ವಿರೂಪಗೊಂಡ ಸಮಾಜದ ಮುಖಕ್ಕೆ ಹಿಡಿದ ಕನ್ನಡಿ

Update: 2024-03-06 05:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಎಲ್ಲೋ ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ನಡೆಯುವ ಭೀಕರ ಕೃತ್ಯವೊಂದು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವಾಗಿರುವ ಕಡಬದ ಕಾಲೇಜು ಆವರಣದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಅಭಿನ್ ಎಂಬ ಯುವಕನೋರ್ವ ಆ್ಯಸಿಡ್ ದಾಳಿ ನಡೆಸಿದ್ದಾನೆ. ಪ್ರೇಮ ನಿರಾಕರಣೆಯ ಹಿನ್ನೆಲೆಯಲ್ಲಿ ಯುವಕನೊಬ್ಬ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೇಷದಲ್ಲಿ ಕಾಲೇಜು ಆವರಣಕ್ಕೆ ನುಸುಳಿ ವಿದ್ಯಾರ್ಥಿನಿಯರ ಮೇಲೆ ಈ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದರೆ ಇನ್ನಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಆ್ಯಸಿಡ್ ದಾಳಿಯಲ್ಲಿ ತರುಣಿಯರು ಜೀವಾಪಾಯದಿಂದ ಪಾರಾದರು ಎಂದು ನಿಟ್ಟುಸಿರು ಬಿಡುವಂತಿಲ್ಲ. ಯಾಕೆಂದರೆ ಆ್ಯಸಿಡ್ ದಾಳಿಯಿಂದ ಗಾಯಗೊಂಡ ತರುಣಿಯರು ಬದುಕಿನುದ್ದಕ್ಕೂ ಅದರ ನೋವನ್ನು ಅನುಭವಿಸಬೇಕಾಗುತ್ತದೆ. ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಈ ದಾಳಿ ನಡೆಸಿದ ಯುವಕನೂ ವಿದ್ಯಾರ್ಥಿಯೇ ಆಗಿರುವುದು ಪ್ರಕರಣದ ಗಂಭೀರತೆಯನ್ನು ಹೇಳುತ್ತದೆ. ಬುದ್ಧಿವಂತರ ಜಿಲ್ಲೆ ಎಂದು ಗುರುತಿಸಲ್ಪಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರನೇ ಪ್ರಕರಣ ಇದಾಗಿದೆ. 2019ರಲ್ಲಿ ಇದೇ ಕಡಬದಲ್ಲಿ ಕುಟುಂಬ ಕಲಹ ನಡೆದಾಗ ಮಹಿಳೆಯ ಮೇಲೆ ಆ್ಯಸಿಡ್ ಎರಚಲಾಗಿತ್ತು. ಇದರಲ್ಲಿ ಆಕೆ ಶೇ. 25 ಸುಟ್ಟಗಾಯಕ್ಕೊಳಗಾಗಿದ್ದರು. 2022ರಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆದಿತ್ತು. ಇದರಲ್ಲಿ ಓರ್ವ ಸಂತ್ರಸ್ತೆ ಮೃತಪಟ್ಟಿದ್ದರು. ಇದೀಗ, ಆ್ಯಸಿಡ್ ದಾಳಿ ಕಾಲೇಜಿನ ಆವರಣಕ್ಕೆ ಕಾಲಿಟ್ಟಿದೆ.

ಸಾಧಾರಣವಾಗಿ ಆ್ಯಸಿಡ್ ದಾಳಿಗಳ ಮುಖ್ಯ ಗುರಿ ಮಹಿಳೆಯರೇ ಆಗಿರುತ್ತಾರೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಯಾವುದೇ ಗಲಭೆ, ಘರ್ಷಣೆೆಗಳು ನಡೆದಾಗಲೂ ಪುರುಷರ ಮೇಲೆ ಆ್ಯಸಿಡ್ ದಾಳಿಗಳು ನಡೆದಿರುವುದು ತೀರಾ ಕಡಿಮೆ. ತನ್ನ ಪುರುಷ ಅಹಂಕಾರಕ್ಕೆ ಸವಾಲಾಗಿರುವ ಮಹಿಳೆಗೆ ‘ಪಾಠ’ ಕಲಿಸುವ ವಿಕೃತ ಉದ್ದೇಶವನ್ನು ದುಷ್ಕರ್ಮಿಗಳು ಹೊಂದಿರುತ್ತಾರೆ. ಅವರ ಗುರಿ ಮಹಿಳೆಯ ಮೇಲೆ ಹಲ್ಲೆ ನಡೆಸುವುದಷ್ಟೇ ಅಲ್ಲ, ಆಕೆ ಶಾಶ್ವತವಾಗಿ ಕೊರಗಿ ಸಾಯುವಂತೆ ಮಾಡುವುದಕ್ಕಾಗಿಯೇ ಆ್ಯಸಿಡ್ ದಾಳಿಯನ್ನು ನಡೆಸುತ್ತಾರೆ. ತಕ್ಷಣದ ಆವೇಶಕ್ಕೆ ಒಳಗಾಗಿ ಯಾರೂ ಆ್ಯಸಿಡ್ ದಾಳಿ ನಡೆಸುವುದಿಲ್ಲ. ಯಾಕೆಂದರೆ ಆ್ಯಸಿಡ್‌ಗಳು ಸುಲಭದಲ್ಲಿ ದೊರಕುವ ವಸ್ತುವಲ್ಲ. ಒಬ್ಬ ಯಾವುದೋ ಆವೇಶದಲ್ಲಿ ಕೈಗೆ ಸಿಕ್ಕಿದ ಆಯುಧಗಳಿಂದ ತಕ್ಷಣದ ಕೋಪದಿಂದ ಹಲ್ಲೆ ಮಾಡಬಹುದು. ದ್ವೇಷವಿದ್ದರೆ ಕತ್ತಿ, ಚೂರಿಗಳಿಂದ ಹಲ್ಲೆ ಮಾಡಬಹುದು. ಆದರೆ ನಿರ್ದಿಷ್ಟವಾಗಿ ಆ್ಯಸಿಡ್ ಮೂಲಕವೇ ದಾಳಿ ನಡೆಸಬೇಕಾದರೆ ಅದಕ್ಕೆ ಬಹಳಷ್ಟು ತಯಾರಿಗಳು ಬೇಕಾಗುತ್ತವೆ. ಮುಖ್ಯವಾಗಿ ಆ್ಯಸಿಡ್ ಸುಲಭದಲ್ಲಿ ಸಿಗುವ ವಸ್ತುವಲ್ಲ ಎಂದು ನಾವೆಲ್ಲ ನಂಬಿದ್ದೇವೆ. ಕಡಬದಲ್ಲಿ ನಡೆದ ಪ್ರಕರಣದಲ್ಲಿ ವಿದ್ಯಾರ್ಥಿಗೆ ಆನ್‌ಲೈನ್‌ನಲ್ಲಿ ಸುಲಭವಾಗಿ ಆ್ಯಸಿಡನ್ನು ತರಿಸಿದ್ದಾನೆ. ಅಂದರೆ, ತನ್ನ ದುರುದ್ದೇಶಕ್ಕೆ ಬಲಿ ಬೀಳದ ವಿದ್ಯಾರ್ಥಿನಿಯನ್ನು ಜೀವಚ್ಛವವಾಗಿಸುವ ಮನಸ್ಥಿತಿಯಿಂದಲೇ ಆತ ಕೃತ್ಯವನ್ನು ಎಸಗಿದ್ದಾನೆ.

ಹೆಣ್ಣು ತನ್ನ ಮೂಗಿನ ನೇರಕ್ಕಿರಬೇಕು, ತನ್ನ ಅಂಕೆಯಲ್ಲಿರಬೇಕು ಎನ್ನುವ ಪುರುಷನ ತಲೆತಲಾಂತರದ ಅಹಂಕಾರ ವಿಕಾರ ರೂಪ ಪಡೆದಾಗ ಆ್ಯಸಿಡ್ ದಾಳಿಯಂತಹ ಕೃತ್ಯ ಸಂಭವಿಸುತ್ತದೆ. ಹೆಣ್ಣಿನ ಅಸ್ತಿತ್ವ ಆಕೆಯ ಮುಖದ ಸೌಂದರ್ಯದಲ್ಲಿದೆ ಎಂದು ಭಾವಿಸುವ ಪುರುಷನ ಮನಸ್ಥಿತಿಯೇ ಈ ಕೃತ್ಯ ಎಸಗುವುದಕ್ಕೆ ಕುಮ್ಮಕ್ಕು ನೀಡುತ್ತದೆ. ಹೆಣ್ಣನ್ನು ವಿರೂಪಗೊಳಿಸುವ ಮೂಲಕ ನಾನು ಆ ಹೆಣ್ಣಿನ ಅಸ್ತಿತ್ವವನ್ನು ಅಳಿಸುತ್ತೇನೆ ಎನ್ನುವ ಕ್ರೌರ್ಯದ ಪರಮಾವಧಿಗೆ ದುಷ್ಕರ್ಮಿ ತಲುಪಿರುತ್ತಾನೆ. ಆ್ಯಸಿಡ್‌ದಾಳಿಯ ನೋವು ಕೆಲವೇ ಕ್ಷಣಗಳದ್ದು. ಆದರೆ ಆ ದಾಳಿಯ ಬಳಿಕ ಆಕೆ ತನ್ನ ಮುಖವನ್ನು ಹೊತ್ತು ಬದುಕುವ ನೋವು ಶಾಶ್ವತವಾದುದು. ಆದುದರಿಂದ ಆಕೆಗೆ ಮುಕ್ತಿಯೇ ಇಲ್ಲ. ಏಕಕಾಲದಲ್ಲಿ ದೈಹಿಕ, ಮಾನಸಿಕ ನೋವುಗಳ ಜೊತೆಗೆ ತನ್ನ ಉಳಿದ ಬದುಕನ್ನು ಆಕೆ ಬದುಕ ಬೇಕಾಗುತ್ತದೆ. ಆ್ಯಸಿಡ್ ದಾಳಿಯೆನ್ನುವುದು ವಿರೂಪಗೊಂಡ ಸಮಾಜದ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಆದುದರಿಂದ ಆ್ಯಸಿಡ್ ದಾಳಿ ಆರೋಪಿಗೆ ಈಗ ಕಾನೂನು ನೀಡುತ್ತಿರುವ ಶಿಕ್ಷೆ ಯ ಪ್ರಮಾಣ ಎಸಗಿದ ಕೃತ್ಯಕ್ಕೆ ಹೋಲಿಸಿದರೆ ತೀರಾ ಅಲ್ಪ. ಪುರುಷನ ಕೀಳರಿಮೆ, ಅವನೊಳಗಿನ ಕ್ರೌರ್ಯ ಇವೆಲ್ಲವುಗಳಿಗೂ ಸವಾಲೆಸೆಯುವಂತೆ ಈ ದೇಶದಲ್ಲಿ ನೂರಾರು ಸಂತ್ರಸ್ತೆಯರು ಆ್ಯಸಿಡ್ ದಾಳಿಗೊಳಗಾಗಿಯೂ ಆತ್ಮವಿಶ್ವಾಸದ ಬಲದಿಂದ ಮತ್ತೆ ಬದುಕನ್ನು ರೂಪಿಸಿಕೊಂಡಿದ್ದಾರೆ ಎನ್ನುವುದು ಮಾತ್ರ ಸಮಾಧಾನ ತರುವ ವಿಷಯ. ಆ್ಯಸಿಡ್ ಸಂತ್ರಸ್ತೆಯರಿಗಾಗಿಯೇ ಹಲವು ಸರಕಾರೇತರ ಸಂಘಟನೆಗಳು ದುಡಿಯುತ್ತಿವೆ. ಸಂತ್ರಸ್ತೆಯರಿಗೆ ಆತ್ಮರ್ಸ್ಥೈಯವನ್ನು ನೀಡುತ್ತಿವೆ.

ಕಳೆದ ವರ್ಷ ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಆ್ಯಸಿಡ್ ದಾಳಿಗಳ ಪೈಕಿ ಅತ್ಯಂತ ಹೆಚ್ಚಿನ ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ ಎನ್ನುವ ಆಘಾತಕಾರಿ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಇತ್ತೀಚೆಗೆ ಹೇಳಿದೆ. 2022ರಲ್ಲಿ ಬೆಂಗಳೂರಿನಲ್ಲಿ ಒಟ್ಟು ಎಂಟು ಮಹಿಳೆಯರು ಆ್ಯಸಿಡ್ ದಾಳಿಗೆ ಒಳಗಾಗಿದ್ದಾರೆ. ದಿಲ್ಲಿ ಮತ್ತು ಅಹಮದಾಬಾದ್ ಎರಡನೇ ಸ್ಥಾನದಲ್ಲಿದೆ. ದಿಲ್ಲಿಯಲ್ಲಿ ಏಳು ಮಹಿಳೆಯರು ಆ್ಯಸಿಡ್ ದಾಳಿಗೊಳಗಾಗಿದ್ದರೆ ಅಹ್ಮದಾಬಾದ್‌ನಲ್ಲಿ ಐವರು ಮಹಿಳೆಯರು ಈ ದಾಳಿಯ ಸಂತ್ರಸ್ತರಾಗಿದ್ದಾರೆ. ಇದೇ ಸಂದರ್ಭದಲ್ಲಿ ದಿಲ್ಲಿಯಲ್ಲಿ ಆ್ಯಸಿಡ್ ದಾಳಿ ನಡೆಸುವ ಪ್ರಯತ್ನದಲ್ಲಿ ವಿಫಲವಾಗಿರುವ ಏಳು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಹೈದರಾಬಾದ್ ಮತ್ತು ಅಹ್ಮದಾಬಾದ್‌ನಲ್ಲಿ ಇಂತಹ ತಲಾ ಎರಡು ಪ್ರಕರಣಗಳು ವರದಿಯಾಗಿವೆ. 1982ರಲ್ಲಿ ಮೊತ್ತ ಮೊದಲ ಆ್ಯಸಿಡ್ ದಾಳಿ ಪ್ರಕರಣ ಬೆಳಕಿಗೆ ಬಂತು. ವಿಶೇಷವೆಂದರೆ ಮಹಿಳಾ ದೌರ್ಜನ್ಯಗಳಿಗೆ ಉತ್ತರ ಪ್ರದೇಶ ಕುಖ್ಯಾತವಾಗಿದ್ದರೂ, ಆ್ಯಸಿಡ್ ದಾಳಿಯಂತಹ ಪ್ರಕರಣಗಳಿಗೆ ಬಹುತೇಕ ದಿಲ್ಲಿ, ಬೆಂಗಳೂರು, ಅಹ್ಮದಾಬಾದ್‌ನಂತಹ ನಗರಗಳೇ ಗುರುತಿಸಲ್ಪಡುತ್ತಿರುವುದು. ಇಂತಹ ದಾಳಿಗಳನ್ನು ನಡೆಸಿದ ಹೆಚ್ಚಿನವರಿಗೆ ಕ್ರಿಮಿನಲ್ ಹಿನ್ನೆಲೆಯೇ ಇದ್ದಿರಲಿಲ್ಲ. ದಾಳಿ ನಡೆಸಿದವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಾರೆ. ವಿಪರ್ಯಾಸವೆಂದರೆ, ಆ್ಯಸಿಡ್ ದಾಳಿಯ ಭೀಕರತೆಯ ಬಗ್ಗೆ ಅರಿವಿದ್ದೂ ಇದನ್ನು ತಡೆಯುವಲ್ಲಿ ಅಥವಾ ಕಡಿವಾಣ ಹಾಕುವಲ್ಲಿ ಸರಕಾರ ವಿಫಲವಾಗಿರುವುದು. ಆ್ಯಸಿಡ್ ದಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬರುತ್ತಿವೆ.2011ರಲ್ಲಿ 83 ದಾಳಿಗಳು ನಡೆದಿದ್ದರೆ, 2021ರಲ್ಲಿ ಇದು 176ಕ್ಕೆ ಏರಿತು.

ಒಂದು ಕಾಲದಲ್ಲಿ ಬಾಂಗ್ಲಾ ದೇಶ ಆ್ಯಸಿಡ್ ದಾಳಿಗಳಿಗಾಗಿ ಕುಖ್ಯಾತಿಯಾಗಿತ್ತು. ಆದರೆ 2002ರಲ್ಲಿ ಅಲ್ಲಿನ ಸರಕಾರ ಈ ಬಗ್ಗೆ ಬಿಗಿಯಾದ ಕಾನೂನು ಜಾರಿಗೊಳಿಸಿದ ದಿನದಿಂದ ಆ್ಯಸಿಡ್ ದಾಳಿಯಲ್ಲಿ ಭಾರೀ ಇಳಿಕೆ ಕಂಡು ಬಂತು. ಆ್ಯಸಿಡ್ ದಾಳಿಯನ್ನು ತಡೆಯುವುದಕ್ಕೆ ಮೊದಲು ಮಾಡಬೇಕಾಗಿರುವುದು, ಮಾರುಕಟ್ಟೆಯಲ್ಲಿ ಆ್ಯಸಿಡ್ ಆಮದು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರುವುದು. ಇದಾದ ಬಳಿಕ ಆರೋಪಿಗಳ ತುರ್ತು ವಿಚಾರಣೆ ನಡೆಸಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ನಿರ್ಭಯಾ ಪ್ರಕರಣದ ಬಳಿಕ ಕೇಂದ್ರ ಸರಕಾರವು ಭಾರತೀಯ ದಂಡ ಸಂಹಿತೆಗೆ ತಿದ್ದು ಪಡಿ ಮಾಡಿತು. ಆ್ಯಸಿಡ್ ದಾಳಿಯನ್ನು ಪ್ರತ್ಯೇಕ ಅಪರಾಧವೆಂದು ಗುರುತಿಸಿ ಅಪರಾಧಿಗೆ ಕನಿಷ್ಠ 10 ವರ್ಷ ಶಿಕ್ಷೆ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಅದೇ ವರ್ಷ ಆ್ಯಸಿಡ್ ಮಾರಾಟದ ಮೇಲೂ ಕೆಲವು ನಿಯಂತ್ರಣಗಳನ್ನು ಹೇರಿತು. ಇಷ್ಟಾದರೂ ಆ್ಯಸಿಡ್ ಇನ್ನೂ ದುಷ್ಕರ್ಮಿಗಳ ಕೈ ಸೇರುತ್ತವೆ ಎನ್ನುವುದು ಆತಂಕಕಾರಿಯಾಗಿದೆ.

ಇದೇ ಸಂದರ್ಭದಲ್ಲಿ ರಾಜಕಾರಣಿಗಳ ದ್ವೇಷ ಭಾಷಣ, ಸಿನೆಮಾಗಳು, ಮನರಂಜನೆಯ ಹೆಸರಿನಲ್ಲಿ ಯುವಕರು, ವಿದ್ಯಾರ್ಥಿಗಳಲ್ಲಿ ಹೇರುತ್ತಿರುವ ಕ್ರೌರ್ಯಗಳು ಇಂತಹ ದಾಳಿಗಳಿಗೆ ಪರೋಕ್ಷವಾಗಿ ಪ್ರಚೋದನೆಯನ್ನು ನೀಡುತ್ತವೆ ಎನ್ನುವುದನ್ನು ನಾವು ಮರೆಯಬಾರದು. ಅಂತರ್ಜಾಲಗಳು ನಮ್ಮ ಯುವಸಮೂಹವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎನ್ನುವುದಕ್ಕೂ ಹೆಚ್ಚುತ್ತಿರುವ ಆ್ಯಸಿಡ್ ದಾಳಿಗಳನ್ನು ಉದಾಹರಣೆಯಾಗಿ ಕೊಡಬಹುದಾಗಿದೆ. ಈ ನಿಟ್ಟಿನಲ್ಲಿ ಇಂತಹ ಕೃತ್ಯಗಳಿಗೆ ಬಲಿಯಾಗುತ್ತಿರುವ ಯುವ ಸಮುದಾಯದೊಳಗೆ ಜಾಗೃತಿಯನ್ನು ಮೂಡಿಸಲು ವಿಶೇಷ ಕೌನ್ಸೆಲಿಂಗ್ ನಡೆಸುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News