ಮೋಟಿವೇಶನಲ್‌ ಸ್ಪೀಕರ್‌ ಎಂಬ ವಂಚಕನ ಜಾಲ

Update: 2023-12-30 04:43 GMT

ಎಲ್ಲ ಭರವಸೆಗಳೂ ಚುನಾವಣಾ ಜುಮ್ಲಾ ಆಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಕಲಿಗಳ ಹಾಗೂ ವಂಚಕರ ಕಾಟ ವಿಪರೀತವಾಗಿಬಿಟ್ಟಿದೆ. ವೈವಿಧ್ಯಮಯ ರೀತಿಗಳಲ್ಲಿ, ವಿಧಾನಗಳಲ್ಲಿ, ಶೈಲಿಗಳಲ್ಲಿ ಜನರನ್ನು ವಂಚಿಸುವವರ ಸಂಖ್ಯೆ ಇತ್ತೀಚೆಗೆ ತೀರಾ ಹೆಚ್ಚಾಗಿಬಿಟ್ಟಿದೆ. ರಾಜಕೀಯದಲ್ಲಿ, ಶಿಕ್ಷಣದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ, ಉದ್ಯಮದಲ್ಲಿ, ಕೊನೆಗೆ ನೋಡಿದರೆ ಯೂಟ್ಯೂಬ್‌ನಲ್ಲೂ ಈ ವಂಚಕರ ಪಡೆಯೇ ಇದೆ.

ಒಂದು ಕಡೆ ಸರಕಾರದ ನೀತಿಗಳಿಂದಾಗಿ ಉನ್ನತ ಶಿಕ್ಷಣ ಪಡೆಯಲು ಹೆಣಗಾಡುತ್ತಾ, ಉದ್ಯೋಗ ಇಲ್ಲದೆ, ಹೇಗಾದರೂ ಮಾಡಿ ಹಣ ಸಂಪಾದಿಸಲು ಸುಲಭದ ದಾರಿ ಹುಡುಕಬೇಕೆಂಬ ಹತಾಶೆಗೆ ಒಳಗಾಗಿರುವ ಈ ದೇಶದ ಲಕ್ಷಾಂತರ ಯುವಕರು, ವಿದ್ಯಾರ್ಥಿಗಳು. ಇನ್ನೊಂದೆಡೆ ಇಂಥವರನ್ನೇ ಗುರಿಯಾಗಿಸಿ, ಮರುಳು ಮಾಡುವ, ಅವರನ್ನು ಬಳಸಿಕೊಂಡು ತಾವು ಹಣ ಮಾಡುವ ವೈಟ್ ಕಾಲರ್ ಚಾಲಾಕಿಗಳು.

ಇಂಥ ಅನೇಕ ಚಾಲಾಕಿಗಳು ಇವತ್ತು ಮೋಟಿವೇಶನಲ್ ಸ್ಪೀಕರ್ ಎಂಬ ಅತ್ಯಾಕರ್ಷಕ ಅವತಾರದಲ್ಲೂ ಇದ್ದಾರೆ ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ, ವಿವೇಕ್ ಬಿಂದ್ರಾ ಅನ್ನೋ ವ್ಯಕ್ತಿ. ಈ ವಿವೇಕ್ ಬಿಂದ್ರಾ ಹಣ ಮಾಡಲು ಅನುಕೂಲವಾಗುವ, ಲಕ್ಷಾಂತರ ರೂ. ಗಳಿಸಲು ನೆರವಾಗುವ ಕೋರ್ಸ್ ತನ್ನದೆಂದು ಹೇಳಿ ಸಾವಿರಾರು ಯುವಕರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವುದು ಈಗ ಬಯಲಾಗಿದೆ. ಈತನ ಹಗರಣವನ್ನು ಬಯಲಿಗೆಳೆದಿದ್ದು ಇನ್ನೊಬ್ಬ ಮೋಟಿವೇಶನಲ್ ಸ್ಪೀಕರ್ ಹಾಗೂ ಯೂಟ್ಯೂಬರ್ ಸಂದೀಪ್ ಮಹೇಶ್ವರಿ.

ಏನಿದು ಹಗರಣ?

ವಿದ್ಯಾರ್ಥಿಗಳು 40-50 ಸಾವಿರ ರೂ. ಕೊಟ್ಟರೆ ಹೇಗೆ ಅವರು ಪ್ರತೀ ತಿಂಗಳು ಲಕ್ಷ ಲಕ್ಷ ರೂ. ಗಳಿಸಬಹುದೆಂದು ಹೇಳಿಕೊಡುತ್ತೇನೆ ಎನ್ನುತ್ತಾನೆ ಈ ವಿವೇಕ್ ಬಿಂದ್ರಾ. ಕೆಲ ದಿನಗಳ ಹಿಂದಿನವರೆಗೂ ಎಲ್ಲವೂ ಸರಿಯಾಗಿಯೇ ಸಾಗಿತ್ತು. ವಿವೇಕ್ ಬಿಂದ್ರಾ ತನ್ನ ಐಡಿಯಾ ಸೇಲ್ ಮಾಡಿ ಕೋಟಿ ಕೋಟಿ ರೂ. ಗಳಿಸುತ್ತಾ ಇದ್ದ. ವಾಸ್ತವವಾಗಿ, ಸಂದೀಪ್ ಮಹೇಶ್ವರಿಯ ಮೋಟಿವೇಶನಲ್ ಶೋನಲ್ಲಿ ಸ್ವತಃ ಭಾಗವಹಿಸಿ ಜನರಿಗೆ ಹೇಳುವ ಮಟ್ಟಿಗೆ ಬಿಂದ್ರಾ ಆಪ್ತನಾಗಿದ್ದ.

ಆದರೆ ಈಚೆಗೆ, ಬಿಂದ್ರಾ 50 ಸಾವಿರದ ಕೋರ್ಸ್ ಅನ್ನು ಮಾರುವ ಸ್ಕೀಮ್ ಹಿಂದಿನ ಅಸಲಿಯತ್ತು ಏನು ಅನ್ನುವುದನ್ನು ಕೆಲ ವಿದ್ಯಾರ್ಥಿಗಳು ಸಂದೀಪ್ ಮಹೇಶ್ವರಿ ಬಳಿ ಹೇಳಿದರು. ಬಿಂದ್ರಾ ಸ್ಕೀಮ್ ಹೇಗಿತ್ತೆಂದರೆ, ಹಣ ಮಾಡಬೇಕು ಎಂದರೆ ಆತನ ಕೋರ್ಸ್ ಅನ್ನು ಸ್ವತಃ ಅವರು 50 ಸಾವಿರ ರೂ. ಕೊಟ್ಟು ಖರೀದಿಸಬೇಕು. ಆಮೇಲೆ ಆ ವಿದ್ಯಾರ್ಥಿಗಳು ಅದೇ ಕೋರ್ಸನ್ನು ಬೇರೆ ಬೇರೆಯವರಿಗೆ ಮಾರಬೇಕಿತ್ತು. ಸರಳವಾಗಿ ಹೇಳಬೇಕೆಂದರೆ, ಅದೊಂದು ಮಲ್ಟಿಲೆವೆಲ್ ಮಾರ್ಕೆಟಿಂಗ್ ಅಥವಾ ಪಿರಮಿಡ್ ಸ್ಕೀಮ್ ಆಗಿತ್ತು. ಮಾತ್ರವಲ್ಲ, ಇದು ಸರಕಾರ ನಿಷೇಧಿಸಿರುವ ಮಾದರಿಯ ಸ್ಕೀಮ್ ಆಗಿತ್ತು. ಸಾವಿರಾರು ಮಕ್ಕಳು ಆತನ ಕೋರ್ಸ್ ಮಾರುವ ಇದೇ ಕೆಲಸದಲ್ಲಿ ತೊಡಗಿದ್ದರು.

ವಿವೇಕ್ ಬಿಂದ್ರಾ ಹಗರಣವನ್ನು ಬಯಲು ಮಾಡಲು ಸಂದೀಪ್ ಮಹೇಶ್ವರಿ ಮುಂದಾಗಿಬಿಟ್ಟರು. ‘ಸ್ಟಾಪ್ ವಿವೇಕ್ ಬಿಂದ್ರಾ’ ಎಂಬ ಹ್ಯಾಶ್‌ಟ್ಯಾಗ್ ಜೊತೆ ಬಿಂದ್ರಾ ಮೇಲೆ ಮುಗಿಬಿದ್ದರು. ಬಿಂದ್ರಾ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಂದ ತೆಗೆದುಕೊಂಡ 500 ಕೋಟಿಯಷ್ಟು ಹಣವನ್ನು ಅವರಿಗೆ ಹಿಂದಿರುಗಿಸುವಂತೆ ಒತ್ತಾಯ ಮಾಡಿದರು. ಮೊನ್ನೆ ಮೊನ್ನೆಯವರೆಗೂ ತನ್ನ ಶೋನ ಅತಿಥಿಯಾಗಿದ್ದವನ ವಿರುದ್ಧ ಅವರು ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದರು.

ಎಷ್ಟು ದೊಡ್ಡ ಅಕ್ರಮ?

ಇದನ್ನು ಮಹೇಶ್ವರ್ ಪೆರಿ ಎಂಬವರು ಬಯಲು ಮಾಡಿದ್ದಾರೆ. ಮಹೇಶ್ವರ್ ಪೆರಿ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಹೆಸರುಳ್ಳವರು. ಶೈಕ್ಷಣಿಕ ಕೋರ್ಸ್‌ಗಳ ಬಗ್ಗೆ ಬಹಳ ತಿಳಿದುಕೊಂಡವರು. ಅವರು ಯೂಟ್ಯೂಬರ್ ಅಲ್ಲ. ಅವರು ಕೆರಿಯರ್ 360 ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ. ವಿವೇಕ್ ಬಿಂದ್ರಾ ವಿಚಾರವಾಗಿ ಪೆರಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಮುಖ್ಯವಾಗಿ ಆ ವ್ಯಕ್ತಿಯ ಕಡೆಗೆ ಪೆರಿ ಗಮನ ಹೋದದ್ದೇ ‘ಹತ್ತೇ ದಿನದಲ್ಲಿ ಎಂಬಿಎ’ ಎಂಬ ಆತನ ಕೋರ್ಸ್ ಕಾರಣದಿಂದಾಗಿ. ಯಾವುದೇ ಡಿಗ್ರಿ ಪಡೆಯಲು ಯುಜಿಸಿ ಅನುಮೋದಿತ ಕಾಲೇಜುಗಳಲ್ಲಿ ಓದಬೇಕು. ಡಿಗ್ರಿ ಸರ್ಟಿಫಿಕೇಟು ಸಿಗುವುದು ಆ ಕಾಲೇಜು ಯಾವ ವಿವಿ ಅಡಿಯಲ್ಲಿ ಬರುತ್ತದೆಯೋ ಆ ವಿವಿಯಿಂದ. ಕಾಲೇಜಿನಿಂದ ಅಲ್ಲ. ಹಾಗೆ ವಿವಿ ಕೊಡಬೇಕಾದ ಡಿಗ್ರಿ ಸರ್ಟಿಫಿಕೇಟ್ ಅನ್ನು ಯಾರೋ ಹೇಗೆ ಕೊಡಲು ಸಾಧ್ಯ? ಭಾರತದಲ್ಲಿ ಎಂಬಿಎ 2 ವರ್ಷದ ಕೋರ್ಸ್. ಓದಿ ಕಲಿಯಬೇಕಾದ ಅಂಥದ್ದನ್ನು ಹತ್ತು ದಿನದಲ್ಲಿ ಯಾರೋ ಕೊಡುತ್ತಾರೆ ಎನ್ನುವುದೇ ಅಕ್ರಮ ಎನ್ನುತ್ತಾರೆ ಪೆರಿ.

ಬಿಂದ್ರಾ ಶ್ರೀಲಂಕಾದ ಮುಕ್ತ ವಿವಿಯೊಂದರಿಂದ ಫಿಲಾಸಫಿಯಲ್ಲಿ ಡಾಕ್ಟರೇಟ್ ಮಾಡಿರುವ ವ್ಯಕ್ತಿಯೆನ್ನಲಾಗುತ್ತಿದೆ. ಆದರೆ ಆ ಯೂನಿವರ್ಸಿಟಿಯ ವೆಬ್‌ಸೈಟ್ ಓಪನ್ ಆಗುವುದೇ ಇಲ್ಲ. ಆದರೆ ಜನ ಮಾತ್ರ ಈ ವಿವೇಕ್ ಬಿಂದ್ರಾ ಹೆಸರಿನ ಜೊತೆಗಿರುವ ಡಾಕ್ಟರ್ ಎಂಬುದನ್ನು ನೋಡಿ ಮರುಳಾಗಿದ್ದಾರೆ.

ಇಂಟರ್‌ನ್ಯಾಷನಲ್ ಬಿಸಿನೆಸ್ ಕನ್ಸಲ್ಟಂಟ್ ಎನ್ನುವುದು ಬಿಂದ್ರಾನ ಮತ್ತೊಂದು ಕೋರ್ಸ್. ಅದನ್ನು ಮಾಡಿಕೊಂಡರೆ ತಿಂಗಳಿಗೆ ಒಂದು ಲಕ್ಷದಿಂದ 20 ಲಕ್ಷ ರೂ.ವರೆಗೆ ಗಳಿಸಬಹುದು ಎಂದು ಆತ ಹೇಳಿಕೊಳ್ಳುತ್ತಾನೆ. ಹಾಗಾದರೆ ಈ ದೇಶದಲ್ಲಿ ಐಐಎಂಗಳಂತಹ ಉನ್ನತ ಬಿಝಿನೆಸ್ ಸ್ಕೂಲ್‌ಗಳು ಯಾಕೆ ಬೇಕು? ಎಂಬ ಪ್ರಶ್ನೆಯನ್ನೂ ಪೆರಿ ಎತ್ತುತ್ತಾರೆ.

ಸಂದೀಪ್ ಮಹೇಶ್ವರಿ ಶೋ ಬಯಲು ಮಾಡಿದ ಪ್ರಕಾರ, 50 ಸಾವಿರ ಕೊಟ್ಟ ಬಳಿಕ ಯಾವ ವಿದ್ಯಾರ್ಥಿಯೂ ದೊಡ್ಡ ಬಿಸಿನೆಸ್ ನಡೆಸಲು ಸಾಧ್ಯವಿಲ್ಲ. ಅವರು ಬಿಂದ್ರಾ ಕೋರ್ಸ್ ಅನ್ನು ಜನರಿಗೆ ಮಾರಿ ಕಮಿಷನ್ ಪಡೆಯುವ ಸಣ್ಣ ಸೇಲ್ಸ್‌ಮ್ಯಾನ್ ಆಗಬಹುದು ಅಷ್ಟೆ. ಆದರೆ, ಆ ವಿದ್ಯಾರ್ಥಿಗಳು ಕೊಟ್ಟ ಫೀಸ್‌ನಿಂದಾಗಿ ಬಿಂದ್ರಾ ಮಾತ್ರ ಭಾರೀ ಶ್ರೀಮಂತನಾದ. ಒಂದೆಡೆ ಫೀಸ್ ಹಣ, ಇನ್ನೊಂದೆಡೆ ಕೋರ್ಸ್ ಕಮಿಷನ್ ಎರಡೂ ಬಿಂದ್ರಾಗೆ ಬರುತ್ತಿತ್ತು. ಪೆರಿ ಹೇಳುವ ಪ್ರಕಾರ, 2022-23ರಲ್ಲಿ ಬಿಂದ್ರಾ ಗಳಿಸಿದ್ದು 308 ಕೋಟಿ ರೂ. ಇದರಲ್ಲಿ ಹಿಂದಿರುಗಿಸದ ಶುಲ್ಕವೇ 227 ಕೋಟಿ ರೂ.

ಬಿಂದ್ರಾ ಯಾರನ್ನು ಟಾರ್ಗೆಟ್ ಮಾಡುತ್ತಾನೆ ಎನ್ನುವುದರ ಬಗ್ಗೆಯೂ ಪೆರಿ ಗಮನ ಸೆಳೆಯುತ್ತಾರೆ. ಬಿಂದ್ರಾ ಟಾರ್ಗೆಟ್ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್‌ಗಳಲ್ಲ. ಏನೂ ಗೊತ್ತಿಲ್ಲದ, ಮುಂದೇನು ಮಾಡಬೇಕು, ಹೇಗೆ ಬದುಕೋದು ಎಂದು ಚಿಂತೆಯಲ್ಲಿರುವ ವಿದ್ಯಾರ್ಥಿಗಳು, ಯುವಜನರು.

ಯಶಸ್ಸು ಗಳಿಸಲು ಯಾವುದಾದರೂ ಸುಲಭದ ದಾರಿ ಇದೆಯೇ ಎಂದು ನೋಡುವ ಅವರಿಗೆ ಬಿಂದ್ರಾ ಥರದವರು ಸಿಕ್ಕಿ 10 ದಿನದ ಎಂಬಿಎ ಕೋರ್ಸ್ ಬಗ್ಗೆ ಹೇಳಿದರೆ ಮರುಳಾಗದೆ ಇರುತ್ತಾರೆಯೇ? ಸೋಷಿಯಲ್ ಮೀಡಿಯಾದಲ್ಲಿ ಈತ ದೊಡ್ಡ ಐಕಾನ್ ಅಗಿದ್ದ. ದುರಂತವೆಂದರೆ ವೀಡಿಯೊದಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಮಾತಾಡುವವ, ಬೇರೆಯವರಿಗೆ ಮೋಟಿವೇಶನ್ ಮಾಡುವ ಆತನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೇ ಬೆಳಕಿಗೆ ಬಂದಂತೆ ಹೆಂಡತಿಯೊಡನೆ ಜಗಳವಾಡಿ, ಅವನ ವಿರುದ್ಧ ಡೊಮೆಸ್ಟಿಕ್ ವಯಲೆನ್ಸ್ ಕೇಸ್ ಕೂಡಾ ಆಗಿತ್ತು!.

ಇದೇ ಮನುಷ್ಯ, ಶೂದ್ರರೆಂದರೆ ಹೇಳಿದ ಕೆಲಸ ಮಾಡಿಕೊಂಡಿರಬೇಕಾದ ವರು. ಅವರನ್ನು ತೆಗೆದುಕೊಂಡು ಹೋಗಿ ನಾಯಕತ್ವದ ಸ್ಥಾನದಲ್ಲಿ ಕೂರಿಸಿ ಬಿಟ್ಟರೆ ಎಲ್ಲ ಅಯೋಮಯವಾಗುತ್ತದೆ ಎಂದು ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದ.

ಮೋಟಿವೇಶನಲ್ ಸ್ಪೀಕರ್ ಎಂಬ ಅವತಾರದಲ್ಲಿದ್ದ ವಂಚಕನ ಬಣ್ಣವೇನೋ ಬಯಲಾಗಿದೆ. ಆದರೆ, ಬಣ್ಣದ ಮಾತು ನಂಬಿ ಮರುಳಾಗುವ ನಮ್ಮ ಯುವಕರು, ಓದಿ, ಸ್ವಪ್ರಯತ್ನದಿಂದ ಮೇಲೇರಬೇಕಿರುವುದರ ಬದಲು ಅಡ್ಡದಾರಿಯ ಕಡೆ ಆಕರ್ಷಿತರಾಗುವ ವಿದ್ಯಾರ್ಥಿಗಳು ಇನ್ನಾದರೂ ಪಾಠ ಕಲಿಯುತ್ತಾರೆಯೇ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಆರ್. ಕುಮಾರ್

contributor

Similar News