ರಾಜಲಬಂಡಾ ಅಣೆಕಟ್ಟಿನಲ್ಲಿ ಮೀನುಗಾರನ ಬಲೆಗೆ ಬಿದ್ದ 20 ಕೆ.ಜಿ ಯ ಮೀನು
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲಬಂಡಾ ಆಣೆಕಟ್ಟಿನಲ್ಲಿ ಶನಿವಾರ ಹವ್ಯಾಸಿ ಮೀನುಗಾರನ ಬಲೆಗೆ 20 ಕೆ.ಜಿ ತೂಕದ ಮೀನು ಸಿಕ್ಕಿದೆ.
ತುಂಗಭದ್ರಾ ಜಲಾಶಯ ಭರ್ತಿಯಾಗಿ ನದಿಯಿಂದ ನಿರಂತರವಾಗಿ ನೀರು ಹರಿದು ಬರುತ್ತಿರುವ ಕಾರಣ ರಾಜಲಬಂಡಾ ಅಣೆಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
ಜಲಾಶಯದಲ್ಲಿನ ಭಾರೀ ಗಾತ್ರದ ಮೀನುಗಳು ನದಿಯಲ್ಲಿ ಹರಿದು ಬಂದಿರುವುದು ಈ ಬಾರಿಯ ವಿಶೇಷವಾಗಿದೆ. ಕೆಲ ದಿನಗಳಿಂದ 5ರಿಂದ 7 ಕೆಜಿ ತೂಕದ ಮೀನುಗಳನ್ನು ಬಲೆಗೆ ಬೀಳಿಸಿಕೊಂಡಿದ್ದ ಸ್ಥಳೀಯ ಮೀನುಗಾರರು, ಇಂದು ಸುಮಾರು 20ಕೆಜಿ ತೂಕದ ಮೀನು ಕಂಡು ಅಚ್ಚರಿಗೊಂಡರು.
ತುಂಗಭದ್ರಾ ನದಿಯಲ್ಲಿ ನಾವು ಮೀನು ಹಿಡಿಯುವುದಕ್ಕೆ ಗಾಳ ಹಾಕಿದಾಗ ಸಣ್ಣ ಗಾತ್ರದ ಮೀನುಗಳು ಮಾತ್ರ ದೊರೆಯುತ್ತಿದ್ದವು . ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ತುಂಗಭದ್ರ ನದಿ ಸಂಪೂರ್ಣವಾಗಿ ಬತ್ತಿ ಹೋಗುತ್ತಿದ್ದರಿಂದ ಈ ಸಮಯದಲ್ಲಿ ನಮಗೆ ಮೀನುಗಳು ಸಿಗುತ್ತಿರಲಿಲ್ಲ. ಅದರೆ ಈ ಬಾರಿ ನದಿಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದು, ಭಾರಿ ಗಾತ್ರದ ಮೀನುಗಳು ಕೂಡ ಬಂದಿವೆ. ಅಣೆಕಟ್ಟೆಯ ನೀರಿನಲ್ಲಿ ಗಾಳ ಹಾಕಿದಾಗ ಭಾರಿ ಗಾತ್ರದ ಮೀನುಗಳು ಬೀಳುತ್ತಿರುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರಾದ ಮುಹಮ್ಮದ್ ತಿಳಿಸಿದರು.