ಮಾಜಿ ಶಾಸಕರಿಬ್ಬರ ಕದನದಲ್ಲಿ ಕಾಂಗ್ರೆಸ್ ಹೆಚ್ಚಿನ ಲಾಭ ಪಡೆಯಲಿದೆಯೇ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುತ್ತಿದ್ದ ಹಾಲಿ ಸಂಸದ ಅನಂತ ಕುಮಾರ್ ಹೆಗಡೆಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಣಕ್ಕಿಳಿದಿದ್ದಾರೆ. ಇಬ್ಬರು ಮಾಜಿ ಶಾಸಕರ ಮಧ್ಯೆ ಉತ್ತರ ಕನ್ನಡದ ಲೋಕಸಭಾ ಸಮರ ನಡೆಯಲಿದೆ. ಸಹಜವಾಗಿಯೇ ಕದನ ಕಣ ಕುತೂಹಲ ಕೆರಳಿಸಿದೆ.

Update: 2024-04-03 09:11 GMT

ಸರಣಿ- 34

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಉತ್ತರ ಕನ್ನಡದ 6 ಹಾಗೂ ಬೆಳಗಾವಿಯ 2 ಕ್ಷೇತ್ರಗಳು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಅವೆಂದರೆ, ಖಾನಾಪುರ, ಕಿತ್ತೂರು, ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಹಾಗೂ ಯಲ್ಲಾಪುರ.

ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 16,07,600. ಅವರಲ್ಲಿ ಪುರುಷರು 8,09,887, ಮಹಿಳೆಯರು 7,97,691 ಮತ್ತು ಇತರರು 22

ಉತ್ತರ ಕನ್ನಡದಲ್ಲಿ ಈವರೆಗೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್, 6 ಬಾರಿ ಬಿಜೆಪಿ ಹಾಗೂ ಒಮ್ಮೆ ಸ್ವತಂತ್ರ ಅಭ್ಯರ್ಥಿ ಗೆಲುವು.

ಈವರೆಗೆ ಲೋಕಸಭೆಗೆ ಆಯ್ಕೆಯಾದವರು:

1952, 1957, 1962ರಲ್ಲಿ ಸತತ ಮೂರು ಬಾರಿ ಕಾಂಗ್ರೆಸ್‌ನ ಜೋಕಿಮ್ ಆಳ್ವ ಗೆಲುವು

1967 -ದಿನಕರ ದೇಸಾಯಿ (ಸ್ವತಂತ್ರ)

1971 -ಬಿ. ವೆಂಕಣ್ಣ ನಾಯಕ (ಕಾಂಗ್ರೆಸ್)

1977 -ಬಿ.ಪಿ. ಕದಂ (ಕಾಂಗ್ರೆಸ್)

1980, 1984, 1989 ಹಾಗೂ 1991ರಲ್ಲಿ ಸತತ ನಾಲ್ಕು ಬಾರಿ ದೇವರಾಯ ನಾಯ್ಕ (ಕಾಂಗ್ರೆಸ್)

1996, 1998ರಲ್ಲಿ ಅನಂತ ಕುಮಾರ್ ಹೆಗಡೆ (ಬಿಜೆಪಿ)

1999 - ಮಾರ್ಗರೆಟ್ ಆಳ್ವ (ಕಾಂಗ್ರೆಸ್)

2004, 2009, 2014 ಹಾಗೂ 2019ರಲ್ಲಿ ಸತತವಾಗಿ ಅನಂತ ಕುಮಾರ್ ಹೆಗಡೆ (ಬಿಜೆಪಿ)

10 ಸಲ ಗೆದ್ದಿದ್ದ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಳೆದ ನಾಲ್ಕು ಚುನಾವಣೆಗಳನ್ನು ಬಿಜೆಪಿ ಸತತವಾಗಿ ಗೆದ್ದಿದೆ.

ಈಗ ಮತ್ತೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಭಾರೀ ಪ್ರಯತ್ನ ನಡೆಸಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ಇದೆ.

ಈ ಬಾರಿ ಬಿಜೆಪಿಯು ಅನಂತ ಕುಮಾರ್ ಹೆಗಡೆಗೆ ಟಿಕೆಟ್ ನೀಡದೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿದೆ.

ಇನ್ನು ಕಾಂಗ್ರೆಸ್ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿದೆ.

ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ, ಅಂಜಲಿ ನಿಂಬಾಳ್ಕರ್ ಅವರು ಖಾನಾಪುರದವರು. ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳು ಬಹಳ ಹಿಂದಿನಿಂದಲೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದರೂ, ಲೋಕಸಭಾ ಚುನಾವಣೆಗೆ ಆ ಭಾಗದವರು ಅಭ್ಯರ್ಥಿಗಳಾದ ನಿದರ್ಶನವಿಲ್ಲ.

ಇದೇ ಮೊದಲ ಬಾರಿಗೆ ಕಾಂಗ್ರೆಸ್ ಖಾನಾಪುರದ ಕಡೆಯವರೊಬ್ಬರನ್ನು ಅಭ್ಯರ್ಥಿ ಎಂದು ಘೋಷಿಸಿರುವುದು ವಿಶೇಷ. ಇದರ ಹಿಂದೆ ಹಲವು ಲೆಕ್ಕಾಚಾರಗಳಿವೆ.

ಒಂದೆಡೆ ಪ್ರಭಾವಿ ಸಮುದಾಯದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡರೆ, ಮತ್ತೊಂದೆಡೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಹು ದೊಡ್ಡ ಪ್ರಮಾಣದಲ್ಲಿ ಮಹಿಳಾ ಮತದಾರರನ್ನು ಸೆಳೆಯುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಮಾಜಿ ಶಾಸಕರು ಎಂಬುದು ಮತ್ತೊಂದು ವಿಶೇಷ.

ಅಂಜಲಿ ನಿಂಬಾಳ್ಕರ್ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಮೊನ್ನೆ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿಯೂ ಜನಸಾಮಾನ್ಯರಂತೆ ಸುತ್ತಾಡಿ ಗಮನ ಸೆಳೆದದ್ದು ವರದಿಯಾಗಿತ್ತು.

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಕಾಗೇರಿಗೆ ಬಿಜೆಪಿ ಶಾಸಕರು ಸಂಪರ್ಕಕ್ಕೇ ಸಿಗುತ್ತಿಲ್ಲ ಎನ್ನಲಾಗಿದೆ. ಹಾಲಿ ಸಂಸದರ ಮನೆಗೆ ಹೋದರೂ ಅವರನ್ನು ಗೇಟ್‌ನಿಂದ ಒಳಗೆ ಬಿಟ್ಟಿಲ್ಲ ಎಂದು ವರದಿಯಾಗಿದೆ.

ತಮ್ಮ ಪರ ಪ್ರಚಾರ ನಡೆಸಲು ಬಿಜೆಪಿಯ ಶಾಸಕರು ಹಾಗೂ ಸಂಸದರ ಬೆಂಬಲ ಪಡೆಯಲು ಯತ್ನಿಸುತ್ತಿದ್ದರೂ, ಯಾರೂ ಕಾಗೇರಿಯವರ ಸಂಪರ್ಕಕ್ಕೇ ಸಿಗುತ್ತಿಲ್ಲವೆಂದು ಸುದ್ದಿಯಾಗುತ್ತಿದೆ. ಬಿಜೆಪಿಯಲ್ಲಿನ ಇಂಥದೊಂದು ಬೆಳವಣಿಗೆ ಕೂಡ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ ಎನ್ನಲಾಗುತ್ತಿದೆ. ತಮ್ಮ ಅಭ್ಯರ್ಥಿ ನಿಂಬಾಳ್ಕರ್ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ.

ಬಿಜೆಪಿಗೆ ಪ್ಲಸ್ ಪಾಯಿಂಟ್

ಬ್ರಾಹ್ಮಣರ ಮತಗಳ ಬಲ, ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದು, ಈಚಿನ ಚುನಾವಣೆಗಳನ್ನು ಸತತವಾಗಿ ಬಿಜೆಪಿಯೇ ಗೆದ್ದಿರುವುದು

ಬಿಜೆಪಿಗೆ ಇರುವ ತೊಡಕುಗಳು

ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಕ್ಷೇತ್ರ ಮರೆತಿದ್ದು, ಕಾಂಗ್ರೆಸ್ ಗ್ಯಾರಂಟಿಗಳು ಸವಾಲಾಗಿರುವುದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಂತ ಕುಮಾರ್ ಹೆಗಡೆ ಪಕ್ಷಕ್ಕಾಗಿ ಕೆಲಸ ಮಾಡದಿರುವುದು

ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್

ಜನರನ್ನು ತಲುಪಿದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ವಿಶ್ವಾಸ ಹೆಚ್ಚಿಸಿವೆ. ನಾಮಧಾರಿ, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವುದು ಕಾಂಗ್ರೆಸ್ ಪಾಲಿಗೆ ಅನುಕೂಲಕರ.

ಅಲ್ಲದೆ ಉಸ್ತುವಾರಿ ಸಚಿವರು ಮೀನುಗಾರ ಸಮುದಾಯದವರಾಗಿದ್ದು ಆ ಅಂಶವೂ ಗೆಲುವಿಗೆ ನೆರವಾಗಲಿದೆ

ಬಿಜೆಪಿಯ ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ಬಂದರೆ ಲಾಭವಾಗಬಹುದು.

ಇದೆಲ್ಲದರ ಜೊತೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಿರುವುದು ಕೂಡ ಕಾಂಗ್ರೆಸ್‌ಗೆ ಅನುಕೂಲ ತರಲಿದೆ ಎಂಬ ವಿಶ್ವಾಸ ನಾಯಕರದ್ದಾಗಿದೆ.

ಈ ಎಲ್ಲ ಅಂಶಗಳ ಲಾಭ ಪಡೆದು ಈ ಬಾರಿ ಬಿಜೆಪಿ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸುವುದೇ ಎಂಬುದು ಈಗಿನ ಕುತೂಹಲ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶ್ರೀನಿವಾಸ್ ಬಾಡ್ಕರ್

contributor

Similar News