ಶಿಕ್ಷಣ ಸಚಿವರಿಗೆ ಕೆಲ ಮೂಲಭೂತ ಪ್ರಶ್ನೆಗಳು

Update: 2022-05-27 19:30 GMT

ಪಠ್ಯಕ್ರಮವು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬದಲಾವಣೆಗಳ ಕುರಿತು, ವೈಜ್ಞಾನಿಕ ಮನೋಧರ್ಮದ ಕುರಿತು, ಜಾತ್ಯತೀತ ಮೌಲ್ಯಗಳ ಕುರಿತು ಒಂದು ಬುನಾದಿಯನ್ನು ಕಟ್ಟಿಕೊಡಬೇಕು. ಇದು ಇಲ್ಲಿನ ಬಹು ಸಂಸ್ಕೃತಿಯನ್ನು ಪ್ರತಿನಿಧಿಸಬೇಕು. ಸಂವಿಧಾನ ತತ್ವಗಳಿಗೆ ಬದ್ಧವಾಗಿರಬೇಕು. ಆದರೆ ಈ ರೋಹಿತ್ ಚಕ್ರತೀರ್ಥ ಸಮಿತಿಯು ಈ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ ಆರೆಸ್ಸೆಸ್ ಸಿದ್ಧಾಂತವನ್ನು ತುರುಕುವ 'ಒಂದಂಶ'ದ ಕಾರ್ಯಕ್ರಮ ಹಾಕಿಕೊಂಡಿರುವುದು ಸ್ಪಷ್ಟವಾಗಿದೆ.


'ಪಠ್ಯ ಪುಸ್ತಕ ಪರಿಷ್ಕರಣೆಯ ಪರಿಶೀಲನಾ ಸಮಿತಿ'ಯ ನಿರ್ಧಾರಗಳು, ಅದು ಕೈ ಬಿಟ್ಟ ಶೂದ್ರ, ದಲಿತ ಬರಹಗಾರರು, ಸೇರಿಸಿದ ಬ್ರಾಹ್ಮಣ ಲೇಖಕರು ಮತ್ತು ಶಿಕ್ಷಣದ ಮತೀಯವಾದೀಕರಣ ಕಳೆದ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಶಿಕ್ಷಣ ತಜ್ಞನಲ್ಲದ, ಶಿಕ್ಷಕನೂ ಅಲ್ಲದ, ಸಂಶೋಧಕನೂ ಅಲ್ಲದ ಸಾಮಾಜಿಕ ಜಾಲತಾಣಗಳಲ್ಲಿ ಮೂರನೇ ದರ್ಜೆಯ ಸಾಲುಗಳನ್ನು ಬರೆದುಕೊಂಡಿರುವ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯನ್ನು ಈ ಪರಿಷ್ಕರಣೆಯ ಪರಿಶೀಲನಾ ಸಮಿತಿಗೆ ನೇಮಕ ಮಾಡಿರುವುದನ್ನು ಪ್ರಶ್ನಿಸಿದಾಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ''ಚಕ್ರತೀರ್ಥ ಐಐಟಿ, ಸಿಇಟಿ ಪ್ರೊಫೆಸರ್'' ಎಂದು ಹೇಳಿ ನಗೆಪಾಟಲಿಗೀಡಾದರು.

ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯು 'ಬುದ್ಧ, ಜೈನ ಧರ್ಮಗಳು, ಹೊಸ ಧರ್ಮಗಳ ಉದಯ' ಎನ್ನುವ ಪಠ್ಯವನ್ನು ಸೇರಿಸಿದ್ದಾರೆ, ಜಾತಿ ಇತಿಹಾಸವನ್ನು ಸೇರಿಸಿದ್ದಾರೆ ಎಂದು ಆಕ್ಷೇಪಿಸಿ ಅದರ ಪರಿಶೀಲನೆ ಸಮಿತಿಗೆ ಈ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷರಾಗಿ ನೇಮಿಸಲಾಯಿತು. ಆದರೆ ಇಂದು ಅದು ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ಹತ್ತನೇ ತರಗತಿಯ ಕನ್ನಡ, ಇತಿಹಾಸ ಪಠ್ಯಕ್ರಮದಲ್ಲಿಯೂ ಏಕಪಕ್ಷೀಯವಾಗಿ ಅನೇಕ ಬದಲಾವಣೆಗಳನ್ನು ಮಾಡಿತು. ಆದರೆ ಈ ಸಮಿತಿಯು ಯಾವ ಶಿಕ್ಷಣ ತಜ್ಞರೊಂದಿಗೆ, ವಿಷಯ ತಜ್ಞರೊಂದಿಗೆ, ಶಿಕ್ಷಣದ ಭಾಗೀದಾರರೊಂದಿಗೆ, ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದೆ ಎನ್ನುವುದರ ಕುರಿತು ಮಾಹಿತಿಯಿಲ್ಲ. ಇವರು ಎಷ್ಟು ಬಾರಿ ಸಭೆ ನಡೆಸಿದರು, ಆ ಸಭೆಯ ವಿವರಗಳೇನು ಎನ್ನುವುದರ ಕುರಿತು ಮಾಹಿತಿಯಿಲ್ಲ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಇಂತಹ ಮುಖ್ಯವಾದ ಬದಲಾವಣೆಗಳನ್ನು ಮಾಡಿರುವುದು ಸಹಜವಾಗಿಯೇ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯವಾಗಿ ಈ ಸಮಿತಿಯು 'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005'(ಎನ್‌ಸಿಎಫ್ 2005)ರ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಪಠ್ಯಕ್ರಮವು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬದಲಾವಣೆಗಳ ಕುರಿತು, ವೈಜ್ಞಾನಿಕ ಮನೋಧರ್ಮದ ಕುರಿತು, ಜಾತ್ಯತೀತ ಮೌಲ್ಯಗಳ ಕುರಿತು ಒಂದು ಬುನಾದಿಯನ್ನು ಕಟ್ಟಿಕೊಡಬೇಕು. ಇದು ಇಲ್ಲಿನ ಬಹು ಸಂಸ್ಕೃತಿಯನ್ನು ಪ್ರತಿನಿಧಿಸಬೇಕು. ಸಂವಿಧಾನ ತತ್ವಗಳಿಗೆ ಬದ್ಧವಾಗಿರಬೇಕು. ಆದರೆ ಈ ರೋಹಿತ್ ಚಕ್ರತೀರ್ಥ ಸಮಿತಿಯು ಈ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ ಆರೆಸ್ಸೆಸ್ ಸಿದ್ಧಾಂತವನ್ನು ತುರುಕುವ 'ಒಂದಂಶ'ದ ಕಾರ್ಯಕ್ರಮ ಹಾಕಿಕೊಂಡಿರುವುದು ಸ್ಪಷ್ಟವಾಗಿದೆ. ಇದು ಬಿಜೆಪಿ ಪ್ರಣಾಳಿಕೆ ಎಂದು ಪ್ರಜ್ಞಾವಂತರು ಸಕಾರಣವಾಗಿಯೇ ಟೀಕಿಸುತ್ತಿದ್ದಾರೆ. ಇದು ಪ್ರತ್ಯೇಕ ಘಟನೆಯಂತೂ ಅಲ್ಲ. 1977ರಲ್ಲಿ ಜನತಾ ಪಕ್ಷ ಆಧಿಕಾರದಲ್ಲಿದ್ದ ಕಾಲದಿಂದ ಪ್ರಾರಂಭವಾದ ಈ ಬ್ರಾಹ್ಮಣೀಕರಣ, ಮತೀಯವಾದೀಕರಣದ ಹುನ್ನಾರಗಳು 1999-2004ರ ವಾಜಪೇಯಿ ಸರಕಾರದ ಕಾಲದಲ್ಲಿ ಮುಂದುವರಿಯಿತು ಮತ್ತು 2014ರಿಂದ ಮೋದಿ ಸರಕಾರದ ಕಾಲದಲ್ಲಿ ಅದರ ವೇಗ ಹೆಚ್ಚಾಗಿದೆ ಮತ್ತು ಕರ್ನಾಟಕದಲ್ಲಿ ಪಠ್ಯಕ್ರಮ ಪರಿಶೀಲನೆಯ ನೆಪದಲ್ಲಿ ಈ ಆರೆಸ್ಸೆಸ್ ಸಿದ್ಧಾಂತಗಳ ಅಳವಡಿಕೆಯು ಜಾರಿಯಲ್ಲಿದೆ. ಇದಕ್ಕೂ ಕೆಲ ದಿನಗಳ ಹಿಂದೆ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕವಿ ಫೈಝ್ ಅಹ್ಮದ್ ಫೈಝ್ ಅವರ ಪಠ್ಯವನ್ನು, 12ನೇ ತರಗತಿಯಿಂದ ಪ್ರೇಮಚಂದ್ ಅವರ ಪಠ್ಯವನ್ನು ಕೈ ಬಿಡಲಾಗಿತ್ತು. ಇನ್ನೂ ಅನೇಕ ಸೆಕ್ಯುಲರ್, ಸಮಾಜವಾದಿ ತತ್ವಗಳ ಪಠ್ಯವನ್ನು ಕೈ ಬಿಡಲಾಗಿತ್ತು. ಕರ್ನಾಟಕದ ಬಿಜೆಪಿ ಸರಕಾರವು ಇದನ್ನು ಮುಂದುವರಿಸಿ ತನ್ನ ಗುರು ಕಾಣಿಕೆ ಸಲ್ಲಿಸುತ್ತಿದೆ. ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ.
ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯಿಲ್ಲ. ದಿನಪತ್ರಿಕೆಗಳಲ್ಲಿ 2021-22ರ ಸಾಲಿನ ಈ ಹಿಂದಿನ ಪಠ್ಯಕ್ರಮ 82 ಟೈಟಲ್‌ಗಳ ಸುಮಾರು 6 ಲಕ್ಷ ಪಠ್ಯಗಳು ಮುದ್ರಣವಾಗಿವೆ ಮತ್ತು ಈಗ ಅವೆಲ್ಲವೂ ನಿರುಪಯುಕ್ತವಾಗುತ್ತವೆ ಎಂದು ವರದಿಯಾಗಿದೆ ಮತ್ತು ಇದರ ವೆಚ್ಚ ಸುಮಾರು 2.5 ಕೋಟಿ ರೂ. ಎಂದೂ ಮಾತುಗಳು ಕೇಳಿ ಬರುತ್ತಿವೆ. ಇದು ನಿಜವಾಗಿದ್ದರೆ ಇದರ ಹೊಣೆಗಾರಿಕೆಯನ್ನು ಶಿಕ್ಷಣ ಸಚಿವರು ಹೊರಬೇಕು. ಜೊತೆಗೆ ಇಲ್ಲಿ ಶಿಕ್ಷಣ ಸಚಿವರಿಗೆ ಕೆಲ ಮೂಲಭೂತ ಪ್ರಶ್ನೆಗಳಿವೆ.
ಏಳು ತಿಂಗಳ ಹಿಂದೆ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ನೇಮಿಸುವುದಕ್ಕಿಂತಲೂ ಮೊದಲು 2012-22ರ ಸಾಲಿನ ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದೆಯೇ? ಒಂದು ವೇಳೆ ಹೌದಾಗಿದ್ದರೆ ಮುದ್ರಣಗೊಂಡ ಪುಸ್ತಕಗಳ ಸಂಖ್ಯೆ ಎಷ್ಟು? ಹಳೆಯ ಪಠ್ಯಪುಸ್ತಕಗಳನ್ನು ಮುದ್ರಿಸಿ ನಂತರ ಆ ಪಠ್ಯಗಳನ್ನು ಬದಲಾಯಿಸಲು ನಿರ್ಧರಿಸಿರುವುದು ಮತ್ತು ಕೋಟಿಗಟ್ಟಲೆ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವುದಕ್ಕೆ ನಿಮ್ಮ ಉತ್ತರವೇನು? ಒಂದು ವೇಳೆ ಈ ಪರಿಶೀಲನಾ ಸಮಿತಿ ನೇಮಕಗೊಂಡ ನಂತರ 2021-22ರ ಪಠ್ಯ ಪುಸ್ತಕಗಳನ್ನು ಮುದ್ರಿಸಲಾಗಿದೆಯೇ? ಒಂದು ವೇಳೆ ಹೌದಾದರೆ ಇದು ಅತ್ಯಂತ ಮೂರ್ಖತನದ ನಿರ್ಧಾರ ಎನ್ನಬೇಕಾಗುತ್ತದೆಯಲ್ಲವೇ?

ಈಗ 2022-23ರ ಸಾಲಿನ ಪರಿಷ್ಕೃತಗೊಂಡ ಪಠ್ಯಪುಸ್ತಕಗಳು ಮುದ್ರಣದ ಹಂತದಲ್ಲಿವೆ ಎಂದು ಶಿಕ್ಷಣ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಆದರೆ ಯಾವ ಆಧಾರದಲ್ಲಿ, ತರಾತುರಿಯಲ್ಲಿ ಈ ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸಿದರು? ಇದಕ್ಕೆ ಶಿಕ್ಷಣ ಸಚಿವರು ಉತ್ತರಿಸಬೇಕಾಗುತ್ತದೆ. ಒಂದು ವೇಳೆ ಜನಾಗ್ರಹವು ತೀವ್ರಗೊಂಡು ಈ ಚಕ್ರತೀರ್ಥ ಸಮಿತಿಯ ಎಲ್ಲಾ ಅವೈಜ್ಞಾನಿಕ, ತರ್ಕಹೀನ ನಿರ್ಧಾರಗಳನ್ನು ಸ್ಥಗಿತಗೊಳಿಸಿ ಹಿಂದಿನ ಪಠ್ಯಕ್ರಮವನ್ನು ಮುಂದುವರಿಸಬೇಕು ಎನ್ನುವ ಆದೇಶ ಬಂದರೆ ಈ ಹೊಸ ಪಠ್ಯ ಪುಸ್ತಕಗಳು ನಿರುಪಯುಕ್ತವಾಗುತ್ತವೆ. ಈ ಆರ್ಥಿಕ ನಷ್ಟವನ್ನು ಯಾರು ತುಂಬಿ ಕೊಡುತ್ತಾರೆ? ಆದರೆ ಮೇಲಿನ ಪ್ರಶ್ನೆಗಳಿಗೆ ಯಾವುದೇ ಉತ್ತರಗಳಿಲ್ಲ. ಯಾರ ಬಳಿಯೂ ಮಾಹಿತಿಯಿಲ್ಲ. ಎಲ್ಲಿಯೂ ಪಾರದರ್ಶಕತೆಯಿಲ್ಲ. ಎಲ್ಲವೂ ನಿಗೂಢವಾಗಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾಯಿಲೆ ಕಾರಣಕ್ಕೆ ಮಕ್ಕಳ ಕಲಿಕೆಯಲ್ಲಿ ಅಂತರ ಹೆಚ್ಚಾಗಿದೆ. ಈ ಅಂತರದಿಂದ ಕಲಿಕೆ ನಷ್ಟವಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಯಾವುದೇ ಪ್ರಯೋಗಗಳಿಗೆ ಮುಂದಾಗದೆ ಮಕ್ಕಳ ಕಲಿಕೆ ನಷ್ಟವನ್ನು ತುಂಬಿಕೊಡುವುದರಲ್ಲಿ ಗಮನ ಕೇಂದ್ರೀಕರಿಸಬೇಕು ಎನ್ನುವ ಸಾಮಾನ್ಯ ಕನಿಷ್ಠ ತಿಳುವಳಿಕೆಯೂ ಇಲ್ಲದಂತಾಗಿರುವುದು ಇಲ್ಲಿನ ದುರಂತ. ಇವರು ಬಡ ಕುಟುಂಬಗಳ ಮಕ್ಕಳ ಶಿಕ್ಷಣದ ಜೊತೆಗೆ ಆಟವಾಡುತ್ತಿದ್ದಾರೆ. ಏಕೆಂದರೆ ಅನುಕೂಲವಂತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಸಿಬಿಎಸ್‌ಇ, ಐಸಿಎಸ್ ಪಠ್ಯಕ್ರಮವನ್ನು ಕಲಿಯುತ್ತಾರೆ. ಇವರಿಗೆ ಈ ಬದಲಾವಣೆಗಳ ಅಪಾಯದ ಬಾಧೆ ತಟ್ಟುವುದಿಲ್ಲ.

ಅನೇಕ ಶಿಕ್ಷಕರು ದೂರುವಂತೆ ಕಳೆದೆರಡು ವರ್ಷಗಳಲ್ಲಿ ಬಹುತೇಕ ಸರಕಾರಿ ಶಾಲೆಗಳಿಗೆ ಪಠ್ಯಪುಸ್ತಕಗಳ ಪೂರೈಕೆಯಾಗಿಲ್ಲ. ಆ ಶಾಲೆಗಳಿಗೆ ಪಠ್ಯಗಳ ಪಿಡಿಎಫ್ ಪ್ರತಿಗಳನ್ನು ಕಳಿಸಲಾಗಿದೆ. ಶಿಕ್ಷಕರು ತಮ್ಮ ಸ್ವಂತ ವೆಚ್ಚದಲ್ಲಿ ಅದನ್ನು ಮುದ್ರಿಸಿಕೊಂಡು ಆ ಜೆರಾಕ್ಸ್ ಪ್ರತಿಗಳ ಮೂಲಕ ಬೋಧಿಸುತ್ತಿದ್ದಾರೆ. ಮಕ್ಕಳು ಜೆರಾಕ್ಸ್ ಹಾಳೆಯ ಮೇಲೆ ಕಲಿಯುತ್ತಿದ್ದಾರೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಿಯೂ ಸ್ಪಷ್ಟನೆ ಕೊಡುತ್ತಿಲ್ಲ. ಈ ವರ್ಷ 'ಕಲಿಕಾ ಚೇತರಿಕೆ' ಎನ್ನುವ ಪ್ರಯೋಗ ಆರಂಭಿಸಿದರು. ಆದರೆ ಅದಕ್ಕೆ ಅಗತ್ಯವಿರುವ ಕಲಿಕಾ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿಯನ್ನು ಪೂರೈಕೆ ಮಾಡಿಲ್ಲ. ಈ ಎಲ್ಲಾ ಕೊರತೆಗಳಿದ್ದರೂ ಮೇ 15ರಿಂದ ಶಾಲೆಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಇಂದಿಗೂ ಪಠ್ಯಪುಸ್ತಕಗಳು ಲಭ್ಯವಿಲ್ಲ. ಈ ಎಲ್ಲಾ ಅವಘಡಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜವಾಬ್ದಾರಿ ಹೊರಬೇಕು ಮತ್ತು ರಾಜೀನಾಮೆ ಕೊಡಬೇಕು ಎಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿದ್ದಾರೆ. ಈ ಪಠ್ಯಕ್ರಮದ ಮತೀಯವಾದೀಕರಣ, ಬಾಹ್ಮಣೀಕರಣ ಇಲ್ಲಿಗೆ ನಿಲ್ಲುವುದಿಲ್ಲ. ಇಲ್ಲಿನ ನಾಗರಿಕರ ಮುಂದೆ ಸವಾಲುಗಳಿವೆ. ಈ ಕೂಡಲೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗದೆ ಹೋದರೆ ಮುಂದಿನ ದಿನಗಳಲ್ಲಿ ಭಾರೀ ದುರಂತಗಳಿಗೆ ಸಾಕ್ಷಿಯಾಗಲಿದ್ದೇವೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News