ರಾಯಚೂರು | ಡಿ.31ರಂದು ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ : ಮುದ್ದುಕೃಷ್ಣ
ರಾಯಚೂರು : ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.31ರಂದು ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಅಸೋಶಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ.ಮುದ್ದುಕೃಷ್ಣ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗಾಗಲೇ ಹಲವಾರು ಪತ್ರಗಳನ್ನು ಬರೆದಿದ್ದೇವೆ. ಆದರೂ ಇದುವರೆಗೆ ಸ್ಪಂದಿಸಿಲ್ಲ. ರಾಜ್ಯದ 4 ಸಾರಿಗೆ ನಿಗಮಗಳಿಂದ ಪ್ರತಿದಿನ ಸುಮಾರು ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯ ಜನರನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಮೂಲಕ ಹಾಗೂ ಶಕ್ತಿ ಯೋಜನೆಗೆ ಬಲ ತುಂಬಿದ್ದೇವೆ. ಆದರೆ ನೌಕರರ ಬೇಡಿಕೆ ಈಡೇರಿಸದಿರುವುದು ಬೇಸರ ಮೂಡಿಸಿದೆ ಎಂದು ಹೇಳಿದರು.
ಸಾರಿಗೆ ನಿಗಮಗಳಿಗೆ ಸರ್ಕಾರ ಸುಮಾರು 5,010 ಕೋಟಿ ರೂ. ಹಾಗೂ ಶಕ್ತಿ ಯೋಜನೆ ಪೈಕಿ ಬಾಕಿ ಉಳಿದಿರುವ ಹಣ ಸುಮಾರು ರೂ 2 ಸಾವಿರ ಕೋಟಿ ರೂ. ಸಾರಿಗೆ ನಿಗಮಗಳಿಗೆ ಪಾವತಿ ಮಾಡಬೇಕು. ಸಾರಿಗೆ ನಿಗಮಗಳು ಬಿಡಿ-ಭಾಗ, ಟೈರ್ ಮುಂತಾದ ಸರಬರಾಜುದಾರರಿಗೆ ಮತ್ತು ಡಿಜಲ್ ಕಂಪನಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಸುಮಾರು 1,000 ಕೋಟಿ ರೂ. ಕೂಡಲೇ ನೀಡಬೇಕು. ಶಕ್ತಿ ಯೋಜನೆ ಅನುಷ್ಠಾನದ ಕಡೆಗೆ ಪ್ರತಿ ತಿಂಗಳೂ ಸಾರಿಗೆ ನಿಗಮಗಳಿಗೆ ಖರ್ಚಾಗುವ ಹಣವನ್ನು ಮುಂದಿನ ತಿಂಗಳ ಮೊದಲನೇ ವಾರದಲ್ಲಿಯೇ ಕೊಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಶಾಂತಮೂರ್ತಿ, ಎನ್.ಜಂಬಣ್ಣ, ಎ.ಈಶ್ವರಪ್ಪ, ಶ್ರೀಶೈಲರೆಡ್ಡಿ ಉಪಸ್ಥಿತರಿದ್ದರು.