ನಾಲ್ಕು ವರ್ಷಗಳ ಪ್ರಶಸ್ತಿಗಳಿಗಿಲ್ಲ ಮುಕ್ತಿ; ಮತ್ತೆ ಹೊಸ ಪ್ರಶಸ್ತಿಗಳತ್ತ ಸರಕಾರದ ಆಸಕ್ತಿ

Update: 2024-01-23 05:14 GMT

ಕೆಲವೊಮ್ಮೆ ಸರಕಾರ ತೆಗೆದುಕೊಳ್ಳುವ ನಿರ್ಧಾರಗಳು ವಿಕ್ಷಿಪ್ತವಾಗಿರುತ್ತವೆ ಎನ್ನುವುದಕ್ಕೆ ಸಾಕ್ಷಿ ಹಿಂದಿನದನ್ನು ಹಿಂದಿಕ್ಕಿ ಮತ್ತೆ ಹೊಸ ಪ್ರಶಸ್ತಿಗಳ ಘೋಷಣೆ ಮಾಡುತ್ತಿರುವುದು.

ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಡಮಾಡುವ ಪ್ರಶಸ್ತಿಗಳೇ ನಾಲ್ಕು ವರ್ಷಗಳಿಂದ ಬಾಕಿ ಇದ್ದು ಈಗಾಗಲೇ ಮೂರು ವರ್ಷಗಳ ಫಲಾನುಭವಿಗಳನ್ನೂ ಆಯ್ಕೆ ಮಾಡಿ ಘೋಷಿಸಲಾಗಿದೆ. ಹಾಗೂ ಪ್ರಸಕ್ತ ವರ್ಷದ ಪ್ರಶಸ್ತಿಗಳಿಗೂ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.

ಕರ್ನಾಟಕ ಸರಕಾರವು ಪ್ರತೀ ವರ್ಷ ಒಟ್ಟು ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಕೊಡುತ್ತದೆ. ರಾಷ್ಟ್ರೀಯ ಪ್ರಶಸ್ತಿ ವಿಭಾಗದಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗಳು ತಲಾ ಹತ್ತು ಲಕ್ಷ ರೂ. ಮೊತ್ತದ ಪ್ರಶಸ್ತಿಗಳಾಗಿವೆ.

ಹಾಗೆಯೇ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿಗಳು ತಲಾ ಐದು ಲಕ್ಷ ರೂ. ಮೊತ್ತದ ಪ್ರಶಸ್ತಿಗಳಾಗಿವೆ.

ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ ವಿಭಾಗದಲ್ಲಿ ಪಂಪ ಪ್ರಶಸ್ತಿ ಹಾಗೂ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ, ನಾಡೋಜ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗಳ ಮೊತ್ತವೂ ತಲಾ ಐದು ಲಕ್ಷ ರೂ.ಗಳಾಗಿವೆ.

ಕಲಾ ಪ್ರಶಸ್ತಿ ವಿಭಾಗದಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ (ವಾದನ) ಹಾಗೂ ಜಾನಪದ ಶ್ರೀ ಪ್ರಶಸ್ತಿ (ಗಾಯನ) ಈ ನಾಲ್ಕೂ ಪ್ರಶಸ್ತಿಗಳೂ ತಲಾ ಐದು ಲಕ್ಷ ರೂ. ಮೊತ್ತದ್ದಾಗಿವೆ. ಸಂಗೀತ ಮತ್ತು ನೃತ್ಯ ಪ್ರಶಸ್ತಿ ವಿಭಾಗದಲ್ಲಿ ಶ್ರೀ ನಿಜಗುಣ ಪುರಂದರ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ಶಾಂತಲಾ ನಾಟ್ಯ ಪ್ರಶಸ್ತಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗಳೂ ತಲಾ ರೂ. ಐದು ಲಕ್ಷದ್ದಾಗಿವೆ.

ಒಟ್ಟಾರೆಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಾರ್ಷಿಕವಾಗಿ 22 ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದೆ. ಎಲ್ಲಾ ಅಕಾಡಮಿಗಳು, ಪ್ರಾಧಿಕಾರಗಳು ಕೊಡುವ ಪ್ರಶಸ್ತಿಗಳು ಇದರಲ್ಲಿ ಸೇರಿಲ್ಲ. ನವೆಂಬರ್ 1ರಂದು ಕೊಡುವ ರಾಜ್ಯೋತ್ಸವ ಪ್ರಶಸ್ತಿಗಳೂ ಪ್ರತ್ಯೇಕವಾದವು. ಅವುಗಳನ್ನು ಹೊರತು ಪಡಿಸಿ ಮೂರು ವರ್ಷಗಳ ಘೋಷಿತ ಪ್ರಶಸ್ತಿಗಳು ಒಟ್ಟು 66 ಹಾಗೂ ಈ ವರ್ಷ ಘೋಷಿಸಬೇಕಾದ ಪ್ರಶಸ್ತಿಗಳು 22. ಒಟ್ಟು 88 ಪ್ರಶಸ್ತಿಗಳಾಗಿದ್ದು ಅದರಲ್ಲಿ ಜಯಂತಿಯ ದಿನಗಳಂದು 16 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು ಇನ್ನೂ 72 ಪ್ರಶಸ್ತಿಗಳು ಬಾಕಿ ಇವೆ.

ವಾಸ್ತವ ಸಂಗತಿ ಹೀಗಿರುವಾಗ, ಕೊಡಬೇಕಾದ ಪ್ರಶಸ್ತಿಗಳನ್ನೇ ಸರಕಾರ ಇನ್ನೂ ಪ್ರದಾನ ಮಾಡದೆ ಬಾಕಿ ಉಳಿಸಿಕೊಂಡಿರುವಾಗ, ಈಗ ಮತ್ತೆ ಹೊಸದಾಗಿ ವಿಶೇಷ ಪ್ರಶಸ್ತಿಗಳನ್ನು ಕೊಡಲು ನಿರ್ಧರಿಸಿರುವುದು ಪ್ರಶ್ನಾರ್ಹವಾಗಿವೆ. ಹೊಸ ಸರಕಾರ ಬಂದು ಒಂಭತ್ತು ತಿಂಗಳು ತುಂಬಿದ್ದರೂ ಇನ್ನೂ ಪ್ರಶಸ್ತಿಗಳ ಹೆರಿಗೆ ಆಗದೆ ಇರುವುದು ಸರಕಾರದ ಸಾಂಸ್ಕೃತಿಕ ಅನಾಸಕ್ತಿಗೆ ಪುರಾವೆಯಾಗಿದೆ. ಅಕಾಡಮಿ, ಪ್ರಾಧಿಕಾರ, ರಂಗಾಯಣಗಳಿಗೂ ಇನ್ನೂ ನಿರ್ದೇಶಕರು/ಅಧ್ಯಕ್ಷರು/ಸದಸ್ಯರನ್ನು ನೇಮಿಸದಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಷ್ಕ್ರಿಯತೆಗೆ ಸಾಕ್ಷಿಯಾಗಿದೆ.

ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡು ಐವತ್ತು ವರ್ಷಗಳಾಗಿರುವ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಐವತ್ತು ಸಾಧಕ ಗಣ್ಯರಿಗೆ ರಾಜ್ಯ ಮಟ್ಟದ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿಯನ್ನು ಮಾರ್ಚ್ ತಿಂಗಳಲ್ಲಿ ಪ್ರದಾನ ಮಾಡಲು ನಿರ್ಧರಿಸಿ ಸಾಧಕರ ಆಯ್ಕೆಗೆ ಆದೇಶಿಸಿದೆ. ಸಾಧಕರನ್ನು ಗುರುತಿಸಿ ಪ್ರತೀ ಜಿಲ್ಲೆಗೆ 5 ಜನರ ಹೆಸರನ್ನು ಕಳಿಸುವಂತೆ ಸಂಸ್ಕೃತಿ ಇಲಾಖೆಯ ಸಚಿವರು ತಮ್ಮ ಇಲಾಖಾ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ.

ಈ ರೀತಿಯ ಸರಕಾರಿ ಪ್ರಾಯೋಜಿತ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲು ಆಯಾ ಕ್ಷೇತ್ರದ ತಜ್ಞರ ಸಮಿತಿಯನ್ನು ರಚಿಸುವುದು ಸಂಪ್ರದಾಯ. ಆದರೆ ಈಗ ಅದನ್ನೂ ಪರಿಗಣಿಸದೆ ಆ ಕೆಲಸವನ್ನು ಇಲಾಖೆಯ ಅಧಿಕಾರಿಗಳೇ ಮಾಡುತ್ತಿರುವುದು ಇನ್ನೊಂದು ವಿಪರ್ಯಾಸ. ಆಡಳಿತದ ಹೊಣೆಗಾರಿಕೆ ಹೊತ್ತ ಅಧಿಕಾರಿಗಳು ಕಲೆ-ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಆಳವಾದ ಅರಿವನ್ನು ಹಾಗೂ ಆಯಾ ಕ್ಷೇತ್ರದ ಸಾಧಕರ ಬಗ್ಗೆ ವಿವರವಾದ ಮಾಹಿತಿಯನ್ನೂ ಹೊಂದಿರುವುದಿಲ್ಲ ಹಾಗೂ ರಾಜಕೀಯ ಶಕ್ತಿಗಳ ಒತ್ತಡಕ್ಕೆ ಅಧಿಕಾರಿಗಳು ಸುಲಭವಾಗಿ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಪಾರದರ್ಶಕವಾಗಿ ಅರ್ಹರನ್ನು ಅಧಿಕಾರಿಗಳು ಆಯ್ಕೆ ಮಾಡುತ್ತಾರೆಂಬುದೇ ಅನುಮಾನ. ಪ್ರಶಸ್ತಿಗೆ ಅರ್ಹ ಸಾಧಕರ ಆಯ್ಕೆಗೆ ಸಮಿತಿ ಅಥವಾ ಸಲಹಾ ಸಮಿತಿಯನ್ನು ಮಾಡಿದ್ದೇ ಆದರೆ ಆ ಸಮಿತಿ ಶಿಫಾರಸು ಮಾಡಿದವರ ಲಿಸ್ಟಿನಲ್ಲೇ ಸಾಧಕರನ್ನು ಅಂತಿಮಗೊಳಿಸುವ ಅನಿವಾರ್ಯತೆ ಸರಕಾರಕ್ಕಿದೆ. ಅದನ್ನು ತಪ್ಪಿಸಿ ತಮಗೆ ಬೇಕಾದವರಿಗೆ ಪ್ರಶಸ್ತಿಗಳನ್ನು ಕೊಡಮಾಡಲು ಅಧಿಕಾರಿಗಳ ಮೂಲಕ ಆಳುವ ಸರಕಾರ ಪ್ರಯತ್ನಿಸುತ್ತಿದೆಯೇ?

ಕಳೆದ ನವೆಂಬರ್ 1ರಂದು ಪ್ರದಾನ ಮಾಡಲಾದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಸಲಹಾ ಸಮಿತಿಯ ಮೂಲಕ ಆಯ್ಕೆ ಮಾಡಿದ್ದರಿಂದಾಗಿ ಅನೇಕ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು. ಅಂತಹ ಆಕಾಂಕ್ಷಿಗಳಲ್ಲಿ ಆಳುವ ಪಕ್ಷದ ಹಿತೈಷಿಗಳು, ಕಾರ್ಯಕರ್ತರು ಹಾಗೂ ರಾಜಕೀಯ ವ್ಯಕ್ತಿಗಳ ಸಹವರ್ತಿಗಳೂ ಬೇಕಾದಷ್ಟಿದ್ದರು. ಅಂತಹವರಿಂದ ಸರಕಾರದ ಮೇಲೆ ಪ್ರಶಸ್ತಿಗಾಗಿ ತೀವ್ರವಾದ ಒತ್ತಡವೂ ಇತ್ತು. ಅಂತಹವರಲ್ಲಿ ಕೆಲವರನ್ನಾದರೂ ಸಮಾಧಾನ ಪಡಿಸಲು ಸುವರ್ಣ ಕರ್ನಾಟಕ ಸಂಭ್ರಮದ ನೆಪದಲ್ಲಿ ಮತ್ತೆ ಹೊಸದಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆಯೇ? ಎನ್ನುವ ಸಂದೇಹ ಕಾಡದೇ ಇರದು. ಯಾಕೆಂದರೆ ಈ ವಿಶೇಷ ಪ್ರಶಸ್ತಿಗಳಿಗಾಗಿ ನೇರವಾಗಿ ಅಧಿಕಾರಿಗಳ ಮೂಲಕ ಸಾಧಕರನ್ನು ಆಯ್ಕೆ ಮಾಡುವ ವಿಧಾನವು ಈ ಸಂದೇಹಕ್ಕೆ ಪುರಾವೆ ಒದಗಿಸುವಂತಿದೆ. ಯಾವುದೇ ಅಧಿಕಾರಿಗಳು ಸಚಿವರ ಹಾಗೂ ಸರಕಾರವನ್ನು ಪ್ರಶ್ನಿಸುವುದು ಅಸಾಧ್ಯವಾಗಿರುವುದರಿಂದ ಆಳುವವರು ತಮಗೆ ಬೇಕಾದವರಿಗೆ ಪ್ರಶಸ್ತಿ ಘೋಷಿಸುವ ಸಾಧ್ಯತೆಗಳೇ ಹೆಚ್ಚಾಗಿವೆ.

ಒಂದು ತಿಂಗಳ ಹಿಂದೆ ಡಿಸೆಂಬರ್ 15 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯಾಗಿರುವ ಡಾ. ಧರಣಿದೇವಿಯವರು ಆಯ್ದ ರಂಗಕರ್ಮಿಗಳ ಸಮಾಲೋಚನಾ ಸಭೆಯನ್ನು ಕರೆದಿದ್ದರು. ಪ್ರಶಸ್ತಿ ಪ್ರದಾನ ವಿಳಂಬದ ಬಗ್ಗೆ ಉತ್ತರಿಸುತ್ತಾ ಜನವರಿ ತಿಂಗಳಲ್ಲಿ ಎರಡು ಮೂರು ಕಂತುಗಳಲ್ಲಿ ಬಾಕಿ ಇರುವ ಎಲ್ಲಾ 72 ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಅಷ್ಟೇ ಯಾಕೆ ಕಳೆದ ತಿಂಗಳು ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಮಾನ್ಯ ಎಂಎಲ್‌ಸಿ ವಿಶ್ವನಾಥರವರು ಬಾಕಿ ಇರುವ ಪ್ರಶಸ್ತಿಗಳ ಕುರಿತು ಪ್ರಶ್ನೆ ಎತ್ತಿದ್ದರು. ಜನವರಿ ತಿಂಗಳಲ್ಲಿ ಬಾಕಿ ಇರುವ ಪ್ರಶಸ್ತಿಗಳನ್ನೆಲ್ಲಾ ಪ್ರದಾನ ಮಾಡುವುದಾಗಿ ಸಂಸ್ಕೃತಿ ಇಲಾಖೆಯ ಸಚಿವರು ಉತ್ತರ ಕೊಟ್ಟಿದ್ದರು.

ಆದರೆ... ಇಲ್ಲಿವರೆಗೂ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಈ ವರ್ಷದ ಪ್ರಶಸ್ತಿಗಳನ್ನು ಇನ್ನೂ ಘೋಷಿಸಿಲ್ಲ. ಆದರೆ ಮತ್ತೆ ಹೊಸದಾಗಿ ಪ್ರಶಸ್ತಿಗಳನ್ನು ಕೊಡುವ ನಿರ್ಣಯ ತೆಗೆದುಕೊಳ್ಳುವುದಕ್ಕೆ ಇತಿಮಿತಿಯಿಲ್ಲ.

ಸರಕಾರದ ಆದೇಶವಾಗಿ ಆರೇಳು ವರ್ಷಗಳಾದರೂ ಇನ್ನೂ ಸಾಂಸ್ಕೃತಿಕ ನೀತಿ ಜಾರಿಯಾಗಿಲ್ಲ. ಅದೇನಾದರೂ ಅನುಷ್ಠಾನಕ್ಕೆ ಬಂದಿದ್ದೇ ಆದರೆ ಕಡ್ಡಾಯವಾಗಿ ಆಯಾ ವರ್ಷದ ಪ್ರಶಸ್ತಿಗಳನ್ನು ಕಾಲಮಿತಿಯಲ್ಲಿ ಕೊಡಲೇ ಬೇಕಾಗುತ್ತದೆ. ಹೀಗೆ ಮೂರ್ನಾಲ್ಕು ವರ್ಷಗಳ ಕಾಲ ಪ್ರಶಸ್ತಿಗಳಿಗೆ ಸಾಧಕರ ಹೆಸರನ್ನು ಘೋಷಿಸಿ ಪ್ರದಾನ ಮಾಡದೆ ವಿಳಂಬ ಮಾಡುವುದರಿಂದ ಪ್ರಶಸ್ತಿಯ ಮೌಲ್ಯವೂ ಕಡಿಮೆಯಾಗುತ್ತದೆ. ಪ್ರಶಸ್ತಿ ಪಡೆದವರಲ್ಲಿ ಆಸಕ್ತಿಯೂ ಇಲ್ಲವಾಗುತ್ತದೆ ಹಾಗೂ ಕೆಲವರು ಪ್ರಶಸ್ತಿ ಪಡೆಯದೆ ಮರಣ ಹೊಂದಿರುವ ದಾರುಣತೆಯೂ ನಡೆದು ಹೋಗಿದೆ.

’ಕರ್ನಾಟಕ ಸುವರ್ಣ ಸಂಭ್ರಮ’ ಪ್ರಶಸ್ತಿಗೆ ಸಾಧಕರನ್ನು ಘೋಷಿಸುವ ಮೊದಲು ಬಾಕಿ ಇರುವ ಎಲ್ಲಾ ಪ್ರಶಸ್ತಿಗಳನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರದಾನ ಮಾಡಬೇಕು. ಪ್ರಶಸ್ತಿ ಘೋಷಿತವಾಗಿ ಮರಣ ಹೊಂದಿದವರಿಗೆ ಮರಣೋತ್ತರವಾಗಿ ಪ್ರಶಸ್ತಿ ಕೊಡಬೇಕು. ಹೊಸ ಪ್ರಶಸ್ತಿಗಳಿಗಾಗಿ ಸಾಧಕರ ಆಯ್ಕೆಯ ಹೊಣೆಯನ್ನು ಅಧಿಕಾರಿಗಳಿಗೆ ವಹಿಸದೇ ಕ್ಷೇತ್ರತಜ್ಞರ ಸಲಹಾ ಸಮಿತಿಗೆ ಒಪ್ಪಿಸಬೇಕು. ಆಗ ಮಾತ್ರ ಸಾಂಸ್ಕೃತಿಕ ಕ್ಷೇತ್ರದವರಿಗೆ ಸರಕಾರದ ಮೇಲೆ, ಸಂಸ್ಕೃತಿ ಇಲಾಖೆಯ ಮೇಲೆ, ಪ್ರಶಸ್ತಿಗಳ ಮೇಲೆ ವಿಶ್ವಾಸಾರ್ಹತೆ ಮೂಡಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಶಿಕಾಂತ ಯಡಹಳ್ಳಿ

contributor

Similar News