ಗಾಂಜಾ ಸೇವನೆ ದೃಶ್ಯ: ತೆಲುಗು ಸಿನೆಮಾ ‘ಬೇಬಿʼ ತಯಾರಕರು, ನಟಿಯರಿಗೆ ಪೊಲೀಸ್ ಆಯುಕ್ತರ ನೋಟಿಸ್
ಹೈದರಾಬಾದ್ : ಗಾಂಜಾ ಸೇವನೆಗೆಂದು ಕಾಗದವನ್ನು ಸುರಳಿಯಾಗಿ ಇಬ್ಬರು ನಟಿಯರು ಸುತ್ತುತ್ತಿರುವುದನ್ನು ತೋರಿಸಲಾಗಿರುವ ದೃಶ್ಯವಿರುವ ತೆಲುಗು ಸಿನೆಮಾ ಬೇಬಿ ಇದರ ತಯಾರಕರಿಗೆ ಹೈದರಾಬಾದ್ ಪೊಲೀಸ್ ಆಯುಕ್ತರು ನೋಟಿಸ್ ಜಾರಿಗೊಳಿಸಿದ್ದಾರೆ.
ಚಲನಚಿತ್ರದ ನಿರ್ದೇಶಕ ಸಾಯಿ ರಾಜೇಶ್ ನೀಲಂ, ನಿರ್ಮಾಪಕ ಶ್ರೀನಿವಾಸ ಕುಮಾರ್ ನಾಯ್ಡು ಮತ್ತು ಆ ನಿರ್ದಿಷ್ಟ ದೃಶ್ಯದಲ್ಲಿ ಕಾಣಿಸಿದ ನಟಿಯರಾದ ವೈಷ್ಣವಿ ಚೈತನ್ಯ ಮತ್ತು ಕಿರಕ್ ಸೀತಾ ಅವರಿಗೆ ಆಯುಕ್ತರ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಇವರ ಹೊರತಾಗಿ ಚಿತ್ರ ನಿರ್ಮಾಣ ಸಂಸ್ಥೆ ಮಾಸ್ ಮೂವೀ ಮೇಕರ್ಸ್‌ಗೂ ಹಾಜರಾಗಲು ಸೂಚಿಸಲಾಗಿದೆ.
ಚಿತ್ರದ ದೃಶ್ಯದಲ್ಲಿ ಬಡ ಕುಟುಂಬದಿಂದ ಬಂದ ವೈಷ್ಣವಿ (ವೈಷ್ಣವಿ ಚೈತನ್ಯ) ಇಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ ಶ್ರೀಮಂತ ಸಹಪಾಠಿಗಳ ಜೀವನಶೈಲಿಗೆ ತಾನೂ ಹೊಂದಿಕೊಳ್ಳುತ್ತಿರುವುದು ಹಾಗೂ ಆಕೆಯ ಸಹಪಾಠಿ ಸೀತಾ (ಕಿರಕ್ ಸೀತಾ) ಆಕೆಗೆ ರೋಲಿಂಗ್ ಪೇಪರ್ ನೀಡುವುದು ಮತ್ತು ಆಕೆ ಅದನ್ನು ನೆಕ್ಕಿ ಅಂಟಿಸುವುದು ಕಾಣಿಸುತ್ತದೆ.
ಗಾಂಜಾ ಸೇವಿಸುವವರು ಮಾತ್ರ ಈ ರೀತಿ ಕಾಗದವನ್ನು ರೋಲ್ ಮಾಡಿ ಅದನ್ನು ಹಾಗೆ ಅಂಟಿಸುತ್ತಾರೆ ಹಾಗೂ ಇದರಿಂದ ಈ ದೃಶ್ಯದಲ್ಲಿ ಗಾಂಜಾ ಸೇದುತ್ತಿದ್ದಾರೆ ಎಂದು ಅಂದಾಜಿಸಬಹುದು,” ಎಂದು ನೋಟಿಸಿನಲ್ಲಿ ಹೇಳಲಾಗಿದೆ.
ಡ್ರಗ್ಸ್ ಪ್ರಕರಣ ಬೇಧಿಸಿದ ಕುರಿತು ಮಾಹಿತಿ ನೀಡಲು ಗುರುವಾರ ಮಾಧ್ಯಮದ ಜೊತೆ ಮಾತನಾಡಿದ ಪೊಲೀಸ್ ಆಯುಕ್ತ ಸಿ ವಿ ಆನಂದ್ ಈ ನಿರ್ದಿಷ್ಟ ದೃಶ್ಯ ಉಲ್ಲೇಖಿಸಿ ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇಂತಹ ದೃಶ್ಯಗಳನ್ನು ಸೇರಿಸದಂತೆ ಚಿತ್ರ ತಯಾರಕರನ್ನು ವಿನಂತಿಸಿದರು.