ಮಲೆನಾಡಿನ ಸಾಂಪ್ರದಾಯಿಕ ಆಹಾರ ಚೆಗಳಿ ಚಟ್ನಿಗೆ ಭಾರೀ ಬೇಡಿಕೆ

Update: 2024-07-22 10:23 GMT
Editor : Thouheed | Byline : ಕೆ.ಎಲ್.ಶಿವು

ಚಿಕ್ಕಮಗಳೂರು: ಕಾಫಿನಾಡು ಎಂದೇ ಖ್ಯಾತಿಗೆ ಪಾತ್ರವಾಗಿರುವ ಜಿಲ್ಲೆ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವಂತೆಯೇ ವಿಶಿಷ್ಟ ಖಾದ್ಯಗಳಿಗೂ ಹೆಸರಾಗಿದೆ. ಕಾಫಿನಾಡಿನ ಮಲೆನಾಡು ಭಾಗದ ವಿಶಿಷ್ಟ ಖಾದ್ಯಗಳಲ್ಲಿ ಚೆಗಳಿ ಇರುವೆ ಚಟ್ನಿ ತನ್ನದೇಯಾದ ವೈಶಿಷ್ಟ್ಯಕ್ಕೆ ಹೆಸರಾಗಿದ್ದು, ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಚೆಗಳಿ ಚಟ್ನಿಗೆ ಸದ್ಯ ಮಲೆನಾಡಿನಲ್ಲಿ ಭಾರೀ ಬೇಡಿಕೆ ಇದೆ.

ಚಿಕ್ಕಮಗಳೂರು ಜಿಲ್ಲೆ ಹಲವಾರು ವೈಶಿಷ್ಟ್ಯತೆಗಳಿಗೆ ಹೆಸರಾಗಿದೆ. ಇಲ್ಲಿನ ಜನರ ಆಚಾರ, ವಿಚಾರ, ಸಂಸ್ಕೃತಿ, ಜೀವನಶೈಲಿ, ಆಹಾರ ಪದ್ಧತಿ ಬಯಲು ಪ್ರದೇಶಕ್ಕೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿದೆ. ಮುಖ್ಯವಾಗಿ ಮಲೆನಾಡು ಹಲವಾರು ವಿಶಿಷ್ಟ ಆಹಾರ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಈ ಪೈಕಿ ಮಲೆನಾಡಿನ ಚೆಗಳಿ ಚಟ್ನಿ ತನ್ನದೇಯಾದ ಪ್ರಾಮುಖ್ಯತೆ ಪಡೆದುಕೊಂಡಿದೆ. ಇರುವೆ ಪ್ರಭೇದವಾಗಿರುವ ಚೆಗಳಿ ಇರುವೆಗಳಿಂದ ಮಾಡುವ ಈ ಚಟ್ನಿ ಹಲವಾರು ರೋಗ ನಿರೋಧಕ ಗುಣಗಳನ್ನು ಹೊಂದಿರುವ ಕಾರಣಕ್ಕೆ ಮಲೆನಾಡಿನಲ್ಲಿ ಭಾರೀ ಬೇಡಿಕೆ ಇದೆ. ಇವು ನೇರಳೆ, ಮಾವು, ಹಲಸು ಸೇರಿದಂತೆ ಬಹುತೇಕ ಎಲ್ಲ ಮರಗಳಲ್ಲೂ ಗೂಡು ಕಟ್ಟಿಕೊಂಡಿರುತ್ತವೆ. ಕೇಸರಿ ಬಣ್ಣದೊಂದಿಗೆ ಆಕರ್ಷಕವಾಗಿ ಕಾಣುವ ಈ ಇರುವೆಗಳ ಗೂಡನ್ನು ಮರದಿಂದ ಕೆಡವಿ ಸಾಧಾರಣ ಬೆಂಕಿಯಲ್ಲಿ ಗೂಡನ್ನು ಬೇಯಿಸಿದ ಬಳಿಕ ಕಸವನ್ನು, ಚೆಗಳಿ ಹಾಗೂ ಅವುಗಳ ಮೊಟ್ಟೆಗಳನ್ನು ಬೇರ್ಪಡಿಸಿ ನಿಗದಿತ ಪ್ರಮಾಣದಲ್ಲಿ ಖಾರ, ಉಪ್ಪು, ಕಾಳುಮೆಣಸಿನಂತಹ ಸಂಬಾರು ಪದಾರ್ಥಗಳನ್ನು ಬೆರೆಸಿ ಚಟ್ನಿ ಮಾಡಿ ಅದನ್ನು ದೋಸೆ, ಇಡ್ಲಿ, ರೊಟ್ಟಿಯೊಂದಿಗೆ ಸವಿಯುವುದು ಮಲೆನಾಡಿನ ಜನರ ಸಾಂಪ್ರದಾಯಿಕ ಆಹಾರ ಪದ್ಧತಿಯಾಗಿದೆ.

ಮಲೆನಾಡಿನ ಮಾಂಸಾಹಾರಿಗಳ ಪೈಕಿ ಬಹುತೇಕ ಮಂದಿ ಚೆಗಳಿ ಚಟ್ನಿಯ ರುಚಿಯನ್ನು ಆಹ್ಲಾದಿಸಿರುತ್ತಾರೆ. ಈ ಚಟ್ನಿಯನ್ನು ಸೇವಿಸುವುದರಿಂದ ಜ್ವರ, ಕೆಮ್ಮು, ಶೀತದಂತಹ ರೋಗರುಜಿನಗಳಿಗೆ ಅತ್ಯುತ್ತಮ ಔಷಧ ಎಂಬ ನಂಬಿಕೆ ಇದೆ. ಅಲ್ಲದೇ ರೋಗನಿರೋಧಕ ಔಷಧೀಯ ಗುಣ ಹೊಂದಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ಮಲೆನಾಡಿನ ಮೂಲನಿವಾಸಿಗಳು,ಆದಿವಾಸಿ ಜನರ ಪ್ರಮುಖ ಆಹಾರವಾಗಿದೆ.

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಾತ್ರವಲ್ಲದೇ ನೆರೆಯ ಕೊಡಗು, ಹಾಸನ, ಉಡುಪಿ, ದ.ಕ., ಶಿವಮೊಗ್ಗ, ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲೂ ಚೆಗಳಿ ಚಟ್ನಿ ಪ್ರಮುಖ ಆಹಾರವಾಗಿ ಪ್ರಸಿದ್ಧಿ ಪಡೆದಿದೆ. ಕರ್ನಾಟಕವಲ್ಲದೇ ನೆರೆಯ ಕೇರಳ, ತಮಿಳುನಾಡು ಹಾಗೂ ಈಶಾನ್ಯ ರಾಜ್ಯಗಳಲ್ಲೂ ಚೆಗಳಿ ಚಟ್ನಿ ಪ್ರಮುಖ ಆಹಾರವಾಗಿದೆ.

ಚೆಗಳಿ ಚಟ್ನಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿದ್ದು, ಹಲವಾರು ಅಂತರ್‌ರಾಷ್ಟ್ರೀಯ ಆಹಾರ ತಜ್ಞರ ಕಾರ್ಯಕ್ರಮಗಳಲ್ಲಿ ಚೆಗಳಿ ಚಟ್ನಿ ತಯಾರಿಸುವ ಬಗ್ಗೆ ಪ್ರಸಾರವಾಗಿದೆ. ಯೂಟ್ಯೂಬ್‌ನಲ್ಲೂ ಚೆಗಳಿ ಚಟ್ನಿ ಮಾಡುವ ಹಾಗೂ ಚೆಗಳಿಯ ಮಹತ್ವ, ಔಷಧ ಗುಣಗಳ ಬಗ್ಗೆ ಮಾಹಿತಿ ಲಭ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಲ್.ಶಿವು

contributor

Similar News