ಕೃಷಿಯಲ್ಲಿ ಯಶಸ್ಸು ಸಾಧಿಸಿ ಮಾದರಿಯಾದ ಬಿಎ ಪದವೀಧರ ಕಿರಣ್

Update: 2024-01-29 08:49 GMT

ಮಡಿಕೇರಿ: ತಮ್ಮದೇ ತೋಟ ಗದ್ದೆಗಳಲ್ಲಿ ಕೃಷಿ ಮಾಡಿದರೆ ತಿಂಗಳ ವೇತನಕ್ಕಾಗಿ ಯಾರ ಮುಂದೆಯೂ ಕೈ ಚಾಚುವ ಅವಶ್ಯಕತೆ ಇರುವುದಿಲ್ಲ ಎಂದು ಅರಿತ ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಯುವಕ ಎ.ಜಿ. ಕಿರಣ್ ಕೃಷಿಯತ್ತ ಮುಖ ಮಾಡಿ ಯಶಸ್ಸು ಸಾಧಿಸಿ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಮೈಸೂರು ಯೂನಿವರ್ಸಿಟಿಯಲ್ಲಿ ಬಿಎ ಪದವಿ ಮುಗಿಸಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂತಹ ಸಂದರ್ಭದಲ್ಲೂ ಬೆಳಗ್ಗೆ ಸಂಜೆ ಹಾಗೂ ರಜಾ ದಿನಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು ಎ.ಜಿ. ಕಿರಣ್. 6 ವರ್ಷಗಳ ಹಿಂದೆ ತಂದೆ ಮೃತಪಟ್ಟ ನಂತರ ಕೃಷಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಸುಮಾರು 4ಎಕರೆ ಜಾಗದಲ್ಲಿ ಕಾಫಿ, ಕಾಳುಮೆಣಸು,ಏಲಕ್ಕಿ, ಯಾಶ್ ಹಾಗೂ ಪಿಂಕ್ ಕಾಟನ್ ಥಳಿಯಂತ ಬಟರ್ ಫ್ರೂಟ್, ಸಪೋಟ, ಸೇಬಿನ ಗಿಡ, ಸೀಬೆ, ದಾಳಿಂಬೆ ಗಿಡ, ಬಾಳೆ ಗಿಡಗಳು, ತೋಟದ ಶುಂಠಿ ಇನ್ನಿತರ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯಗಳಿಸುತ್ತಿದ್ದಾರೆ.

ತೋಟದ ಮಧ್ಯದಲ್ಲಿ ಪಕ್ಷಿಗಳಿಗೋಸ್ಕರ ಪಪ್ಪಾಯ ಗಿಡಗಳನ್ನು ಹಾಕಿದ್ದಾರೆ. ಕೆಸವಿನಗೆಂಡೆ, ತರಕಾರಿಗಳು,ಮರಗೆಣಸು, ನೆಲ್ಲಿಕಾಯಿ ಮರ, ಕಿತ್ತಳೆ ಮರಗಳನ್ನೂ ಬೆಳೆಸಿದ್ದ ಇವರು ನಾಟಿಕೋಳಿ ಸಾಕಣೆ, ಹಂದಿ, ಜೇನುಹುಳ ಸಾಕಣೆ ಹೀಗೆ ಇತ್ಯಾದಿ ಕೃಷಿಯಲ್ಲಿ ತೊಡಗಿಸಿ ಕೊಂಡು ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ. ಕಾಫಿ ತಳಿಗಳಾದ ಅರೆಬಿಕಾ, ರೋಬಸ್ಟಾ ಕಾಫಿ ಬೆಳೆದಿದ್ದಾರೆ. ಪ್ರತಿ ವರ್ಷ ಅರೆಬಿಕಾ ಸುಮಾರು 25 ಚೀಲ ಪಾರ್ಚ್ ಮೆಂಟ್ ,ರೋಬಸ್ಟಾ 35 ಚೀಲ ಚರಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ 1,280ಕೆಜಿ ಕಾಳು ಮೆಣಸು ಮಾರಾಟ ಮಾಡಿದ್ದಾರೆ. ಇದರ ಜತೆಗೆ ಕಾಫಿ ಹಾಗೂ ಕಾಳುಮೆಣಸು ನರ್ಸರಿಯನ್ನೂ ಮಾಡುತ್ತಿದ್ದ ಎ.ಜಿ. ಕಿರಣ್ ಅವರು ಕೂಲಿಯಾಳುಗಳನ್ನು ಕೆಲಸಕ್ಕೆ ಕರೆಯದೇ ತಾವೇ ಸಂಪೂರ್ಣ ತೋಟದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.

ಸುಮಾರು 200 ಅಡಿಕೆ ಮರ, ತೆಂಗಿನ ಮರಗಳನ್ನು ಸಹ ನೆಟ್ಟಿದ್ದು , ಇದೀಗ ಅಡಿಕೆ ಮರಗಳು ಫಸಲು ನೀಡುವ ಹಂತಕ್ಕೆ ಬಂದಿವೆ. ಅಷ್ಟೇ ಅಲ್ಲದೆ ತಮ್ಮ ಜಾಗದಲ್ಲಿ ಕೆರೆ ತೋಡಿಸಿ ಅದರಲ್ಲಿ ವಿವಿಧ ಜಾತಿಯ ಮೀನು ಸಾಕಣೆ ಮಾಡಿ ಯಶಸ್ಸು ಗಳಿಸಿದ್ದಾರೆ. ಆ ಮೀನುಗಳಿಗೆ ಉತ್ತಮ ಮಾರುಕಟ್ಟೆ ಸಿಗುತ್ತಿದೆ. ಅವರು ಬೆಳೆದ ತರಕಾರಿಗಳನ್ನು ಶನಿವಾರಸಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕೃಷಿಯಲ್ಲಿ ಸಾಧನೆ ಮಾಡಿದ ಕಿರಣ್ ಅವರು ಅತ್ಯುತ್ತಮ ತಾಲೂಕು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಿರಣ್ ಅವರ ಕೃಷಿ ಚಟುವಟಿಕೆಗಳಿಗೆ ಪತ್ನಿ ಪೂರ್ಣಿಮಾ ಹಾಗೂ ತಾಯಿಯ ಸಹಕಾರವೂ ಇದ್ದು, ಅವರೂ ತೋಟದ ಕೆಲಸ ಹಾಗೂ ಇನ್ನಿತರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕೃಷಿಗೆ ಸಂಬಂಧಪಟ್ಟ ಆತ್ಮಯೋಜನೆಯ ಸಲಹಾ ಸಮಿತಿಯ ಸದಸ್ಯರಾಗಿ ಪ್ರತಿ ಜಿಲ್ಲೆಯಿಂದ ಒಬ್ಬರನ್ನು ಆಯ್ಕೆಮಾಡಿಕೊಳ್ಳ

ಲಾಗುತ್ತದೆ. ಅದರಂತೆ ಕೊಡಗು ಜಿಲ್ಲೆಯಿಂದ ಕಿರಣ್ ಅವರನ್ನು ನೇಮಕ ಮಾಡಲಾಗಿದೆ.

ಕೋಳಿ ಗೊಬ್ಬರವನ್ನು ದನದ ಗೊಬ್ಬರದ ಜೊತೆಗೆ ಮಿಕ್ಸ್ ಮಾಡಿಕೊಂಡು ತೋಟಕ್ಕೆ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ನಿರಂತರವಾಗಿ ತೋಟಗಳಲ್ಲಿ ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ನಿರ್ವಹಿಸಬೇಕು.ಆಗ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯ. ರೈತರು ಖರೀದಿಸುವ ರಸ ಗೊಬ್ಬರ ಸೇರಿದಂತೆ ಇನ್ನಿತರ ವಸ್ತುಗಳಿಗೆ ಸಂಪೂರ್ಣವಾಗಿ ರಿಯಾಯಿತಿ ನೀಡ ಬೇಕು. ಪತ್ನಿ ಹಾಗೂ ತಾಯಿ ನನ್ನ ಕೆಲಸಕ್ಕೆ ಸಹಕಾರ ನೀಡುತ್ತಿರುವುದರಿಂದ ಕೃಷಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು.

► ಎ.ಜಿ. ಕಿರಣ್,ಯುವ ಕೃಷಿಕ ಅಪ್ಪಶೆಟ್ಟಳ್ಳಿ

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News