ಪ್ರಕೃತಿ ಪ್ರಿಯರ ಮೈಮನ ತಣಿಸುವ ರಮಣೀಯ ಪರಿಸರ ಕ್ಯಾತನಮಕ್ಕಿ
ಚಿಕ್ಕಮಗಳೂರು: ಕಾಫಿನಾಡೆಂಬ ಖ್ಯಾತಿಗೆ ಪಾತ್ರವಾಗಿರುವ ಚಿಕ್ಕಮಗಳೂರು ಸುಂದರ ಗಿರಿಶ್ರೇಣಿಗಳು, ರಮಣೀಯ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಜಿಲ್ಲೆಯಾಗಿದೆ. ಟ್ರಕ್ಕಿಂಗ್ ಪಯಣಕ್ಕೆ ಹೇಳಿ ಮಾಡಿಸಿದ ಅನೇಕ ಗಿರಿಶ್ರೇಣಿಗಳು ಇಲ್ಲಿನ ಆಕರ್ಷಣೆಯಾಗಿವೆ. ಇಂತಹ ಅನೇಕ ಟ್ರಕ್ಕಿಂಗ್ ತಾಣಗಳ ಪೈಕಿ ಕ್ಯಾತನಮಕ್ಕಿ ಗಿರಿಶ್ರೇಣಿ ಚಾರಣ ಪ್ರಿಯರನ್ನು ಆಯಸ್ಕಾಂತದಂತೆ ಸೆಳೆಯುತ್ತಿರುವ ಸುಂದರ ಪ್ರಾಕೃತಿಕ ತಾಣವಾಗಿದೆ.
ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯಲ್ಲಿರುವ ಕ್ಯಾತನಮಕ್ಕಿ ಗಿರಿಶ್ರೇಣಿ ಕಳಸ ಪಟ್ಟಣದಿಂದ 20ಕಿಮೀ ದೂರದಲ್ಲಿದೆ. ಕಳಸ ಪಟ್ಟಣದಿಂದ 8ಕಿಮೀ ದೂರದಲ್ಲಿರುವ ಹೊರನಾಡು ಧಾರ್ಮಿಕ ಕ್ಷೇತ್ರ ತಲುಪಿ ಅಲ್ಲಿಂದ ಬಲಿಗೆ ಗುಡ್ಡ ತಲುಪಿದರೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಸಿಗುತ್ತದೆ. ಅಲ್ಲಿ ನಿಗದಿ ಪಡಿಸಿದ ಶುಲ್ಕ ಪಾವತಿಸಿ ಕಾಲ್ನಡಿಗೆಯಲ್ಲಿ ಸುಮಾರು 3ಕಿಮೀ ಕ್ರಮಿಸಿದರೆ ಕ್ಯಾತನಮಕ್ಕಿಯ ರಮಣೀಯ ಪ್ರಾಕೃತಿಕ ಸೌಂದರ್ಯ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಕ್ಯಾತನಮಕ್ಕಿಯನ್ನು ಜೀಪ್ ಅಥವಾ ಬೈಕ್‌ಗಳ ಮೂಲಕವೂ ತಲುಪುವ ವ್ಯವಸ್ಥೆ ಇದೆಯಾದರೂ ದುರ್ಗಮ ರಸ್ತೆಯಲ್ಲಿ ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ಕ್ಯಾತನಮಕ್ಕಿ ಪಶ್ಚಿಮಘಟ್ಟ ಸಾಲಿಗೆ ಸೇರಿರುವ ಸುಂದರ ಗಿರಿಶ್ರೇಣಿಯಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 5ಸಾವಿರ ಅಡಿ ಎತ್ತರ ಇರುವ ಮನಮೋಹಕ ಗಿರಿಧಾಮವಾಗಿದೆ. ಕ್ಯಾತನಮಕ್ಕಿ ತಲುಪಿದ ಬಳಿಕ ಸುತ್ತಲೂ ಕಣ್ಣಾಡಿಸಿದರೆ ಈ ಗಿರಿಶ್ರೇಣಿ ಹಲವು ಬೆಟ್ಟಗುಡ್ಡಗಳ ಜೋಡಿಸಿಟ್ಟಿರುವ ಮತ್ತೊಂದು ಸುಂದರ ಬೆಟ್ಟದ ಸಾಲೆಂಬ ಭಾವ ಮನದಲ್ಲಿ ಮೂಡುತ್ತದೆ.
ಮುಖ್ಯವಾಗಿ ಕ್ಯಾತನಬೀಡು ಗಿರಿಶ್ರೇಣಿಯ ತುದಿಯಲ್ಲಿ ನಿಂತು ಮುಂಜಾನೆ ಸೂರ್ಯೋದಯ, ಸಂಜೆ ವೇಳೆ ಸೂರ್ಯಸ್ತವಾಗುವ ವಿದ್ಯಮಾನ ನೋಡುವುದು ಮೈಮನಸ್ಸಿಗೆ ಹೊಸಬಗೆಯ ಆಹ್ಲಾದಕ್ಕೆ ಕಾರಣವಾಗುತ್ತದೆ. ಬಹುತೇಕ ಟ್ರಕ್ಕಿಂಗ್ ಪ್ರಿಯರು, ಪ್ರವಾಸಿಗರು ಸೂರ್ಯ ಉದಯಿಸುವ, ಮುಳುಗುವ ದೃಶ್ಯಾವಳಿ ಕಾಣಲು ಇಲ್ಲಿಗೆ ಬರುವುದು ವಿಶೇಷವಾಗಿದೆ.
ಕ್ಯಾತನಮಕ್ಕಿ ತಲುಪುವುದು ಹೇಗೆ?
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 96ಕಿಮೀ ದೂರದ ಕಳಸ ತಲುಪಿದರೆ, ಅಲ್ಲಿಂದ 8ಕಿಮೀ ದೂರದಲ್ಲಿರುವ ಹೊರನಾಡು ಗ್ರಾಮಕ್ಕೆ ಹೋಗಬೇಕು. ಹೊರನಾಡಿನಿಂದ 4ಕಿಮೀ ಬೆಟ್ಟಗುಡ್ಡಗಳ ಸಾಲಿನ ಡಾಂಬಾರು ರಸ್ತೆಯಲ್ಲಿ ಬಲಿಗೆ ಎಂಬ ಸಣ್ಣ ಗ್ರಾಮ ಸಿಗುತ್ತದೆ. ಈ ಗ್ರಾಮದಿಂದ ಸ್ವಲ್ಪದೂರದಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಇದೆ. ಈ ಚೆಕ್‌ಪೋಸ್ಟ್ ತಲುಪಿದರೆ ಅಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿದೆ. ಅಲ್ಲಿಂದ 3ಕಿಮೀ ದುರ್ಗಮ ರಸ್ತೆಯಲ್ಲಿ ನಡೆದರೆ ಕ್ಯಾತನಮಕ್ಕಿಯ ರಮಣೀಯ ಪರಿಸರ ಸಿಗುತ್ತದೆ. ಕ್ಯಾತನಮಕ್ಕಿ ತಲುಪಲು ಖಾಸಗಿ ಜೀಪ್‌ಗಳು ಬಾಡಿಗೆಗೆ ಸಿಗುತ್ತವೆ. ಬೈಕ್ ಮೂಲಕವೂ ತಲುಪಬಹುದು. ಆದರೆ ಕ್ಯಾತನಮಕ್ಕಿ ಪೀಕ್‌ಗೆ ಬೈಕ್, ಜೀಪ್‌ಗಳ ಪ್ರವೇಶ ನಿಷೇಧಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ನೋಂದಾಯಿಸಿದ ಜೀಪ್, ವಾಹನಗಳಿಗೆ ಮಾತ್ರ ಪ್ರವೇಶ ಸಿಗಲಿದೆ. ಕ್ಯಾತನಮಕ್ಕಿ ಸೊಬಗು ಕಾಣಲು ನಿಗದಿತ ಪ್ರವೇಶ ಶುಲ್ಕ ಪಾವತಿ ಮಾಡಬೇಕು.