ಮರಳಿ ಮಾತೃಧರ್ಮಕ್ಕೆ: ಶೆಟ್ಟರ್ ನಿರೀಕ್ಷಿತ ನಿರ್ಧಾರ

Update: 2024-01-26 05:09 GMT

Photo: twitter.com/BJP4Karnataka

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಾಜಿ ಬಿಜೆಪಿ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಮತ್ತೆ ಹಾಲಿ ಬಿಜೆಪಿ ನಾಯಕರಾಗಿ ಬದಲಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆರೆಸ್ಸೆಸ್‌ನ ಕೆಲವು ಮುಖಂಡರ ಮೇಲೆ ಮುನಿಸಿಕೊಂಡು, ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಮುನಿಸು ತಣ್ಣಗಾಗುತ್ತಿದ್ದಂತೆಯೇ ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಯಾವುದೇ ಸೈದ್ಧಾಂತಿಕ ಬದ್ಧತೆಯಿಲ್ಲದ, ತಕ್ಷಣದ ರಾಜಕೀಯ ಕಾರಣಗಳಿಗಾಗಿ ನಡೆಯುವ ಪಕ್ಷಾಂತರಗಳ ಅಂತ್ಯ ಹೇಗಿರುತ್ತದೆ ಎನ್ನುವುದಕ್ಕೆ ಶೆಟ್ಟರ್ ಇನ್ನೊಂದು ಉದಾಹರಣೆ. ಶೆಟ್ಟರ್ ಅವರ ಈ ಅನಿರೀಕ್ಷಿತ ನಿರ್ಧಾರವನ್ನು ಟೀಕಿಸುವ ಯಾವ ನೈತಿಕತೆಯೂ ಕಾಂಗ್ರೆಸ್‌ಗೆ ಇಲ್ಲ. ಯಾಕೆಂದರೆ, ಕಾಂಗ್ರೆಸ್ ಸೇರ್ಪಡೆಯ ಸಂದರ್ಭದಲ್ಲಿ ‘ತಾನು ಯಾಕೆ ಕಾಂಗ್ರೆಸ್ ಸೇರುತ್ತಿದ್ದೇನೆ’ ಎನ್ನುವುದನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದರು. ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸಂಭ್ರಮದಿಂದ ‘‘ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಇದು ಸಂತೋಷ ತರುವ ವಿಚಾರ’’ ಎಂದು ಹೇಳಿಕೆ ನೀಡಿದ್ದರು. ಆದರೆ ಕಾಂಗ್ರೆಸ್‌ನ ತತ್ವ ಸಿದ್ಧಾಂತಕ್ಕೆ ಮನಸೋತು ಸೇರಿದ್ದೇನೆ ಅಥವಾ ಬಿಜೆಪಿಯ ಕೋಮುವಾದಿ ನಿಲುವುಗಳನ್ನು ವಿರೋಧಿಸಿ ಪಕ್ಷ ತೊರೆದಿದ್ದೇನೆ ಎನ್ನುವ ಹೇಳಿಕೆಯನ್ನು ಶೆಟ್ಟರ್ ಅವರು ಯಾವತ್ತೂ ನೀಡಿರಲಿಲ್ಲ. ಕಾಂಗ್ರೆಸ್ ಸೇರಿದ ಬಳಿಕ ತಪ್ಪಿಯೂ ಅವರು ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ಟೀಕೆ ಮಾಡಿಲ್ಲ. ಪಕ್ಷ ತೊರೆಯುವ ಸಂದರ್ಭದಲ್ಲಿ ‘‘ಬಿಜೆಪಿ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆ. ಕೆಲವು ವ್ಯಕ್ತಿಗಳು ನನ್ನ ವಿರುದ್ಧ ಸಂಚು ನಡೆಸಿದ್ದಾರೆ. ಆ ಕಾರಣಕ್ಕಾಗಿ ನಾನು ಕಾಂಗ್ರೆಸ್ ಸೇರಿದ್ದೇನೆ’’ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಬಹುಶಃ ಇದೀಗ ಬಿಜೆಪಿ ಆ ವ್ಯಕ್ತಿಗಳ ನಿಯಂತ್ರಣದಿಂದ ಮುಕ್ತವಾಗಿದೆ ಎಂದು ಅವರಿಗೆ ಅನ್ನಿಸಿರಬೇಕು. ಆದುದರಿಂದಲೇ, ಅವರು ಮತ್ತೆ ಬಿಜೆಪಿಯೆಡೆಗೆ ಹೊರಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಆರೆಸ್ಸೆಸ್ ಸಂಘಟನೆಯು ನೇರ ಹಸ್ತಕ್ಷೇಪ ನಡೆಸಿತ್ತು. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ವಯಸ್ಸಾಗಿರುವ ನೆಪದಲ್ಲಿ ಬದಿಗೊತ್ತಿ, ಅವರ ಜಾಗಕ್ಕೆ ಆರೆಸ್ಸೆಸ್‌ನ ಹೊಸ ಮುಖಗಳನ್ನು ತಂದು ನಿಲ್ಲಿಸುವ ಪ್ರಯತ್ನವೊಂದು ನಡೆದಿತ್ತು. ಯಡಿಯೂರಪ್ಪ, ಶೆಟ್ಟರ್ ಮೊದಲಾದವರ ಕೈಯಿಂದ ಪಕ್ಷದ ಚುಕ್ಕಾಣಿಯನ್ನು ಕಿತ್ತು ಸಂತೋಷ್ ಕೈಗೆ ನೀಡುವ ಯೋಜನೆ ನಡೆದಿತ್ತು. ಮೋದಿ, ಅಮಿತ್ ಶಾ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಗೆಲ್ಲುವ ಕನಸನ್ನು ಕಂಡಿದ್ದರು. ಈ ಸಂದರ್ಭದಲ್ಲಿ ಟಿಕೆಟ್ ಕೈತಪ್ಪಿದ ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರಿದರು. ಹಾಗೆ ಸೇರಿದವರಲ್ಲಿ ಶೆಟ್ಟರ್ ಕೂಡ ಒಬ್ಬರು. ಸೇರ್ಪಡೆಗೊಂಡ ಬಳಿಕ ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತದ ಕುರಿತಂತೆ ಒಂದೇ ಒಂದು ಗೌರವಯುತವಾದ ಮಾತುಗಳನ್ನು ಆಡಿರಲಿಲ್ಲ. ಇದೇ ಸಂದರ್ಭದಲ್ಲಿ ‘‘ಆರೆಸ್ಸೆಸ್ ಹಿನ್ನೆಲೆಯಿಂದ ಬಂದವನು ನಾನು ಎನ್ನುವುದರ ಬಗ್ಗೆ ನನಗೆ ಹೆಮ್ಮೆಯಿದೆ’’ ಎಂಬ ಹೇಳಿಕೆಯನ್ನು ಅವರು ನೀಡಿದ್ದರು. ಬಿಜೆಪಿ ತೊರೆದರೂ ನಾನು ಆರೆಸ್ಸೆಸ್ ಸಿದ್ಧಾಂತವನ್ನು ತೊರೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಂದರೆ ಶೆಟ್ಟರ್ ಕೊನೆಯವರೆಗೂ ಅವರ ಸಿದ್ಧಾಂತದಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಂಡಿರಲಿಲ್ಲ. ತಕ್ಷಣದ ಕಾರಣಕ್ಕಾಗಿ ಪಕ್ಷವನ್ನಷ್ಟೇ ಬದಲಾಯಿಸಿದ್ದರು.

ಆರೆಸ್ಸೆಸ್‌ನೊಳಗೆ ಲಿಂಗಾಯತ ಮತ್ತು ಬ್ರಾಹ್ಮಣ್ಯ ಲಾಬಿಗಳ ನಡುವೆ ತಿಕ್ಕಾಟ ಮುಂದುವರಿದಿದೆ. ಕಳೆದ ವಿಧಾನಸಭೆಯಲ್ಲಿ ಈ ತಿಕ್ಕಾಟ ಅತಿರೇಕಕ್ಕೆ ಹೋಯಿತಾದರೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲು ಅಂತಿಮವಾಗಿ ಆರೆಸ್ಸೆಸ್‌ನೊಳಗಿರುವ ಬ್ರಾಹ್ಮಣ್ಯದ ಸೋಲಾಗಿ ಗುರುತಿಸಲ್ಪಟ್ಟಿತು. ಇದರ ಪರಿಣಾಮವಾಗಿಯೇ ಯಡಿಯೂರಪ್ಪ ಬಿಜೆಪಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದರು. ಲಿಂಗಾಯತ ಲಾಬಿಯನ್ನು ಎದುರು ಹಾಕಿಕೊಂಡು ರಾಜ್ಯದಲ್ಲಿ ಬಿಜೆಪಿ ತಲೆಯೆತ್ತಿ ನಿಲ್ಲುವುದು ಕಷ್ಟ ಎನ್ನುವುದು ಬಿಜೆಪಿ ವರಿಷ್ಠರಿಗೆ ಗೊತ್ತಾಗಿ ಹೋಯಿತು. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಪುತ್ರನಿಗೆ ನೀಡಲಾಯಿತು. ತನ್ನನ್ನು ಪಕ್ಷ ತೊರೆಯುವಂತೆ ಮಾಡಿರುವುದು ಆರೆಸ್ಸೆಸ್‌ನ ಬ್ರಾಹ್ಮಣ್ಯ ಸಿದ್ಧಾಂತ ಎನ್ನುವುದನ್ನು ಒಪ್ಪಿಕೊಳ್ಳಲು ಶೆಟ್ಟರ್ ಸಿದ್ಧರಿರಲಿಲ್ಲ. ಆರೆಸ್ಸೆಸ್‌ನೊಳಗಿರುವ ಕೆಲವು ವ್ಯಕ್ತಿಗಳ ಬಗ್ಗೆ ಮಾತ್ರ ಅವರ ತಕರಾರಿತ್ತು. ವಿಧಾನಸಭಾ ಚುನಾವಣೆಯ ಬಿಜೆಪಿಯ ಸೋಲು ಆ ವ್ಯಕ್ತಿಗಳಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದು ಶೆಟ್ಟರ್ ನಂಬಿದ್ದಾರೆ. ಎದೆಯಲ್ಲಿ ಆರೆಸ್ಸೆಸ್ ಸಿದ್ಧಾಂತಗಳನ್ನಿಟ್ಟುಕೊಂಡು ಬಿಜೆಪಿಯೊಳಗಿರುವ ಕೆಲವು ವ್ಯಕ್ತಿಗಳ ಮೇಲಿನ ಅಸಮಾಧಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಮುಂದುವರಿಯುವುದು ಆತ್ಮವಂಚನೆ ಎಂದು ಅವರಿಗೆ ಮನವರಿಕೆಯಾಗಿರಬೇಕು. ಈ ಕಾರಣದಿಂದ ಅವರು ಮತ್ತೆ ಬಿಜೆಪಿ ಸೇರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸುವ, ಟೀಕಿಸುವ ಯಾವ ನೈತಿಕ ಹಕ್ಕು ಕಾಂಗ್ರೆಸಿಗರಿಗಿಲ್ಲ.

ಹಾಗೆ ನೋಡಿದರೆ ಶೆಟ್ಟರ್ ಅವರ ಈ ರಾಜಕೀಯ ವಲಸೆಯಿಂದ ಅವರಿಗೆ ವಿಶೇಷ ಲಾಭವೇನೂ ಆಗಿಲ್ಲ. ಬಿಜೆಪಿಯೊಳಗಿರುವ ಕೆಲವು ನಾಯಕರ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದರೂ, ಅವರು ಹೀನಾಯವಾಗಿ ಸೋತರು. ಶೆಟ್ಟರ್, ಸವದಿ ಸೇರ್ಪಡೆ ಒಟ್ಟಾಗಿ ಕಾಂಗ್ರೆಸ್ ಗೆಲುವಿನಲ್ಲಿ ಪರಿಣಾಮ ಬೀರಿದೆಯಾದರೂ, ವೈಯಕ್ತಿಕ ಸೋಲು ಶೆಟ್ಟರ್‌ಗೆ ಕಾಂಗ್ರೆಸ್‌ನಲ್ಲೂ ಹಿನ್ನಡೆಯನ್ನೇ ಉಂಟು ಮಾಡಿತು. ಬಿಜೆಪಿಯೊಳಗಿನ ಕೆಲವು ಶಕ್ತಿಗಳು ಕಾಂಗ್ರೆಸ್ ಅಭ್ಯರ್ಥಿ ಶೆಟ್ಟರ್ ಅವರನ್ನು ಸೋಲಿಸಲು ಭಾರೀ ಪ್ರಯತ್ನವನ್ನು ನಡೆಸಿ ಯಶಸ್ವಿಯಾದವು. ಇಷ್ಟಾದರೂ ಶೆಟ್ಟರ್ ಅವರಿಗೆ ವಿಧಾನಪರಿಷತ್ ಸ್ಥಾನವನ್ನು ಸಮಾಧಾನಕರ ಬಹುಮಾನವಾಗಿ ಕಾಂಗ್ರೆಸ್ ನೀಡಿತು. ಆದರೆ ಶೆಟ್ಟರ್ ಇದರಿಂದ ಸಮಾಧಾನ ಹೊಂದಿದಂತೆ ಇಲ್ಲ. ಇದೀಗ ಮರಳಿ ಬಿಜೆಪಿಗೆ ಸೇರ್ಪಡೆಯಾದರೂ ಅದರಿಂದ ಶೆಟ್ಟರ್ ರಾಜಕೀಯ ಬದುಕಿಗೆ ವಿಶೇಷ ಪ್ರಯೋಜನವಾಗದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡುವ ಭರವಸೆ ನೀಡಲಾಗಿದೆ ಎನ್ನಲಾಗುತ್ತಿದೆಯಾದರೂ, ಟಿಕೆಟ್ ನೀಡಿದರೂ, ಅದೇ ಬಿಜೆಪಿಯೊಳಗೆ ಅವರನ್ನು ಸೋಲಿಸಲು ಇನ್ನೊಂದು ಗುಂಪು ಸಿದ್ಧವಾಗಿ ನಿಂತಿದೆ. ಯಡಿಯೂರಪ್ಪ ಬಣಕ್ಕೆ ಶೆಟ್ಟರ್ ಮರಳಿ ಸೇರ್ಪಡೆಯಾಗಿರುವುದು ಸಂತಸ ತಂದಿಲ್ಲ. ಆರೆಸ್ಸೆಸ್ ಮುಖಂಡರು ತೋರಿಕೆಗಷ್ಟೇ ಶೆಟ್ಟರ್ ಮೇಲೆ ಪ್ರೀತಿ ಸುರಿಸುತ್ತಿದ್ದಾರೆ. ಶೆಟ್ಟರ್‌ರನ್ನು ಮುಂದಿಟ್ಟು ಯಡಿಯೂರಪ್ಪ ಗುಂಪನ್ನು ದುರ್ಬಲಗೊಳಿಸುವುದಷ್ಟೇ ಆರೆಸ್ಸೆಸ್‌ನ ಕಾರ್ಯತಂತ್ರ. ದೇಶಾದ್ಯಂತ ಬಿಜೆಪಿ ರಾಮಮಂದಿರ ಕೊಯ್ಲಿನ ಸಂಭ್ರಮದಲ್ಲಿರುವಾಗ, ಶೆಟ್ಟರ್‌ಗೆ ಕಾಂಗ್ರೆಸ್‌ನಲ್ಲಿ ಏಕಾಂಗಿತನ ಕಾಡುವುದು ಸಹಜ. ಅವರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಮರಳಿ ಬಿಜೆಪಿ ಮಾತೃಧರ್ಮಕ್ಕೆ ಮತಾಂತರವಾಗುವ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿದ್ದವರನ್ನೂ ಕೊಂಡೊಯ್ಯಲಿಲ್ಲವಲ್ಲ ಎಂದು ಕಾಂಗ್ರೆಸ್ ಮುಖಂಡರು ಸಮಾಧಾನ ಪಡಬೇಕು. ಆರೆಸ್ಸೆಸ್ ಸಿದ್ಧಾಂತವನ್ನು ಕೈ ಬಿಡದೆ ಕಾಂಗ್ರೆಸ್ ಸೇರ್ಪಡೆಯಾಗುವ ಬಿಜೆಪಿ ನಾಯಕರು ಒಂದಲ್ಲ ಒಂದು ದಿನ ಕಾಂಗ್ರೆಸ್‌ಗೆ ಮುಳುವಾಗಲಿದ್ದಾರೆ. ಈ ನಿಟ್ಟಿನಲ್ಲಿ, ಬಿಜೆಪಿಯ ಅತೃಪ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಮುನ್ನ ಕಾಂಗ್ರೆಸ್ ಹಲವು ಬಾರಿ ಯೋಚಿಸಬೇಕು. ಹೊಸ ನೀರು ಬಂದು ಹಳೇ ನೀರನ್ನೂ ಕೊಚ್ಚಿಕೊಂಡು ಹೋಯಿತು ಎನ್ನುವ ಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News