ನಕಲಿ ಸುದ್ದಿಗಳ ವಾರಸುದಾರರ ಕಪಟ ಕಾಳಜಿಯ ಪ್ರಶ್ನೆಗಳು

ಹೀಗೆ ಸುಳ್ಳುಗಳನ್ನು ಅನಾಯಾಸವಾಗಿ ಹೇಳಬಲ್ಲವರೇ ಫೇಕ್‌ನ್ಯೂಸ್ ಬಗ್ಗೆ ಕಳಕಳಿಯಿಂದ ರಾಜ್ಯಸಭೆಯಲ್ಲಿ ಕೇಳಿದ್ದರು ಎಂಬುದು ಬಹಳ ದೊಡ್ಡ ವ್ಯಂಗ್ಯ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿಯವರಿಗೆ ಫೇಕ್ ನ್ಯೂಸ್ ಸಾಮಾಜಿಕ ಕಂಟಕವಾಗುತ್ತಿರುವ ಬಗ್ಗೆ ಎಷ್ಟೆಲ್ಲ ಕಾಳಜಿಯಲ್ಲವೇ ಎಂದು ಯಾರಾದರೂ ಅಂದುಕೊಳ್ಳುವ ಹಾಗಿದ್ದವು ಅವರ ಪ್ರಶ್ನೆಗಳು. ಆದರೆ ಅದೇ ಸುಧಾಂಶು ತ್ರಿವೇದಿ ಹೇಳಿದ ಸುಳ್ಳುಗಳು, ಕೊಟ್ಟ ತಪ್ಪು ಮಾಹಿತಿಗಳ ಬಗ್ಗೆ ಗಮನಿಸಿದರೆ ಶಾಕ್ ಆಗದೇ ಇರಲಾರದು.

Update: 2024-08-07 04:58 GMT

‘‘ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳ ಹಾವಳಿ ತಡೆಗೆ ಮೋದಿ ಸರಕಾರ ತೆಗೆದುಕೊಂಡ ಕ್ರಮಗಳೇನು?’’

‘‘ಸಮಸ್ಯೆ ನಿಭಾಯಿಸಲು ಮತ್ತು ಸುಳ್ಳು ಸುದ್ದಿ ಹರಡುವವರನ್ನು ಶಿಕ್ಷಿಸಲು ಹೊಸ ದಂಡ ಸಂಹಿತೆಯ ಅಡಿಯಲ್ಲಿ ಕಠಿಣ ಕಾನೂನುಗಳು ಲಭ್ಯವಿದೆಯೇ?’’

ರಾಜ್ಯಸಭೆಯಲ್ಲಿ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಕೇಳಿದ್ದ ಪ್ರಶ್ನೆಗಳು ಹೀಗಿದ್ದವು.

ಫೇಕ್ ನ್ಯೂಸ್ ಸಾಮಾಜಿಕ ಕಂಟಕವಾಗುತ್ತಿರುವ ಬಗ್ಗೆ ಎಷ್ಟೆಲ್ಲ ಕಾಳಜಿಯಲ್ಲವೇ ಎಂದು ಯಾರಾದರೂ ಅಂದುಕೊಳ್ಳುವ ಹಾಗಿದ್ದವು ಆ ಪ್ರಶ್ನೆಗಳು.

ಆದರೆ ಅದೇ ಸುಧಾಂಶು ತ್ರಿವೇದಿ ಹೇಳಿದ ಸುಳ್ಳುಗಳು, ಕೊಟ್ಟ ತಪ್ಪು ಮಾಹಿತಿಗಳ ಬಗ್ಗೆ ಗಮನಿಸಿದರೆ ಶಾಕ್ ಆಗದೇ ಇರಲಾರದು.

‘ನ್ಯೂಸ್ ಲಾಂಡ್ರಿ’ ಅಂಥವುಗಳ ಒಂದು ಪಟ್ಟಿಯನ್ನೇ ಮಾಡಿದೆ.

ಮೊದಲನೆಯದಾಗಿ ಹಿಂಡನ್‌ಬರ್ಗ್ ವರದಿ ವಿಚಾರದಲ್ಲಿ ಅವರು ಹೇಳಿದ್ದ ಸುಳ್ಳು.

ಆಜ್‌ತಕ್ ಚಾನೆಲ್‌ನಲ್ಲಿ ನಡೆದ ಚರ್ಚೆಯಲ್ಲಿ ತ್ರಿವೇದಿ ಅವರಿಗೆ ಒಂದು ಪ್ರಶ್ನೆ ಎದುರಾಗಿತ್ತು. ಅದಾನಿ-ಹಿಂಡನ್‌ಬರ್ಗ್ ವಿವಾದದ ಬಗ್ಗೆ ಮತ್ತು ಆ ವಿಚಾರದಲ್ಲಿ ತನಿಖೆಗೆ ಸರಕಾರ ಸಂಸದೀಯ ಸಮಿತಿಯನ್ನು ರಚಿಸದೇ ಇದ್ದುದರ ಬಗ್ಗೆ ಕೇಳಲಾಗಿತ್ತು.

ಆಗ ತ್ರಿವೇದಿ, ಬೇರೆ ಯಾವುದೇ ವರದಿ ಪ್ರಕಟಿಸದಂತೆ ಹಿಂಡನ್‌ಬರ್ಗ್‌ಗೆ ಅಮೆರಿಕ ಕೋರ್ಟ್ ನಿರ್ಬಂಧ ಹೇರಿದೆ ಎಂದುಬಿಟ್ಟಿದ್ದರು.

ಆದರೆ ನಿಜವಾಗಿಯೂ ಅಂಥ ಯಾವುದೇ ಆದೇಶವನ್ನು ಕೋರ್ಟ್ ನೀಡಿರಲೇ ಇಲ್ಲ.

ಇನ್ನೂ ತಮಾಷೆಯೆಂದರೆ, ಅದಾನಿ ಗ್ರೂಪ್ ಕುರಿತ ವರದಿಯ ನಂತರ ಹಿಂಡನ್‌ಬರ್ಗ್ ವಿವಿಧ ಕಂಪೆನಿಗಳ ಕುರಿತು ಕನಿಷ್ಠ 17 ಇತರ ವರದಿಗಳನ್ನೂ ಪ್ರಕಟಿಸಿತ್ತು.

ಕಳೆದ ವರ್ಷ ಫೆಬ್ರವರಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಕೂಡ ಇಂಥದೇ ಮಾಹಿತಿ ವೈರಲ್ ಆಗಿತ್ತು.

ಆದರೆ ಬೂಮ್‌ಲೈವ್ ಫ್ಯಾಕ್ಟ್‌ಚೆಕ್‌ನಲ್ಲಿ ಅದು ಸುಳ್ಳು ಎಂಬುದು ಗೊತ್ತಾಗಿತ್ತು.

ಬಾಂಗ್ಲಾದೇಶಿ ವಲಸಿಗರ ವಿಚಾರದಲ್ಲೂ ಸುಧಾಂಶು ತ್ರಿವೇದಿ ಸುಳ್ಳು ಹೇಳಿದ್ದುದನ್ನು ನ್ಯೂಸ್ ಲಾಂಡ್ರಿ ಉಲ್ಲೇಖಿಸಿದೆ.

ಮಾರ್ಚ್ 21ರಂದು ನ್ಯೂಸ್ 18 ಇಂಡಿಯಾ ವಾಹಿನಿಯಲ್ಲಿ ವಿವಾದಿತ ಪೌರತ್ವ ಕಾನೂನಿನ ಚರ್ಚೆ ನಡೆದಾಗ, ಭಾರತದಲ್ಲಿ ಎರಡು ಕೋಟಿ ಬಾಂಗ್ಲಾದೇಶಿ ವಲಸಿಗರು ಇದ್ದಾರೆ ಎಂದು ಯುಪಿಎ ಅವಧಿಯ ಗೃಹಖಾತೆ ರಾಜ್ಯ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಸಂಸತ್ತಿನಲ್ಲಿ ಹೇಳಿರುವುದಾಗಿ ತ್ರಿವೇದಿ ಉಲ್ಲೇಖಿಸಿದ್ದರು.

ಅದನ್ನು ಯುಪಿಎ ಸರಕಾರದ ಅಧಿಕೃತ ಮಾಹಿತಿ ಎಂದು ತ್ರಿವೇದಿ ಉಲ್ಲೇಖಿಸಿದ್ದರು.

ಎರಡು ಕೋಟಿ ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರಿದ್ದು, ಅವರಲ್ಲಿ ಹೆಚ್ಚಿನವರು ದಿಲ್ಲಿಯಲ್ಲಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದರೆಂದು ತ್ರಿವೇದಿ ಉಲ್ಲೇಖಿಸಿದ್ದರು.

ಆದರೆ ನಿಜವೇನೆಂದರೆ, ಜೈಸ್ವಾಲ್ 1.2 ಕೋಟಿ ಎಂದಿದ್ದರು.

ಅಸ್ಸಾಂ ಒಂದರಲ್ಲೇ 50 ಲಕ್ಷ ಬಾಂಗ್ಲಾದೇಶಿಯರಿದ್ದು, ಪಶ್ಚಿಮ ಬಂಗಾಳದಲ್ಲಿ 57 ಲಕ್ಷ ಇದ್ದಾರೆ ಎಂಬ ಅಂದಾಜಿದೆ ಎಂದು ಜೈಸ್ವಾಲ್ ಹೇಳಿದ್ದರು. ಆದರೆ ಅಸ್ಸಾಮಿನಲ್ಲಿ ಹೇಳಿಕೆ ಬಗ್ಗೆ ತಕರಾರು ಎದ್ದಾಗ ಹೇಳಿಕೆಯನ್ನು ಜೈಸ್ವಾಲ್ ಹಿಂಪಡೆದಿದ್ದರು.

ಮತ್ತೂ ಒಂದು ಸತ್ಯವೆಂದರೆ, ಯಾವುದನ್ನು ಸುಧಾಂಶು ತ್ರಿವೇದಿ ಹೇಳಿದ್ದರೋ, ಆ ಎರಡು ಕೋಟಿ ಬಾಂಗ್ಲಾದೇಶಿ ವಲಸಿಗರ ಅಂಕಿ ಅಂಶವನ್ನು ಮೋದಿ ಸರಕಾರ 2016ರಲ್ಲಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ರೂಪದಲ್ಲಿ ಕೊಟ್ಟಿತ್ತು.

ತಮ್ಮದೇ ಪಕ್ಷದ ಸರಕಾರದ ಹೇಳಿಕೆಯನ್ನು ಯುಪಿಎ ಹೇಳಿದ್ದು ಎಂದು ನಂಬಿಸಲು ಸುಧಾಂಶು ತ್ರಿವೇದಿ ಯತ್ನಿಸಿದ ಹಾಗಿತ್ತು.

ಮೂರನೆಯದಾಗಿ, ‘‘ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್‌ವರೆಗೆ ಕಾಂಗ್ರೆಸ್‌ನ ಯಾವೊಬ್ಬ ಪ್ರಧಾನಿಯೂ ಜನರಿಂದ ಆಯ್ಕೆಯಾಗಿಲ್ಲ’’ ಎಂದು ಜನವರಿ 30ರಂದು ಮಾಧ್ಯಮಗಳೆದುರು ತ್ರಿವೇದಿ ಹೇಳಿದ್ದರು.

‘‘1946ರ ಎಪ್ರಿಲ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ 16 ಕಾಂಗ್ರೆಸ್ ರಾಜ್ಯ ಸಮಿತಿಗಳಲ್ಲಿ ಒಂದು ಪಟ್ಟಾಭಿ ಸೀತಾರಾಮಯ್ಯ ಮತ್ತು ಇನ್ನೊಂದು ಕೃಪಲಾನಿಯವರಿಗೆ ಮತ ಹಾಕಿತ್ತು. ಉಳಿದವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಮತ ಹಾಕಿದ್ದವು. ನೆಹರೂ ಅವರಿಗೆ ಮತಗಳೇ ಬಂದಿರಲಿಲ್ಲ’’ ಎಂದಿದ್ದರು.

‘‘ಮನಮೋಹನ್ ಸಿಂಗ್ ಆಕಸ್ಮಿಕ ಪ್ರಧಾನಿ. ಇಂದಿರಾ ಗಾಂಧಿ ಮೊದಲ ಬಾರಿಗೆ ಕಾಂಗ್ರೆಸ್‌ನ ಆಂತರಿಕ ಕಲಹದಿಂದ ಪ್ರಧಾನಿಯಾದರು. ರಾಜೀವ್ ಗಾಂಧಿ ಇಂದಿರಾ ಹತ್ಯೆ ನಂತರದ ಪರಿಸ್ಥಿತಿಯಿಂದಾಗಿ ಪ್ರಧಾನಿಯಾದರು. ಪಿ.ವಿ. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಹೇಗೆ ಪ್ರಧಾನಿಯಾದರು ಎಂಬುದು ಎಲ್ಲರಿಗೂ ಗೊತ್ತಿದೆ’’ ಎಂದಿದ್ದರು.

ಇಬ್ಬರು ಮಾತ್ರವೇ ಜನರಿಂದ ಆಯ್ಕೆಯಾದವರು.

ಒಬ್ಬರು ವಾಜಪೇಯಿ ಮತ್ತು ಇನ್ನೊಬ್ಬರು ನರೇಂದ್ರ ಮೋದಿ ಎಂಬುದು ಸುಧಾಂಶು ತ್ರಿವೇದಿಯ ಹೇಳಿಕೆಯಾಗಿತ್ತು.

ಆದರೆ ಭಾರತದಲ್ಲಿ ಅನುಸರಿಸುವುದು ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯಲ್ಲ. ಅಧ್ಯಕ್ಷೀಯ ಚುನಾವಣೆಯಲ್ಲಿ ನಾಗರಿಕರು ನೇರವಾಗಿ ಅಭ್ಯರ್ಥಿಗೆ ಮತ ಹಾಕುತ್ತಾರೆ.ಆದರೆ ಭಾರತೀಯ ಸಂವಿಧಾನದ ಪ್ರಕಾರ, ಸಂಸತ್ತಿನ ಚುನಾಯಿತ ಸದಸ್ಯರು ತಮ್ಮಲ್ಲಿ ಒಬ್ಬರನ್ನು ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ.

1946ರಲ್ಲಿ ಭಾರತ ಇನ್ನೂ ಸ್ವಾತಂತ್ರ್ಯ ಪಡೆದಿರಲಿಲ್ಲ. ಅಲ್ಲದೆ, 1946ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪ್ರಧಾನಿ ಆಯ್ಕೆ ಉದ್ದೇಶವನ್ನೂ ಹೊಂದಿರಲಿಲ್ಲ.

ಇನ್ನೊಂದು ಸುಳ್ಳು ಮುಸ್ಲಿಮ್ ಲೀಗ್ ಕುರಿತದ್ದು.

ಮೇ 23ರಂದು ಮುಸ್ಲಿಮ್ ಮೀಸಲಾತಿ ಕುರಿತ ಚರ್ಚೆ ವೇಳೆ ಸುಧಾಂಶು ತ್ರಿವೇದಿ, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಅನ್ನು ಸ್ವಾತಂತ್ರ್ಯಕ್ಕೆ ಮೊದಲು ಪಾಕಿಸ್ತಾನಕ್ಕಾಗಿ ಚಳವಳಿ ನಡೆಸಿದ್ದ ಮುಸ್ಲಿಮ್ ಲೀಗ್ ಎಂದರು ಮತ್ತು ಅದೇ ಮುಸ್ಲಿಮ್ ಲೀಗ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಆದರೆ ಕೇರಳದ ಈ ಪ್ರಾದೇಶಿಕ ಪಕ್ಷವನ್ನು 1948ರಲ್ಲಿ ಸ್ವಾತಂತ್ರ್ಯಾನಂತರ ಸ್ಥಾಪಿಸಲಾಯಿತು ಮತ್ತು ಕೇರಳದ ರಾಜ್ಯ ಚುನಾವಣಾ ಆಯೋಗದಲ್ಲಿ ಅದು ನೋಂದಾಯಿಸಲ್ಪಟ್ಟಿದೆ.

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ‘‘2008ರ 26/11 ಮುಂಬೈ ಭಯೋತ್ಪಾದಕ ದಾಳಿ ವೇಳೆ ಕ್ರಮಕ್ಕೆ ಸೇನೆ ಬಯಸಿದ್ದರೂ ಅದಕ್ಕೆ ಅವತ್ತಿನ ಮನಮೋಹನ್ ಸಿಂಗ್ ಸರಕಾರ ಅವಕಾಶ ನೀಡಿರಲಿಲ್ಲ’’ ಎಂದು ಹೇಳಿದ್ದರು ತ್ರಿವೇದಿ.

ಅದರ ಬಗ್ಗೆ ಬರಾಕ್ ಒಬಾಮಾ ಅವರ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್?’ ಉಲ್ಲೇಖಿಸಿದೆ ಎಂದಿದ್ದರು.

26/11ರ ದಾಳಿಯಲ್ಲಿ ಕಾಂಗ್ರೆಸ್ ಪಾತ್ರವನ್ನು ಪ್ರಶ್ನಿಸಲು ಬಯಸುವುದಾಗಿ ಬರಾಕ್ ಒಬಾಮಾ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗಿನ ಮಾತುಕತೆ ಆಧಾರದಲ್ಲಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಆಗಿನ ರಾಜಕೀಯ ಪರಿಸ್ಥಿತಿ ಬಿಜೆಪಿಗೆ ಲಾಭಕರವಾಗಬಹುದು ಎಂಬ ಆತಂಕದಿಂದ ಸೇನಾ ಕ್ರಮಕ್ಕೆ ಆಗಿನ ಕಾಂಗ್ರೆಸ್ ಸರಕಾರ ಅವಕಾಶ ನೀಡಲಿಲ್ಲ ಎಂಬುದು ತ್ರಿವೇದಿ ಆರೋಪವಾಗಿತ್ತು.

ಆದರೆ ಒಬಾಮಾ ಅವರ ಪುಸ್ತಕದಲ್ಲಿ ಸೇನಾ ಕಾರ್ಯಾಚರಣೆಗೆ ಮನಮೋಹನ್ ಸಿಂಗ್ ಸರಕಾರ ತಡೆಯೊಡ್ಡಿದ ಯಾವುದೇ ಉಲ್ಲೇಖವಿಲ್ಲ. ಬದಲಾಗಿ ತಮ್ಮ ಸಂಯಮದಿಂದ ತಮಗೆ ರಾಜಕೀಯವಾಗಿ ನಷ್ಟವಾಗಿದೆ ಎಂದು ಸಿಂಗ್ ಅವರು ಒಬಾಮಾಗೆ ಹೇಳಿದ್ದರು.

‘ಜೈಪುರ ಡೈಲಾಗ್ಸ್’ ಎಂಬ ಬಲಪಂಥೀಯ ವೇದಿಕೆಯ ಸಮಾವೇಶದಲ್ಲಿ ತ್ರಿವೇದಿ,

‘‘ಶೇ.50ರಷ್ಟು ಜನರು ಸಸ್ಯಾಹಾರಿಗಳಾಗಿರುವ ಏಕೈಕ ದೇಶ ಭಾರತ’’ ಎಂದಿದ್ದರು. ‘‘ಮಾಂಸಾಹಾರ ಸೇವಿಸುವವರೂ ವಾರಕ್ಕೊಮ್ಮೆಯಷ್ಟೇ ತಿನ್ನುತ್ತಾರೆ’’ ಎಂದಿದ್ದರು.

ಆದರೆ ಹಲವಾರು ಸಮೀಕ್ಷೆಗಳು ದೇಶದಲ್ಲಿ ಶೇ.23ರಿಂದ ಶೇ.39ರಷ್ಟು ಮಾತ್ರ ಸಸ್ಯಾಹಾರಿಗಳಿರುವುದಾಗಿ ಹೇಳುತ್ತವೆ.

2021ರಲ್ಲಿ ಪ್ಯೂ ರಿಸರ್ಚ್ ಸೆಂಟರ್ ಸಮೀಕ್ಷೆ ಕೇವಲ ಶೇ.39 ಭಾರತೀಯರು ತಮ್ಮನ್ನು ಸಸ್ಯಾಹಾರಿಗಳು ಎಂದು ಹೇಳಿಕೊಂಡಿರುವುದಾಗಿ ಉಲ್ಲೇಖಿಸಿದೆ.

ವರ್ಲ್ಡ್ ಅಟ್ಲಾಸ್‌ನ ಇತ್ತೀಚಿನ ವರದಿ ಕೂಡ ಶೇ.38 ಎಂದು ಉಲ್ಲೇಖಿಸುತ್ತದೆ.

ಅಮೆರಿಕ ಮೂಲದ ಮಾನವಶಾಸ್ತ್ರಜ್ಞ ಬಾಲ ಮುರಳಿ ನಟರಾಜನ್ ಮತ್ತು ಭಾರತ ಮೂಲದ ಅರ್ಥಶಾಸ್ತ್ರಜ್ಞ ಸೂರಜ್ ಜಾಕೋಬ್ ಅವರ ಅಧ್ಯಯನ, ಕೇವಲ ಶೇ.20 ಭಾರತೀಯರು ಮಾತ್ರ ಸಸ್ಯಾಹಾರಿಗಳು ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಚಂದ್ರಕಾಂತ್ ಎನ್.

contributor

Similar News