ಕ್ರೈಸ್ತ ಮಿಷನರಿಗಳ ವಿರುದ್ಧ SIT ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ʼಸುಪ್ರೀಂʼ ತರಾಟೆ
ಹೊಸದಿಲ್ಲಿ : ಮದರ್ ತೆರೆಸಾ ಝಾರ್ಖಂಡ್ ನಲ್ಲಿ ಸ್ಥಾಪಿಸಿರುವ ದತ್ತಿ ಮಿಷನರಿಯಿಂದ ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತು ವಿಶೇಷ ತನಿಖಾ ತಂಡದ ತನಿಖೆಯನ್ನು ಕೋರಿ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸಲ್ಲಿಸಿದ್ದ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಮ್ಮ ಕಾರ್ಯಸೂಚಿಗೆ ನಮ್ಮನ್ನು ಎಳೆಯಬೇಡಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾ. ಬಿ.ವಿ.ನಾಗರತ್ನ ಮತ್ತು ನೊಂಗಮೈಕಪಮ್ ಕೋಟೀಸ್ವರ್ ಸಿಂಗ್ ಅವರಿದ್ದ ನ್ಯಾಯಪೀಠವು, ಅರ್ಜಿಯಲ್ಲಿ ಕೋರಲಾಗಿರುವ ಪರಿಹಾರ ಆತುರದ್ದಾಗಿರುವುದರಿಂದ, ಈ ಅರ್ಜಿಯನ್ನು ಪರಿಗಣಿಸಲು ಸಾಧ್ಯವವಿಲ್ಲ ಎಂದು ಹೇಳಿತು.
“ನಿಮ್ಮ ಕಾರ್ಯಸೂಚಿಗಳಿಗೆ ಸುಪ್ರೀಂ ಕೋರ್ಟ್ ಅನ್ನು ಎಳೆಯಬೇಡಿ. ಅರ್ಜಿಯಲ್ಲಿ ನೀವು ಯಾವ ಬಗೆಯ ಪರಿಹಾರವನ್ನು ಕೋರಿದ್ದೀರಿ? ನಾವು ಅಂತಹ ನಿರ್ದೇಶನಗಳನ್ನು ನೀಡಲು ಹೇಗೆ ಸಾಧ್ಯ? ಅರ್ಜಿ ಸಂಪೂರ್ಣವಾಗಿ ತಪ್ಪು ಗ್ರಹಿಕೆಯದ್ದು” ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪರ ಹಾಜರಿದ್ದ ವಕೀಲರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತು.
ಮಕ್ಕಳನ್ನು ರಕ್ಷಿಸಲು ಜಾರ್ಖಂಡ್ ನಾದ್ಯಂತ ಇರುವ ಇಂತಹ ಸಂಘಟನೆಗಳ ಕುರಿತು ಕಾಲಮಿತಿಯ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಈ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಅಧಿಕಾರವಿದ್ದು, ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆ, 2005ರಡಿಯಲ್ಲಿ ಆಯೋಗವು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದ ನ್ಯಾಯಪೀಠವು, ಅರ್ಜಿಯನ್ನು ವಜಾಗೊಳಿಸಿತು.
ಸಂವಿಧಾನದ 23ನೇ ವಿಧಿಯಡಿ ಖಾತರಿಪಡಿಸಲಾಗಿರುವ ಮಾನವ ಕಳ್ಳಸಾಗಣೆ ನಿಷೇಧದ ಮೂಲಭೂತ ಹಕ್ಕಿನ ಅನುಷ್ಠಾನ ಕೋರಿ 2020ರಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಜಾರ್ಖಂಡ್ ನಲ್ಲಿನ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಉಲ್ಲೇಖಿಸಿದ್ದ ಅರ್ಜಿಯು, ಈ ಕುರಿತು ಸ್ಥಳೀಯ ಪ್ರಾಧಿಕಾರಗಳು ಅಪ್ರಾಪ್ತರನ್ನು ರಕ್ಷಿಸುವಲ್ಲಿ ಉಡಾಫೆಯ ಧೋರಣೆ ಪ್ರದರ್ಶಿಸುತ್ತಿವೆ ಎಂದು ಆರೋಪಿಸಿತ್ತು.