿಕೆ ಎಂಬುದು ಹೊಸದಲ್ಲ. ಎಲ್ಲಾ ಪಕ್ಷಗಳಲ್ಲೂ ಇನ್-ಹೌಸ್ ಚುನಾವಣಾ ತಂತ್ರಗಾರರು ಸಹಜವಾಗಿಯೇ ಇದ್ದಾರೆ. ಈ ಎಲ್ಲಾ ಹಿನ್ನೆಲೆಗಳಲ್ಲಿ ತನ್ನದೇ ಆದ ರಾಜಕೀಯ ಕನ್ಸಲ್ಟನ್ಸಿ ಸಂಸ್ಥೆ-ಐ ಪ್ಯಾಕ್ ಮೂಲಕ ತನ್ನನ್ನು ಸಂಪರ್ಕಿಸಿದ ರಾಜಕೀಯ ಪಕ್ಷಗಳಿಗೆ ರಾಜಕೀಯ ತಂತ್ರಗಾರಿಕೆಯನ್ನು ರೂಪಿಸಿಕೊಡುತ್ತಿದ್ದ ಪ್ರಶಾಂತ್ ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತೃಣಮೂಲ ಪಕ್ಷದ ಮಮತಾ ಬ್ಯಾನರ್ಜಿ ಅವರನ್ನು ಹಲವಾರು ಪಂಥಾಹ್ವಾನಗಳು ಇದ್ದರೂ ಅವುಗಳನ್ನು ಸಮರ್ಥವಾಗಿ ಎದುರಿಸಿ ಮಮತಾ ಬ್ಯಾನರ್ಜಿ ಅವರನ್ನು ಗೆಲ್ಲಿಸಿಕೊಂಡು ಬಂದದ್ದು ಬಲು ಆಸಕ್ತಿದಾಯಕ ವಿಚಾರ. ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣಾ ಫಲಿತಾಂಶದ ನಂತರ ರಾಜಕೀಯ ತಂತ್ರಗಾರಿಕೆಯ ಕನ್ಸಲ್ಟನ್ಸಿಯಿಂದ ದೂರ ಸರಿಯುತ್ತೇನೆ ಅಂತ ಘೋಷಿಸಿದ್ದ ಪ್ರಶಾಂತ್ ಈಗ ಮತ್ತೊಮ್ಮೆ 2024ರ ಲೋಕಸಭಾ ಮಿಷನ್ ಅನ್ನು ಕೈಗೆತ್ತಿಕೊಂಡಿದ್ದಾರೆ.

ಎಪ್ರಿಲ್ 16 (2022)ರಂದು ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದ ಎದುರು 2024 ಸ್ಟ್ರಾಟಜಿ ಪೇಪರ್ ಅನ್ನು ಮಂಡಿಸಿದರು. ಪ್ರಶಾಂತ್ ಮಂಡಿಸಿದ ತಂತ್ರಗಾರಿಕೆಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಮಲ್ಲಿಕಾರ್ಜುನ ಖರ್ಗೆ, ಎ.ಕೆ.ಆ್ಯಂಟನಿ ಮತ್ತು ಅಂಬಿಕಾ ಸೋನಿ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ಸೋನಿಯಾ ಗಾಂಧಿ ನೇಮಿಸಿದ್ದರು. ಇದರ ನಡುವೆ ಕಾಂಗ್ರೆಸ್ ಪಕ್ಷವನ್ನು ಸೇರಬೇಕು ಎಂಬುದಾಗಿ ಕಾಂಗ್ರೆಸ್ ಕಡೆಯಿಂದ ಪ್ರಶಾಂತ್‌ಗೆ ಆಹ್ವಾನ ನೀಡಲಾಗಿತ್ತು. ಈಗ ಇದ್ದಕ್ಕಿದ್ದಂತೆ ಕಾಂಗ್ರೆಸ್ ಅನ್ನು ಸೇರುವ ಪ್ರಸ್ತಾವವನ್ನು ಅವರು ತಿರಸ್ಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ರಾಜಕೀಯ ತಂತ್ರಗಾರಿಕೆಯನ್ನು ರೂಪಿಸಿಕೊಡುವ ಜವಾಬ್ದಾರಿಯಿಂದ ಪ್ರಶಾಂತ್ ಹಿಂದೆ ಸರಿದಿದ್ದಾರೆ ಎಂಬುದಾಗಿ ಹೇಳಲಾಗುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿನ ತಂತ್ರಗಾರಿಕೆಯಿಂದ ಲೈಮ್ ಲೈಟ್‌ಗೆ ಬಂದ ಪ್ರಶಾಂತ್ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆ, ಚುನಾವಣಾ ರಾಜಕೀಯ ಹಾಗೂ ತಂತ್ರಗಾರಿಕೆ, ಚುನಾವಣೆಯಲ್ಲಿ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆ-ಮುಂತಾದ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತಾ ಬಂದಿದ್ದಾರೆ. ಅದರಲ್ಲೂ ಜನರು ಮತ್ತು ಮತದಾರರ ಮೂಡ್, ಪರಿಕಲ್ಪನೆ ಮತ್ತು ಅಭಿಪ್ರಾಯಗಳನ್ನು ರಿಯಲ್ ಡೇಟಾಗಳ ಮೂಲಕ ಗ್ರಹಿಸಿಕೊಂಡು; ಋಣಾತ್ಮಕ ಅಭಿಪ್ರಾಯವನ್ನು ಧನಾತ್ಮಕವಾಗಿ ಪರಿವರ್ತಿಸುವುದು; ಎದುರಾಳಿಗಳ ದೌರ್ಬಲ್ಯಗಳನ್ನು ಋಣಾತ್ಮಕ ಅಂಶವಾಗಿ ಬದಲಾಯಿಸುವುದು ಚುನಾವಣಾ ತಂತ್ರಗಾರಿಕೆಯ ಭಾಗವಾಗಿದೆ, ಪ್ರಕ್ರಿಯೆಯಾಗಿದೆ. ಇದಕ್ಕೆ ಹಲವಾರು ಟೂಲ್ಸ್‌ಗಳಲ್ಲಿ ಒಂದು ಟೂಲ್ ಮಾತ್ರ ಸಾಮಾಜಿಕ ಮಾಧ್ಯಮವಾಗಿದೆ ಅಷ್ಟೇ.

ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷಗಳ ಹಿರಿಯ ನಾಯಕರಿಂದ ತೊಡಗಿ ಸಾಮಾನ್ಯ ಕಾರ್ಯಕರ್ತರವರೆಗೆ ಹಾಗೂ ಜನಸಾಮಾನ್ಯರೂ ಕೂಡಾ ನಂಬಿರುವುದು ಏನೆಂದರೆ ಧಾರ್ಮಿಕ ಧ್ರುವೀಕರಣ ಪ್ರಸ್ತುತ ಚುನಾವಣಾ ರಾಜಕೀಯದ ಕೇಂದ್ರ ಶೈಲಿ ಆಗಿದೆ. ಎಲ್ಲಾ ಪಕ್ಷಗಳು ಸತತವಾಗಿ ಚುನಾವಣೆಗಳನ್ನು ಧಾರ್ಮಿಕ ಧ್ರುವೀಕರಣದ ಆಧಾರದ ಮೇಲೆಯೇ ಎದುರಿಸುತ್ತಿವೆ ಎಂಬುದಾಗಿದೆ. ಪ್ರಶಾಂತ್ ಕಿಶೋರ್ ಪ್ರಕಾರ ಧಾರ್ಮಿಕ ಧ್ರುವೀಕರಣ ಅಮುಖ್ಯವಾಗಿದ್ದು ಅದುವೇ ಮಾತ್ರ ಯಾವುದೇ ಪಕ್ಷಕ್ಕೆ ತಾರ್ಕಿಕವಾಗಿ 100ಕ್ಕೆ ಶೇ.100ರಷ್ಟು ಮತಗಳನ್ನು ತಂದುಕೊಡುತ್ತದೆ ಎಂಬುದರಲ್ಲಿ ಸತ್ಯ ಅಡಗಿಲ್ಲ; ಒಂದು ಶೇ.50ರಷ್ಟು ಮತಗಳನ್ನು ಮಾತ್ರ ಧಾರ್ಮಿಕ ಧ್ರುವೀಕರಣದ ಪ್ರಕ್ರಿಯೆ ತಂದು ಕೊಡಬಹುದು. ಉಳಿದ ಶೇ.50 ಮತಗಳ ಮೇಲೆ ಧಾರ್ಮಿಕ ಹೊರತಾದ 'ಇನ್ನಿತರ ಇಶ್ಯೂಗಳು' ಪ್ರಭಾವ ಬೀರುತ್ತವೆ.

ಉತ್ಕಟ ರಾಷ್ಟ್ರೀಯತೆ, ಧಾರ್ಮಿಕ ಧ್ರುವೀಕರಣ ಮತ್ತು ಕಲ್ಯಾಣತ್ವ ವೆಲ್ಫೇರಿಸಂಗಳ ಸಂಯೋಜನೆಯೇ ಇತ್ತೀಚೆಗಿನ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸುತ್ತಿವೆ. ಚುನಾವಣಾ ಪೂರ್ವದಲ್ಲಿ ಯಾವುದೇ ಪಕ್ಷವು ಜನರಿಗೆ/ಮತದಾರರಿಗೆ ಉಚಿತ ಸೌಲಭ್ಯಗಳನ್ನು ನೀಡುತ್ತೇವೆ ಎಂಬ ಘೋಷಣೆಗಳನ್ನು ಮಾಡಿ ನಂಬಿಸುವ ಇಲ್ಲವೇ ಕನ್ವಿನ್ಸ್ ಮಾಡಿಸುವ ಅಥವಾ ಒಪ್ಪಿಸುವಲ್ಲಿನ ಪರಿಣಾಮಕಾರಿತ್ವವು ಮತಗಳನ್ನು ತಂದುಕೊಡುತ್ತದೆ. ಸ್ವತಃ ಯಾವುದೇ ಪಕ್ಷದ ಸರಕಾರಗಳೇ ಜಾರಿಗೆ ತಂದ ಜನೋಪಯೋಗಿ ಸಮಾಜ ಕಲ್ಯಾಣಕಾರಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿ ಬಲು ದಿಟ್ಟವಾಗಿ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗದಿರುವುದೇ ಆಯಾಯ ಪಕ್ಷಗಳು ಸೋಲಲು ಮೂಲ ಕಾರಣವಾಗಿರುತ್ತವೆ. ಹಾಗೆಯೇ ಯಾವುದೇ ಪಕ್ಷಗಳು ತಮ್ಮದೇ ಉದ್ದೇಶ, ಪ್ರಣಾಳಿಕೆ ಹಾಗೂ ಯೋಜನೆಗಳ ಬಗ್ಗೆ ಜನರ ಜೊತೆ ನೇರವಾಗಿ ಹಾಗೂ ಪರಿಣಾಮಕಾರಿಯಾಗಿ ನಿರಂತರ ಸಂವಹನ ನಡೆಸಲು ಸಾಧ್ಯವಾಗದಿರುವುದೇ ಅಥವಾ ವಿರೋಧ ಪಕ್ಷಗಳ ಸಂವಹನ ತಂತ್ರಗಾರಿಕೆಯ ಜೊತೆ ಸರಿಗಟ್ಟಲು ಅಸಾಧ್ಯವಾಗಿರುವುದು ಕೂಡಾ ಯಾವುದೇ ರಾಜಕೀಯ ಪಕ್ಷದ ದೊಡ್ಡ ಕೊರತೆಯಾಗಿರುತ್ತದೆ. ಈ ದೃಷ್ಟಿಯಿಂದ ಅದರ ಸಂವಹನ ತಂತ್ರಗಾರಿಕೆಯನ್ನು ಬದಲಾಯಿಸಿ ಹೊಸದಾದ ರಾಜಕೀಯ ಸಂಕಥನವನ್ನು (political discourse) ಹುಟ್ಟು ಹಾಕಿ ಅದರ ಸಂವಹನ ಮೆಕ್ಯಾನಿಸಂ ಅನ್ನು ಉನ್ನತ ಹಂತಕ್ಕೆ ತಲುಪಿಸಿದರೆ ಮಾತ್ರ ಚುನಾವಣಾ ರಾಜಕೀಯದಲ್ಲಿ ಯಶಸನ್ನು/ ಫಲಿತಾಂಶವನ್ನು ಸಾಧಿಸಲು ಆ ಪಕ್ಷಕ್ಕೆ ಸಾಧ್ಯವಾಗುತ್ತದೆ. ಹಾಗೆಯೇ ಯಾವುದೇ ಪಕ್ಷದ ನಾಯಕ ಅತ್ಯುತ್ತಮ ಕೇಳುಗ (good listner) ಆಗಿರುವುದು ಕೂಡಾ ಮುಖ್ಯ ಅರ್ಹತೆಯಾಗಿದ್ದು ಅಂತಹ ನಾಯಕ ಜನ ಸಾಮಾನ್ಯರು, ಕಾರ್ಯಕರ್ತರು ಮತ್ತು ಮತದಾರರ ನಡುವೆ ಒಂದು ದೃಢವಾದ ಸಂವಹನವನ್ನು ಸಾಧಿಸಿಕೊಳ್ಳುತ್ತಾನೆ. ಈ ರೀತಿಯ ಸಂವಹನ ಚುನಾವಣಾ ಫಲಿತಾಂಶವನ್ನು ತಾರ್ಕಿಕವಾಗಿ ತಂದು ಕೊಡುತ್ತದೆ ಎಂಬುದಾಗಿ ಪ್ರಶಾಂತ್ ವಾದಿಸುತ್ತಾರೆ. ಒಟ್ಟಿನಲ್ಲಿ, ಜನರು, ಮತದಾರರು ಮತ್ತು ನಾಯಕನ ನಡುವೆ ಪರಿಣಾಮಕಾರಿಯಾದ ಸಂವಹನವನ್ನು ಏರ್ಪಡಿಸುವುದೇ ಚುನಾವಣಾ ತಂತ್ರ ಗಾರಿಕೆಯಾಗಿದೆ ಎಂಬುದು ವಾಸ್ತವವಾಗಿದೆ. ಯಾವ ಯಾವ ವಿಧಾನಗಳಿಂದ; ಯಾವ ಟೂಲ್ಸ್ ಮೂಲಕ ಆ ಸಂವಹನವನ್ನು ಚುನಾವಣಾ ತಂತ್ರಗಾರ ಏರ್ಪಡಿಸಿಕೊಡುತ್ತಾನೆ ಎಂಬುದು ಚುನಾವಣಾ ತಂತ್ರಗಾರಿಕೆಯಾಗಿದೆ.

ಈ ಸಂವಹನಕ್ಕೆ ಸಂಬಂಧಿಸಿದಂತೆ ಪ್ರಶಾಂತ್ M4 ಸೂತ್ರವನ್ನು ಪ್ರದಿಪಾದಿಸುತ್ತಾರೆ. ಮೆಸೇಜ್ (ಸಂದೇಶ), ಮೆಸೆಂಜರ್(ಸಂದೇಶವಾಹಕ), ಮೆಷಿನರಿ (ಯಂತ್ರ), ಮೆಕ್ಯಾನಿಕ್ಸ್ (ತಂತ್ರಜ್ಞರು).
ಯಾವುದೇ ಚುನಾ ವಣೆಯಲ್ಲಿ ಮತದಾರರನ್ನು ಗೆಲ್ಲಬೇಕಿದ್ದರೆ ಒಂದು ಸ್ಪಷ್ಟ ಸಂದೇಶ ಇರಬೇಕು (ಜನರ ಮನ ಗೆಲ್ಲುವ ಪ್ರಣಾಳಿಕೆ, ಯೋಜನೆಗಳು, ಚುನಾವಣಾ ಆಶ್ವಾಸನೆಗಳು); ಆ ಸಂದೇಶವನ್ನು ಒಯ್ಯುವ ಪರಿಣಾಮಕಾರಿ ಹಾಗೂ ಕರಿಷ್ಮಾ ಉಳ್ಳ ಸಂದೇಶವಾಹಕ (ನಾಯಕ/ಚುನಾವಣಾ ಅಭ್ಯರ್ಥಿಗಳು); ಸಂದೇಶವಾಹಕ ನಾಯಕ, ಅಭ್ಯರ್ಥಿ ತರುವ ಸಂದೇಶಗಳನ್ನು ಹಂಚಲು ಯಂತ್ರ (ಪಕ್ಷಗಳ ವಿವಿಧ ಸಮಿತಿಗಳು-ಬೂತ್ ಸಮಿತಿ, ಬ್ಲಾಕ್, ಜಿಲ್ಲಾ, ರಾಜ್ಯ ಹಾಗೂ ಸಮಿತಿಗಳು ಪರಿಣಾಮಕಾರಿಯಾಗಿ ಇರಬೇಕು); ಈ ಸಮಿತಿಗಳನ್ನು ತಲುಪಿ ಸಂದೇಶಗಳನ್ನು ಹರಡಿ ಜನರಿಗೆ ಪರಿಣಾಮಕಾರಿಯಾಗಿ ಒಪ್ಪಿಸಲು ಹಾಗೂ ಜನರು, ಮತದಾರರನ್ನು ಮನಪರಿವರ್ತನೆ ಮಾಡಲು ಸಶಕ್ತವಾದ ಮೆಕ್ಯಾನಿಕ್ಸ್ (ಕಾರ್ಯಕರ್ತರು) ಇರಬೇಕು.

ಇದು ಪ್ರಶಾಂತ್ ಹಾಗೂ ಇತರ ಚುನಾವಣಾ ತಂತ್ರಗಾರರು ಬಳಕೆ ಮಾಡುವ ಸರ್ವೇಸಾಮಾನ್ಯ ತಂತ್ರಗಾರಿಕೆಯಾಗಿದೆ. ಇಲ್ಲಿ ಈ ತಂತ್ರಗಾರಿಕೆಗಿಂತಲೂ ಅವುಗಳನ್ನು ಚುನಾವಣೆಯಲ್ಲಿ ಬಳಕೆ ಮಾಡಿ; ಜಾರಿ ಮಾಡಿ ಫಲಿತಾಂಶವನ್ನು ಸಾಧಿಸುವುದರಲ್ಲಿ ಚುನಾವಣಾ ತಂತ್ರಗಾರರ ಯಶಸ್ಸು ಅಡಗಿದೆ.
ಇನ್ನು, ಪ್ರಶಾಂತ್ ಕಿಶೋರ್ ಅವರ 2024ರ ಮಿಷನ್ ಬಗ್ಗೆ ಅವಲೋಕಿಸುವುದಾದರೆ ಅನೇಕ ತಂತ್ರಗಾರಿಕೆಯ ನಿಗೂಢಗಳು, ಯೋಜನೆಗಳು ಅಡಗಿರುವಂತಿದೆ. ಅವುಗಳನ್ನು ಈ ರೀತಿಯಾಗಿ ಡಿಕೋಡ್ ಮಾಡಬಹುದು ಎಂಬಂತೆ ಕಂಡುಬರುತ್ತಿದೆ:
1. ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸುವುದು (ಈ ಯೋಜನೆಯಿಂದ ಪ್ರಶಾಂತ್ ಈಗ ವಿಮುಖಗೊಂಡಿದ್ದಾರೆ).
2. ಕಾಂಗ್ರೆಸ್ ಮೂಲದ ನಾಯಕರು ಮತ್ತು ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟದ ರಚನೆ. ಈ ಮೈತ್ರಿ ಕೂಟದ ಮುಖ್ಯ ಸ್ಥಾನದಲ್ಲಿ ಕಾಂಗ್ರೆಸ್ ಇರುವುದು.
3. ಪ್ರಧಾನ ಮಂತ್ರಿ ಪದವಿಗೆ ಹೊಸ ಮೈತ್ರಿ ಕೂಟದ ಹೊಸ ಮುಖವನ್ನು ಪರಿಚಯಿಸುವುದು.
4. ಇದುವರೆಗೆ ತನ್ನಿಂದ ಚುನಾವಣಾ ತಂತ್ರಗಾರಿಕೆಯನ್ನು ಪಡೆದುಕೊಂಡು ಸರಕಾರಗಳನ್ನು ರಚಿಸಿರುವ ನಾಯಕರ ಹಾಗೂ ಪಕ್ಷಗಳ ಬೆಂಬಲದಿಂದ ಪ್ರಧಾನ ಮಂತ್ರಿಯಂತಹ ಅಥವಾ ಇನ್ನಿತರ ಪದವಿಗಳಿಗೆ (ಉದಾಹರಣೆಗೆ ಬಿಹಾರದ ಮುಖ್ಯಮಂತ್ರಿ) ಸ್ವತಃ ಪ್ರಶಾಂತ್ ಕಿಶೋರರೇ ದಾವೆದಾರನಾಗುವುದು ಅವರ ಮಹತ್ವಾಕಾಂಕ್ಷೆ ಎಂಬಂತೆ ಕಂಡು ಬರುತ್ತಿದೆ. ಈ ಸಾಧ್ಯತೆಯನ್ನು ಸುಲಭವಾಗಿ ಅಲ್ಲಗಳೆಯುವಂತಿಲ್ಲ.

ಈ ಹಿನ್ನೆಲೆಯಲ್ಲಿಯೇ ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಯ ನಂತರ ನಾನಿನ್ನು ರಾಜಕೀಯ ತಂತ್ರಗಾರಿಕೆಯಿಂದ ನಿವೃತ್ತಿಯಾಗಿ ಬೇರೆ ಕ್ಷೇತ್ರಗಳ ಕಡೆ ಗಮನ ಕೊಡುತ್ತೇನೆ ಎಂದು ಘೋಷಣೆ ಮಾಡಿರುವುದರಲ್ಲಿ ಬಿಹಾರ ರಾಜ್ಯದಲ್ಲಿ ರಾಜಕೀಯ ನೇತಾರನಾಗಿಯೇ ಪ್ರವೇಶ ಮಾಡಿ ಜನತಾ ದಳ (ಯು) ಉಪಾಧ್ಯಕ್ಷರಾಗಿ ಅಲ್ಪಾವಧಿಯಲ್ಲೇ ಆ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಹೊರಬಂದಿರುವ ಎಪಿಸೋಡ್ ಅನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಭಾರತದ ಚುನಾವಣಾ ರಾಜಕೀಯಕ್ಕೆ ಗ್ರಾಂಡ್ ಎಂಟ್ರಿ ಕೊಡುವ ಸಾಧ್ಯತೆಯನ್ನು ತಳ್ಳಿಹಾಕುವ ಹಾಗಿಲ್ಲ ಅಥವಾ ಬೇರೆಯದ್ದೇ ರಾಜಕೀಯ ಸಂಕಥನಗಳನ್ನು ಕೂಡಾ ಮುಂದು ಮಾಡುವ ಸಾಧ್ಯತೆಗಳು ಇಲ್ಲದಿಲ್ಲ. ಒಟ್ಟಿನಲ್ಲಿ, ರಾಜಕೀಯ ಶಾಸ್ತ್ರಜ್ಞರು ಮತ್ತು ರಾಜಕೀಯ ತಂತ್ರಗಾರರು 2024ರ ರಾಜಕೀಯ ಪ್ರಕ್ರಿಯೆಗಳನ್ನು ತುಂಬಾ ಕಾತುರದಿಂದ ಎದುರು ನೋಡುವಂತಾಗಿದೆ.

Writer - ರಘು ಧರ್ಮಸೇನ

contributor

Editor - ರಘು ಧರ್ಮಸೇನ

contributor

Similar News