'ನ್ಯಾಯ ದೊರಕಿಸಿ': ಮಹಾರಾಷ್ಟ್ರ ಸರ್ಕಾರಕ್ಕೆ ನಿತಿನ್ ದೇಸಾಯಿ ಪುತ್ರಿ ಆಗ್ರಹ

Update: 2023-08-07 18:42 GMT

ನಿತಿನ್ ದೇಸಾಯಿ.| Photo: ANI 

ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿಯವರ ಆತ್ಮಹತ್ಯೆ ಸಿನಿಮಾ ಜಗತ್ತಿಗೆ ಆಘಾತ ತಂದಿದೆ. ಮಹಾರಾಷ್ಟ್ರದ ಕರ್ಜತ್‍ನಲ್ಲಿರುವ ಎನ್‍ಡಿ ಸ್ಟುಡಿಯೊದಲ್ಲಿ ಆಗಸ್ಟ್ 2ರಂದು ಅವರ ಮೃತದೇಹ ಪತ್ತೆಯಾಗಿತ್ತು. ಹಣಕಾಸು ಸಂಕಷ್ಟದಲ್ಲಿದ್ದ ಕಾರಣ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಹಲವು ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನಡುವೆ ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಪುತ್ರಿ ಮಾನಸಿ ನ್ಯಾಯ ದೊರಕಿಸಿ ಎಂದು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

"ತಂದೆ ಒಂದು ಕಂಪನಿಯಿಂದ 181 ಕೋಟಿ ರೂಪಾಯಿ ಸಾಲ ಪಡೆದಿದ್ದು, 86.31 ಕೋಟಿ ಮರುಪಾವತಿ ಮಾಡಿದ್ದಾರೆ. ಯಾರಿಗೆ ವಂಚಿಸುವ ಉದ್ದೇಶವೂ ಅವರದ್ದಾಗಿರಲಿಲ್ಲ" ಎಂದು ಪುತ್ರಿ ಮಾನಸಿ ಹೇಳಿದ್ದಾರೆ. "ಭರವಸೆ ನೀಡಿದಂತೆ ಎಲ್ಲ ಹಣ ಮರುಪಾವತಿಸಲು ಅವರು ಸಿದ್ಧರಿದ್ದರು. ಸಾಲದಾತರು ಆರು ತಿಂಗಳ ಬಡ್ಡಿಯನ್ನು ಮುಂಗಡವಾಗಿ ನೀಡುವಂತೆ ಕೇಳಿದ್ದರು. ತಮ್ಮ ಕಚೇರಿ ಮಾರಾಟ ಮಾಡಿ ತಂದೆ ಅದನ್ನು ಪೂರೈಸಿದ್ದರು" ಎಂದು ಅವರು ಸ್ಪಷ್ಟಡಿಸಿದ್ದಾರೆ.

"ಸಾಲ ನೀಡಿದ ಕಂಪನಿ ತಂದೆಯ ಮೇಲೆ ಕಾನೂನು ಕ್ರಮ ಆರಂಭಿಸುತ್ತಲೇ ಅವರಿಗೆ ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿತ್ತು. ಸಾಂಕ್ರಾಮಿಕ ಇಡೀ ಉದ್ಯಮದ ಮೇಲೆ ಪರಿಣಾಮ ಬೀರಿತ್ತು. ಕೆಲಸ ಇಲ್ಲದೇ ಸ್ಟುಡಿಯೊ ಮುಚ್ಚಿತ್ತು. ನಿಯತವಾಗಿ ಪಾವತಿ ಮಾಡದೇ ಸ್ವಲ್ಪ ವಿಳಂಬವಾಗಿತ್ತು. ಆದಾಗ್ಯೂ ನಿರಂತವಾಗಿ ಕಂಪನಿಯ ಜತೆ ಸಂಪರ್ಕದಲ್ಲಿದ್ದು, ಸಂಧಾನ ಪ್ರಯತ್ನಗಳನ್ನು ಮಾಡಿದ್ದರು. ಬಾಕಿ ಪಾವತಿಯ ಪ್ರಯತ್ನದಲ್ಲಿದ್ದರು. ಸುಳ್ಳು ಭರವಸೆಗಳನ್ನು ನೀಡಿದ ಕಂಪನಿ ಅವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಿತ್ತು" ಎಂದು ದೂರಿದ್ದಾರೆ.

ತಂದೆಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುವುದು ನಿಲ್ಲಿಸುವಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರ ಗಮನ ಹರಿಸುವಂತೆಯೂ ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News