ರಾಯಚೂರು | ಹೆದ್ದಾರಿ ರಸ್ತೆ ಕಬಳಿಸಿದ ಬಲಾಡ್ಯರ ಬಿಲ್ಡಿಂಗ್ ತೆರವುಗೊಳಿಸದೆ ತಾರತಮ್ಯ: ಸಿಪಿಐಎಂ ಆರೋಪ
ರಾಯಚೂರು : ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹಲವೆಡೆ ಫುಟ್ ಪಾತ್ ತೆರವು ಕಾರ್ಯಾಚರಣೆ ಮಾಡಿ ಬಡವರನ್ನು ಬೀದಿಗೆ ತಳ್ಳಿದ್ದು, ಹೆದ್ದಾರಿಯನ್ನು ಕಬಳಿಸಿದ ಬಲಾಡ್ಯರ ಕಟ್ಟಡಗಳನ್ನು ತೆರವು ಮಾಡದೇ ತಾರತಮ್ಯ ಮಾಡಿದ್ದಾರೆ ಎಂದು ಸಿಪಿಐ(ಎಂಎಲ್(ರೆಡ್ ಸ್ಟಾರ್ ರಾಜ್ಯ ಸಮಿತಿ) ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ರಾಜ್ಯ ಸಮಿತಿಯ ಕಾರ್ಯದರ್ಶಿ ಎಂ.ಗಂಗಾಧರ ಅವರು, ಬೀದಿಗೆ ಬಿದ್ದವರ ಬೆನ್ನಿಗೆ ಚೂರಿ ಹಾಕಿದ ತಾಲೂಕಾಡಳಿತ, ಬೀದಿ ಬದಿ ವ್ಯಾಪಾರಿಗಳಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದಿದ್ದಾರೆ.
ಸಂವಿಧಾನದ ಆರ್ಟಿಕಲ್ 19(1)(ಜಿ) ಪ್ರಕಾರ ನಾಗರೀಕನು ವ್ಯಾಪಾರ ಮಾಡುವ ಅಥವಾ ವ್ಯಾಪಾರವನ್ನು ಅಭ್ಯಾಸ ಮಾಡುವ ಮೂಲಭೂತ ಹಕ್ಕು ಕೊಡ ಮಾಡಲ್ಪಟ್ಟಿದ್ದು, ಕಾರಣ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳಿಗಾಗಿ ಹಾಗೂ ತೆರವುಗೊಳಿಸುವುದನ್ನು ವಿರೋದಿಸಿ, ಪುಟ್ಪಾತ್ ಮೇಲೆ ಸಣ್ಣಪುಟ್ಟ ತಳ್ಳುವ ಬಂಡಿಯನ್ನು ಇಟ್ಟುಕೊಂಡು ಅದರಲ್ಲಿ ಹಣ್ಣು, ತರಕಾರಿ ಹಾಗೂ ಇತರೆ ವಸ್ತುಗಳನ್ನು ಮಾರಿಕೊಂಡು ಬಂದ ಹಣದಲ್ಲಿ ಜೀವಿಸುವ ಜನರನ್ನು ಬದುಕಲು ಬಿಡಿ, ಹೈವೇ ರಸ್ತೆ ಕಬಳಿಸಿದ ಬಲಾಡ್ಯರ ಬಿಲ್ಡಿಂಗ್ ತೆರವುಗೊಳಿಸದೆ, ಬೀದಿಗೆ ಬಿದ್ದವರ ಬೆನ್ನಿಗೆ ಚೂರಿ ಹಾಕಿದ ತಾಲೂಕಾಡಳಿತದ ಕ್ರಮವನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮತ್ತು ಶಾಸಕ ಹಂಪನಗೌಡ ಬಾದರ್ಲಿ ನೀವು ಯಾರ ಪರವೆಂದು ಮೌನ ಮುರಿದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಭಾರತ ರಾಜ್ಯ ಪತ್ರದಲ್ಲಿರುವಂತೆ ಬೀದಿಬದಿ ವ್ಯಾಪಾರಿಗಳನ್ನು ವಿನಾಃಕಾರಣ ಒಕ್ಕಲೆಬ್ಬಿಸಬಾರದು, ಅವರಿಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ನಿರ್ದೇಶನ ನೀಡಿದೆ. ಅದರಂತೆ ಬೀದಿ ಬದಿಯಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ಮಾಡಿಕೊಂಡು ಹೋಗಲು ಜನರಿಗೆ ಅವಕಾಶ ಕಲ್ಪಿಸಿ. ಇಲ್ಲದೆ ಹೋದಲ್ಲಿ ನಾವು ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಂವಿಧಾನದ ವ್ಯಾಪಾರದ ಹಕ್ಕಿಗಾಗಿ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಅನಿರ್ದಿಷ್ಟ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.