ಕುಂಭಕರ್ಣನನ್ನು ಎಬ್ಬಿಸುವ ಕಟ್ಟಕಡೆಯ ವಿಫಲ ಪ್ರಯತ್ನ

Update: 2023-08-11 05:05 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲಂಕೆಗೆ ಬೆಂಕಿ ಬಿದ್ದಿದೆ. ಆದರೆ ಕುಂಭಕರ್ಣ ಗಾಢ ನಿದ್ದೆಯಲ್ಲಿದ್ದಾನೆ. ೬ ತಿಂಗಳು ಊಟ, ಉಳಿದ ಆರು ತಿಂಗಳು ನಿದ್ದೆ. ಇದು ಕುಂಭಕರ್ಣನ ಚಾಳಿ. ಲಂಕೆಗೆ ಬೆಂಕಿ ಬಿದ್ದಾಗಲಾದರೂ ಆತ ನಿದ್ದೆಯಿಂದ ಎದ್ದು ಸಹಾಯಕ್ಕೆ ಬರಬಹುದು ಎನ್ನುವ ಲಂಕೆಯ ಜನರ ನಿರೀಕ್ಷೆ ಹುಸಿಯಾಯಿತು. ಈ ಸಂದರ್ಭದಲ್ಲಿ ನಿದ್ದೆಯಲ್ಲಿರುವ ಕುಂಭಕರ್ಣನನ್ನು ಎಬ್ಬಿಸಲು ಲಂಕೆಯ ಜನರು ಬಗೆ ಬಗೆಯ ಪ್ರಯತ್ನ ಮಾಡುತ್ತಾರೆ. ಆತನ ಕಿವಿಯ ಒಳಗೆ ಆನೆಯನ್ನು ನುಗ್ಗಿಸುತ್ತಾರೆ. ಮೂಗಿಗೆ ನೀರು ತುಂಬಿಸುತ್ತಾರೆ. ಹೊಟ್ಟೆಯ ಮೇಲೆ ಕುಣಿಯುತ್ತಾರೆ. ಆದರೂ ಕುಂಭಕರ್ಣನಿಗೆ ಎಚ್ಚರಿಕೆಯಾಗುವುದಿಲ್ಲ. ಸದ್ಯದ ಭಾರತದ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಕಳೆದ ಕೆಲವು ವರ್ಷಗಳಿಂದ ಈ ದೇಶದ ಸಮಸ್ಯೆಗಳ ವಿರುದ್ಧ ಕೇಂದ್ರ ಸರಕಾರದ ಮೌನವನ್ನು ಮುರಿಯಲು ವಿರೋಧ ಪಕ್ಷಗಳ ನಾಯಕರು ನಡೆಸುತ್ತಿರುವ ಪ್ರಯತ್ನ ಕುಂಭಕರ್ಣನ ನಿದ್ದೆಯನ್ನು ಮುರಿಯುವುದಕ್ಕೆ ಮಾಡಿದ ಪ್ರಯತ್ನಕ್ಕಿಂತಲೂ ಹೃದಯವಿದ್ರಾವಕವಾಗಿದೆ.

ಈ ಹಿಂದೆ ವಿಪಕ್ಷ ನಾಯಕರೊಬ್ಬರು ಪ್ರಧಾನಿಯನ್ನು ರಾವಣನಿಗೆ ಹೋಲಿಸಿರುವುದು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಆದರೆ ಹತ್ತು ತಲೆಯ ರಾವಣ, ತನ್ನ ದೇಶಕ್ಕೆ ಬೆಂಕಿ ಬಿದ್ದಾಗ ನಿದ್ದೆ ಮಾಡುತ್ತಾ ಕಾಲ ಕಳೆದಿರಲಿಲ್ಲ. ಪುಷ್ಪಕ ವಿಮಾನದಲ್ಲಿ ಕುಳಿತು ವಿದೇಶ ಯಾತ್ರೆಯಲ್ಲಿ ತಲ್ಲೀನನಾಗಿರಲಿಲ್ಲ. ನಾಡಿನಿಂದ ಬಂದವರು ತನ್ನ ತಂಗಿಯ ಕಿವಿ, ಮೂಗು ಕತ್ತರಿಸಿದ್ದು ತಿಳಿದು ರಾವಣ ಕೆಂಡಾಮಂಡಲನಾಗಿದ್ದ. ಆದರೆ ಇಂದು ಭಾರತದ ಮಗಳಾಗಿರುವ ಮಣಿಪುರವನ್ನು ದುಷ್ಕರ್ಮಿಗಳು ವಿಶ್ವದ ಮುಂದೆ ಬೆತ್ತಲೆಗೊಳಿಸಿದ್ದಾರೆ. ಆಕೆಯ ಕಿವಿ, ಮೂಗನ್ನು ಸಾರ್ವಜನಿಕವಾಗಿ ಕತ್ತರಿಸಿ ವಿರೂಪಗೊಳಿಸಿದ್ದಾರೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ವಿರೋಧ ಪಕ್ಷದ ನಾಯಕರು ಆರೋಪಿಸಿರುವಂತೆ ರಾವಣನೇ ಆಗಿದ್ದರೆ ಪ್ರಧಾನಿ ಮೈಕೊಡವಿ ಎದ್ದು ಕೂರುತ್ತಿದ್ದರು. ಮಣಿಪುರದ ಮಹಿಳೆಯರಿಗೆ ನ್ಯಾಯ ನೀಡಲು ತನ್ನ ಮೌನ ವ್ರತವನ್ನು ಮುರಿಯುತ್ತಿದ್ದರು. ಮಣಿಪುರದ ಬಗ್ಗೆ ವಿಶ್ವವೇ ಮಾತನಾಡುತ್ತಿರುವಾಗ ಮೋದಿ ನೇತೃತ್ವದ ಸರಕಾರ ಗಾಢ ನಿದ್ದೆಯಲ್ಲಿದೆ. ಆದುದರಿಂದ ಪ್ರಧಾನಿ ಮೋದಿ ಅವರನ್ನು ರಾವಣ ಎಂದು ಕರೆದಿರುವ ವಿರೋಧ ಪಕ್ಷದ ನಾಯಕರು ತಮ್ಮ ಟೀಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು. ಅಪಾರ ಅಧ್ಯಯನ ಶೀಲನಾಗಿರುವ, ಸಂವೇದನಾಶೀಲನಾಗಿರುವ, ಬುದ್ಧಿವಂತನಾಗಿರುವ ರಾವಣನ ಕೆಲವು ಗುಣಗಳಾದರೂ ಪ್ರಧಾನಿಗಿದ್ದಿದ್ದರೆ ಅವರು ಮಣಿಪುರದಲ್ಲಿ ನಡೆಯುತ್ತಿರುವುದನ್ನು ಖಂಡಿಸಿ ಹೇಳಿಕೆಯನ್ನು ನೀಡುತ್ತಿದ್ದರು. ಅವರನ್ನು ಮಾತನಾಡಿಸುವ ಏಕೈಕ ಉದ್ದೇಶದಿಂದ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಅಗತ್ಯ ಬೀಳುತ್ತಿರಲಿಲ್ಲ.

ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಂದರ್ಭದಲ್ಲಿ, ವಿಪಕ್ಷ ನಾಯಕರಿಗೆ ಸರಕಾರದ ವೈಫಲ್ಯಗಳನ್ನು ದೇಶದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಲು ಒಂದು ಅವಕಾಶ ಸಿಗುತ್ತದೆ. ಅವಿಶ್ವಾಸ ನಿರ್ಣಯದಲ್ಲಿ ಸೋಲಾದರೂ, ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಧಾನಿ ಮೋದಿಯವರು ಮೌನ ಮುರಿಯಲೇ ಬೇಕು. ಬಹುಶಃ ಪ್ರಧಾನಿಯನ್ನು ಮಾತನಾಡಿಸುವುದರಲ್ಲೇ ವಿರೋಧ ಪಕ್ಷದ ನಾಯಕರ ಗೆಲುವಿದೆ. ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವ ಕಟ್ಟಕಡೆಯ ಪ್ರಯತ್ನದಲ್ಲಿ ವಿಪಕ್ಷ ಒಕ್ಕೂಟ ‘ಇಂಡಿಯಾ’ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಭಾಗಶಃ ಯಶಸ್ವಿಯಾಗಿದ್ದಾರೆ. ಆದರೆ ಇಡೀ ಭಾಷಣದಲ್ಲಿ ಮಣಿಪುರಕ್ಕಾಗಿ ಎರಡು ಸಾಲುಗಳನ್ನು ಮೀಸಲಿಟ್ಟು, ಉಳಿದ ಜಾಗವನ್ನು ತನ್ನ ಬಹುಪರಾಕ್‌ಗೆ ಮೀಸಲಿಟ್ಟರು. ಕುಂಭಕರ್ಣನನ್ನು ಎಬ್ಬಿಸಲು ಯಶಸ್ವಿಯಾದರೂ, ಅದರಿಂದ ವಿಶೇಷ ಪ್ರಯೋಜನವೇನೂ ಆಗಲಿಲ್ಲ. ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಭಾಷಣ ಮಾಡಿದ ಅವರು, ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತಿದ್ದೇನೆ ಎಂದು ಘೋಷಿಸಿಕೊಂಡರು. ಆದರೆ ಗಲಭೆ, ಹಿಂಸಾಚಾರ ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗುವುದಿಲ್ಲ ಎನ್ನುವ ಪ್ರಾಥಮಿಕ ಅರಿವು ಕೂಡ ಅವರ ಮಾತಿನಲ್ಲಿರಲಿಲ್ಲ. ಅಭಿವೃದ್ಧಿಯ ಕಡೆಗೆ ದೇಶವನ್ನು ಮುನ್ನಡೆಸಬೇಕಾದರೆ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಯಾಗಬೇಕು. ಮಣಿಪುರವೂ ಸೇರಿದಂತೆ ದೇಶಾದ್ಯಂತ ಅವಾಂತರಗಳನ್ನು ಎಸಗುತ್ತಿರುವ ದುಷ್ಕರ್ಮಿಗಳನ್ನು ಮಟ್ಟಹಾಕಿ, ದೇಶದಲ್ಲಿ ಶಾಂತಿ ಸೌಹಾರ್ದಗಳನ್ನು ಪುನರ್ ಸ್ಥಾಪಿಸಲು ಕ್ರಮ ತೆಗೆದುಕೊಳ್ಳುವುದು ಅಭಿವೃದ್ಧಿಯೆಡೆಗೆ ದೇಶವನ್ನು ಮುನ್ನಡೆಸುವ ಮೊದಲ ಹಂತ. ಈ ಬಗ್ಗೆ ಪ್ರಧಾನಿಯ ಭಾಷಣದಲ್ಲಿ ಯಾವ ಭರವಸೆಯೂ ಇರಲಿಲ್ಲ. ಅವರ ಮಾತುಗಳಲ್ಲಿ ಕುಂಭಕರ್ಣನ ಗೊರಕೆ ಸದ್ದಷ್ಟೇ ಕೇಳಿಸುತ್ತಿತ್ತು.

ಮಣಿಪುರವನ್ನು ಮುಂದಿಟ್ಟು ವಿಪಕ್ಷ ನಾಯಕರು ಆಡಿದ ಮಾತುಗಳೇ ಹೆಚ್ಚು ಅರ್ಥಪೂರ್ಣವಾಗಿದ್ದವು. ಅವುಗಳಿಗೆ ಉತ್ತರಿಸಲು ಪ್ರಧಾನಿ ಮೋದಿ ಸಂಪೂರ್ಣ ವಿಫಲವಾದರು. ರಾಹುಲ್‌ಗಾಂಧಿಯವರಂತೂ ತಮ್ಮ ಭಾಷಣದಲ್ಲಿ ‘‘ಈಶಾನ್ಯ ಭಾರತದಲ್ಲಿ ಬಿಜೆಪಿಯು ಭಾರತ ಮಾತೆಯನ್ನು ಕೊಂದಿದೆ’’ ಎಂದು ಹೇಳಿದ್ದಾರೆ. ಲೋಕಸಭಾ ಸದಸ್ಯತ್ವ ಮರಳಿದ ಬಳಿಕ ಅವರು ಸಂಸತ್ತಿನಲ್ಲಿ ಮಾಡಿದ ಮೊದಲ ಭಾಷಣವಿದು. ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ದೇಶದ ಮುಂದಿಡುವುದು ಅಸಾಧ್ಯ.

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಕನಿಷ್ಠ ಬಿಜೆಪಿಯ ಮಹಿಳಾ ಸಂಸದರಾದರೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬಹುದು ಎಂದು ಜನ ನಂಬಿದ್ದರು. ಆದರೆ ಅವರು ಸಂಸತ್ತಿನ ಉದ್ದೇಶವನ್ನು ಹಳಿ ತಪ್ಪಿಸುವ ಪ್ರಯತ್ನ ಮಾಡಿದರು. ದೇಶ ಮಣಿಪುರದಲ್ಲಿ ಬೆತ್ತಲಾದ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರ ಬಗ್ಗೆ ಆಘಾತವ್ಯಕ್ತಪಡಿಸುತ್ತಿದ್ದರೆ ಈ ಮಹಿಳಾ ಸಂಸದರು ‘‘ರಾಹುಲ್ ನಮ್ಮ ಕಡೆಗೆ ಫ್ಲೈಯಿಂಗ್ ಕಿಸ್ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’’ ಎಂದು ಘೋಷಣೆ ಕೂಗಿದ್ದಾರೆ. ರಾಹುಲ್‌ಗಾಂಧಿ ಸದನದಿಂದ ನಿರ್ಗಮಿಸುತ್ತಿದ್ದಾಗ ಅವರ ಕೈಯಲ್ಲಿದ್ದ ಕೆಲವು ಕಡತಗಳು ಆಕಸ್ಮಿಕವಾಗಿ ನೆಲಕ್ಕೆ ಬಿದ್ದವು. ಆಗ ಕೆಲವು ಬಿಜೆಪಿ ಸಂಸದರು ಗೊಳ್ಳೆಂದು ನಕ್ಕರು. ಸಂಸತ್ತಿನಲ್ಲಿ ಅದೆಷ್ಟು ಟೀಕೆ, ಪ್ರತಿಟೀಕೆಗಳು ನಡೆದರೂ, ಇಂತಹ ಸಂದರ್ಭದಲ್ಲಿ ಯಾರೂ ಯಾರನ್ನೂ ಅಣಕಿಸಿ ನಗುವುದಿಲ್ಲ. ಸಾಧ್ಯವಾದರೆ ಅವರಿಗೆ ನೆರವಾಗುತ್ತಾರೆ. ಆದರೆ ಈ ಮಹಿಳಾ ಸಂಸದರು ತಮ್ಮ ಬುದ್ಧಿ ಮಟ್ಟವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದ್ದರು. ಆದರೆ ಇದಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿದ ರಾಹುಲ್‌ಗಾಂಧಿ ‘ಫೈಯಿಂಗ್ ಕಿಸ್’ (ಅಂದರೆ ತನ್ನದೇ ಅಂಗೈಯನ್ನು ಚುಂಬಿಸಿ ಗಾಳಿಗೆ ಹಾರಿ ಬಿಡುವುದು) ನೀಡಿದ್ದಾರೆ. ತಮ್ಮ ವ್ಯಂಗ್ಯವನ್ನು ಪ್ರೀತಿಯ ಮೂಲಕ ಎದುರಿಸಿರುವುದು ಬಹುಶಃ ಆ ಸಂಸದರಿಗೆ ಇರಿಸು ಮುರಿಸು ತಂದಿರಬೇಕು. ತಕ್ಷಣ ಬಿಜೆಪಿಯೊಳಗಿರುವ ಏಕೈಕ ಸ್ತ್ರೀವಾದಿ ಸ್ಮತಿ ಇರಾನಿ ‘‘ರಾಹುಲ್ ಅವರ ನಡವಳಿಕೆ ಸ್ತ್ರೀ ದ್ವೇಷಿಯಾಗಿದೆ’’ ಎಂದು ಗದ್ದಲ ಎಬ್ಬಿಸಿದರು. ಇಷ್ಟಕ್ಕೂ ರಾಹುಲ್ ಅವರು ಫ್ಲೈಯಿಂಗ್ ಕಿಸ್ ನೀಡುತ್ತಿರುವುದು ಕ್ಯಾಮರಾದಲ್ಲೂ ಸೆರೆಯಾಗಿಲ್ಲ. ಇದನ್ನೇ ಇಡೀ ದೇಶದ ಮಹಿಳೆಯರ ಮಾನಾಪಮಾನದ ಪ್ರಶ್ನೆಯಾಗಿಸಲು ಅವರು ಮುಂದಾದರು. ಸ್ಪೀಕರ್‌ಗೆ ದೂರನ್ನೂ ನೀಡಿದರು.

ದೂರದಿಂದ ರಾಹುಲ್‌ಗಾಂಧಿಯವರು ತನಗೆ ‘ಫ್ಲೈಯಿಂಗ್ ಕಿಸ್’ ನೀಡಿದ್ದಾರೆ ಎಂದು ಆರೋಪಿಸಿ ಅದನ್ನು ಸ್ತ್ರೀ ದ್ವೇಷವೆಂದು ಟೀಕಿಸಿ ಗದ್ದಲ ಎಬ್ಬಿಸಿರುವ ಇದೇ ಸಂಸದರು ಸಂಸತ್ತಿನಲ್ಲಿ ಮಣಿಪುರದ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ವಿರುದ್ಧ ತುಟಿ ಬಿಚ್ಚಿಲ್ಲ. ಒಂದು ಫ್ಲೈಯಿಂಗ್ ಕಿಸ್ ಇವರಿಗೆ ಈ ಮಟ್ಟಿಗೆ ಮುಜುಗರವನ್ನು ತಂದಿದೆಯಾದರೆ ಮಣಿಪುರದಲ್ಲಿ ನೂರಾರು ಮಂದಿಯ ಮುಂದೆ ಬೆತ್ತಲೆ ಮೆರವಣಿಗೆಯಲ್ಲಿ ಸಾಗಿದ ಮಹಿಳೆಯರ ಸ್ಥಿತಿ ಹೇಗಿರಬೇಕು? ಈ ಬಗ್ಗೆ ಈ ಸಂವೇದನಾಶೀಲ ಮಹಿಳೆಯರು ಪ್ರಧಾನಿಯಿಂದ ಉತ್ತರವನ್ನು ಯಾಕೆ ನಿರೀಕ್ಷಿಸಲಿಲ್ಲ? ಮಹಿಳೆಯರು ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾಗುತ್ತಿರುವ ಸಂಗತಿಯ ಬಗ್ಗೆ ರಾಹುಲ್‌ಗಾಂಧಿ ಭಾಷಣ ಮಾಡಿದಾಗ ಅದೇ ಭಾಷಣವನ್ನು ಟೀಕಿಸಿದ ಮಹಿಳಾ ಸಂಸದರು ‘ಫ್ಲೈಯಿಂಗ್ ಕಿಸ್’ನ್ನು ಮುಂದೊಡ್ಡಿ ಸಂಸತ್‌ನ್ನು ದಿಕ್ಕು ತಪ್ಪಿಸಲು ಹೊರಟಿರುವುದು ದೇಶದ ಮಹಿಳೆಯರಿಗೆ ಮಾಡಿದ ಅವಮಾನವಲ್ಲವೆ? ಮಣಿಪುರದಲ್ಲಿ ಭಾರತ ಮಾತೆಯ ಕಗ್ಗೊಲೆ ನಡೆದಿದೆ ಎಂದು ರಾಹುಲ್‌ಗಾಂಧಿ ಹೇಳಿರುವುದರಿಂದ ದೇಶಕ್ಕೆ ಅವಮಾನವಾಗಿದೆ ಎಂದು ಸ್ಮತಿ ಇರಾನಿಯಂತಹ ಮಹಿಳೆಯರು ಭಾವಿಸುತ್ತಿದ್ದಾರೆ. ಆ ಮೂಲಕ ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರಗಳೆಲ್ಲ ಭಾರತ ದೇಶದ ಹೆಗ್ಗಳಿಕೆಯೆಂದು ಸಾಬೀತು ಮಾಡಲು ಇವರು ಹೊರಟಿದ್ದಾರೆಯೇ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News