ಚಂಡೀಗಡ ಮೇಯರ್ ಚುನಾವಣೆ : ಹೊಲ ಮೇಯ್ದು ಸಿಕ್ಕಿ ಬಿದ್ದ ಬೇಲಿ

Update: 2024-02-08 03:47 GMT

ಚಂಡೀಗಡ ಮೇಯರ್ ಚುನಾವಣೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಬೇಲಿಯೇ ಇಲ್ಲಿ ಹೊಲ ಮೇಯ್ದಿದೆ ಎಂದು ಅಲ್ಲಿನ ಆಪ್ ಮತ್ತು ಕಾಂಗ್ರೆಸ್ ಆರೋಪಿಸಿದೆ. ಮೇಯರ್ ಸ್ಪರ್ಧೆಯಲ್ಲಿ ಎಲ್ಲ ರೀತಿಯಲ್ಲೂ ಕಾಂಗ್ರೆಸ್-ಆಪ್ ನೇತೃತ್ವದ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿತ್ತು. ಬಿಜೆಪಿ ೧೩ ಸದಸ್ಯರನ್ನು ಹೊಂದಿದ್ದರೆ, ಆಪ್-ಕಾಂಗ್ರೆಸ್ ಒಟ್ಟು ೨೦ ಸದಸ್ಯ ಬಲವನ್ನು ಹೊಂದಿತ್ತು. ಆದರೆ ಚುನಾವಣಾಧಿಕಾರಿ ಅನಿಲ್ ಮಸೀಹ್ ಅವರ ಅಕ್ರಮದಿಂದಾಗಿ ಬಿಜೆಪಿಯ ಅಭ್ಯರ್ಥಿ ಆಯ್ಕೆಯಾಗುವಂತಾಗಿದೆ ಎಂದು ಆಪ್ ಹೇಳುತ್ತಿದೆ. ಮತದಾನದ ಹಕ್ಕು ಹೊಂದಿರದ, ನಾಮನಿರ್ದೇಶಿತ ಕೌನ್ಸಿಲರ್ ಕೂಡ ಆಗಿರುವ ಚುನಾವಣಾಧಿಕಾರಿ ಅನಿಲ್ ಮಸೀಹ್ ಅವರು ೩೬ ಮತಗಳಲ್ಲಿ ೮ ಮತಗಳನ್ನು ಅಸಿಂಧು ಎಂದು ಘೋಷಿಸಿದ ಪರಿಣಾಮವಾಗಿ ಬಿಜೆಪಿಯ ಅಭ್ಯರ್ಥಿಯನ್ನು ಮೇಯರ್ ಆಗಿ ಘೋಷಿಸಲಾಯಿತು. ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ೧೬ ಮತಗಳನ್ನು ಪಡೆದಿದ್ದರು. ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದ ಕಾರಣದಿಂದ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಸಿಂಗ್ ೧೨ ಮತಗಳನ್ನಷ್ಟೇ ಪಡೆದುಕೊಂಡರು. ಸಾಧಾರಣವಾಗಿ ಈವರೆಗೆ ಇವಿಎಂಗಳನ್ನು ತಿರುಚಲಾಗುತ್ತಿದೆ ಎನ್ನುವ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಿದ್ದವು. ಆದರೆ ಇಲ್ಲಿ ಮತ ಪತ್ರಗಳನ್ನೇ ತಿರುಚಲಾಗಿದೆ. ಮತ್ತು ಚುನಾವಣಾಧಿಕಾರಿಯೇ ಅದರ ನೇತೃತ್ವವನ್ನು ವಹಿಸಿಕೊಂಡಿರುವುದು ವಿಪರ್ಯಾಸವಾಗಿದೆ.

ಹಾಡಹಗಲೇ ನಡೆದಿರುವ ಈ ಅಕ್ರಮಕ್ಕೆ ಸ್ವತಃ ಸುಪ್ರೀಂಕೋರ್ಟ್ ಬೆಚ್ಚಿ ಬಿದ್ದಿದೆ. ‘ಇದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಸುಪ್ರೀಂಕೋರ್ಟ್ ಬಣ್ಣಿಸಿದೆ. ‘‘ಚುನಾವಣಾಧಿಕಾರಿಯೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವುದನ್ನು ನೋಡಿ ನಾವು ದಿಗ್ಭ್ರಮೆಗೊಂಡಿದ್ದೇವೆ. ಚುನಾವಣಾಧಿಕಾರಿ ಚುನಾವಣೆ ನಡೆಸುವ ರೀತಿಯೇ ಇದು? ನಾವು ಪ್ರಜಾಪ್ರಭುತ್ವವನ್ನು ಈ ರೀತಿ ಕೊಲೆ ಮಾಡಲು ಬಿಡುವುದಿಲ್ಲ. ಮತ ಪತ್ರದ ಕೆಳ ಭಾಗದಲ್ಲಿ ಚಿಹ್ನೆಯನ್ನು ಕಂಡ ಕೂಡಲೆ ಚುನಾವಣಾಧಿಕಾರಿ ಅದನ್ನು ವಿರೂಪಗೊಳಿಸಿದ್ದಾರೆ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ಸಂಬಂಧ ಆಪ್ ವೀಡಿಯೋ ತುಣುಕನ್ನೂ ಬಹಿರಂಗಪಡಿಸಿದೆ. ಸಾಧಾರಣವಾಗಿ ಮೇಯರ್ ಚುನಾವಣೆಯ ಫಲಿತಾಂಶ ಚುನಾವಣೆಗೆ ಮುನ್ನವೇ ಘೋಷಣೆಯಾಗಿರುತ್ತದೆ. ಯಾವ ಯಾವ ಪಕ್ಷಗಳ ಸ್ಥಾನಗಳು ಎಷ್ಟಿವೆ ಎನ್ನುವುದು ಮೊದಲೇ ಗೊತ್ತಿರುವುದರಿಂದ ಯಾವ ಪಕ್ಷ ಗೆಲ್ಲಬಹುದು ಎನ್ನುವುದನ್ನು ಊಹಿಸುವುದಕ್ಕೆ ಸಾಧ್ಯವಿದೆ. ಕೆಲವೊಮ್ಮೆ ರಾಜಕೀಯ ಪಕ್ಷಗಳು ಸದಸ್ಯರನ್ನು ಕೊಂಡು ಕೊಂಡು ಫಲಿತಾಂಶವನ್ನು ಏರುಪೇರು ಮಾಡುವುದಿದೆ. ಆದರೆ ಇಲ್ಲಿ ಅಂತಹದೇನೂ ಆಗಿಲ್ಲ. ಬದಲಿಗೆ ಎಂಟು ಸದಸ್ಯರ ಮತಗಳನ್ನೇ ಚುನಾವಣಾ ಆಯೋಗ ಅಸಿಂಧುಗೊಳಿಸಿದೆ. ಎಲ್ಲರೂ ಗಮನಿಸುತ್ತಿದ್ದಾರೆ ಎನ್ನುವ ಅರಿವಿದ್ದು ಚುನಾವಣಾಧಿಕಾರಿ ಮತಗಳನ್ನು ತಿರುಚುವ ಧೈರ್ಯ ಮಾಡಿದ್ದಾರೆೆ ಎಂದರೆ, ಚುನಾವಣಾ ಆಯೋಗ ಆಡಳಿತ ಪಕ್ಷದ ಜೊತೆಗೆ ಶಾಮೀಲಾಗಿ ಯಾವ ಮಟ್ಟಕ್ಕೂ ಇಳಿಯುವುದಕ್ಕೆ ಸಿದ್ಧಎನ್ನುವುದು ಸಾಬೀತಾಗಿದೆ.

ಒಂದು ಕಾಲವಿತ್ತು. ತನ್ನ ಹಣ, ಜನಬಲವನ್ನು ಬಳಸಿ ರಾಜಕೀಯ ನಾಯಕರು ಚುನಾವಣೆಗಳಲ್ಲಿ ಅಕ್ರಮಗಳನ್ನು ಎಸಗುತ್ತಿದ್ದರು. ಚುನಾವಣಾ ಆಯೋಗದ ದೌರ್ಬಲ್ಯಗಳನ್ನು ಪಕ್ಷಗಳು ಬಳಸಿಕೊಳ್ಳುತ್ತಿದ್ದವು. ಆದರೆ ಚುನಾವಣಾಧಿಕಾರಿಗಳು ಹೀಗೆ ಬಹಿರಂಗವಾಗಿ ಚುನಾವಣೆಯ ಅಕ್ರಮಗಳಲ್ಲಿ ಪಾಲುಗೊಂಡ ಉದಾಹರಣೆಗಳಿಲ್ಲ. ಚುನಾವಣಾ ಅಕ್ರಮಗಳಿಗಾಗಿಯೇ ರಾಜಕೀಯ ಪಕ್ಷಗಳಲ್ಲಿ ಕಾರ್ಯಕರ್ತರ ವೇಷದಲ್ಲಿರುವ ಗೂಂಡಾಗಳಿದ್ದರು. ಮತಪೆಟ್ಟಿಗೆಗಳನ್ನು ಅಪಹರಿಸಲು, ಅಕ್ರಮವಾಗಿ ಮತ ಚಲಾವಣೆ ಮಾಡಲು ಅವರನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿದ್ದವು. ಆದರೆ ಇಂದು ಅವರ ಬದಲಿಗೆ ಚುನಾವಣಾ ಅಧಿಕಾರಿಗಳನ್ನೇ ಸರಕಾರ ಬಳಸಿಕೊಳ್ಳುತ್ತಿರುವುದು ದೇಶದ ಚುನಾವಣಾ ವ್ಯವಸ್ಥೆ ತಲುಪಿರುವ ಪಾತಾಳದ ಆಳವನ್ನು ತೋರಿಸುತ್ತಿದೆ. ಪ್ರಜಾಸತ್ತೆಯನ್ನು ಬುಡಮೇಲು ಮಾಡಲು ಚುನಾವಣಾ ಆಯೋಗವೇ ನೇತೃತ್ವವನ್ನು ವಹಿಸುತ್ತಿರುವುದರ ಬಗ್ಗೆ ಸ್ವತಃ ಸುಪ್ರೀಂಕೋರ್ಟ್ ಆಘಾತ ವ್ಯಕ್ತಪಡಿಸುವ ಮಟ್ಟಿಗೆ ಇದು ತಲುಪಿದೆ. ಆರಂಭದಲ್ಲಿ ಈ ಅಕ್ರಮಗಳು ಗುಟ್ಟು ಗುಟ್ಟಾಗಿ ನಡೆಯುತ್ತಿದ್ದರೆ, ಇದೀಗ ಸಿಸಿ ಕ್ಯಾಮರಾದ ಮುಂದೆಯೇ ಧೈರ್ಯದಿಂದ ಮತಪತ್ರಗಳನ್ನು ತಿದ್ದುವ ವಿರೂಪ ಗೊಳಿಸುವ ಹಂತಕ್ಕೆ ತಲುಪಿದೆ. ಮೇಯರ್ ಚುನಾವಣೆಯ ಸ್ಥಿತಿಯೇ ಹೀಗಾದರೆ, ಉಳಿದ ಸಾರ್ವತ್ರಿಕ ಚುನಾವಣೆಯ ಸ್ಥಿತಿ ಹೇಗಿರಬಹುದು? ಎಂದು ಜನರು ಪ್ರಶ್ನಿಸುವಂತಾಗಿದೆ.

ಒಂದೆಡೆ ಇವಿಎಂ ತಿರುಚುವಿಕೆಯ ಬಗ್ಗೆ ಜನರು ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರಾದರೂ, ಚುನಾವಣಾ ಆಯೋಗ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇವಿಎಂ ತಿರುಚುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾ, ವಿರೋಧ ಪಕ್ಷಗಳ ಬೇಡಿಕೆಗಳನ್ನು ಕಸದ ಬುಟ್ಟಿಗೆ ಹಾಕುತಿದೆ. ಇನ್ನೊಂದೆಡೆ ಸ್ವತಃ ಆಯೋಗದ ಅಧಿಕಾರಿಗಳೇ ಮತಗಳನ್ನು ತಿರುಚುವ ಮೂಲಕ ಸುಪ್ರೀಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಚುನಾವಣಾ ಆಯೋಗ, ಇವಿಎಂ ಬಗ್ಗೆ ನೀಡುತ್ತಿರುವ ಸಮರ್ಥನೆಗಳನ್ನು ಪಕ್ಷಗಳು ಯಾಕೆ ನಂಬಬೇಕು? ಒಂದು ಮೇಯರ್ ಚುನಾವಣೆಯನ್ನೇ ಸಮರ್ಥವಾಗಿ ನಡೆಸುವುದಕ್ಕೆ ಯೋಗ್ಯತೆಯಿಲ್ಲದ ಚುನಾವಣಾ ಆಯೋಗ, ವಿಧಾನಸಭಾ, ಲೋಕಸಭಾ ಚುನಾವಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತದೆಯೆಂದು ನಂಬುವುದಾದರೂ ಹೇಗೆ? ಪ್ರಜಾಸತ್ತಾತ್ಮಕವಾಗಿ ಪಕ್ಷಗಳು ಗೆದ್ದು ಸರಕಾರ ರಚನೆ ಮಾಡಿದ ಬಳಿಕವೂ ಅವುಗಳನ್ನು ಆಪರೇಷನ್ ಮೂಲಕ ಉರುಳಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಚುನಾವಣಾ ಆಯೋಗ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿದೆ. ಚುನಾವಣಾ ಆಯೋಗ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಿದ್ದರೆ ಇಂದು ವಿವಿಧ ರಾಜ್ಯಗಳಲ್ಲಿ ಕುದುರೆ ವ್ಯಾಪಾರದ ಮೂಲಕ ಸರಕಾರವನ್ನು ಹಾಡಹಗಲೇ ಉರುಳಿಸುವ ಧೈರ್ಯ ಪಕ್ಷಗಳಿಗೆ ಬರುತ್ತಿರಲಿಲ್ಲವೇನೋ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಕೆಟ್ಟ ರಾಜಕೀಯ ಬೆಳವಣಿಗೆಗಳಿಗೆ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿರುವುದು ಚುನಾವಣಾ ಆಯೋಗ. ಸರಕಾರವನ್ನು ಉರುಳಿಸುವುದಕ್ಕಾಗಿ ಪಕ್ಷಗಳನ್ನು ಒಡೆಯುವ ಸುಪಾರಿಯನ್ನು ಚುನಾವಣಾ ಆಯೋಗವೇ ನೇರವಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಶಿವಸೇನೆಯು ಆಯೋಗವನ್ನು ‘ಮೋದಿ-ಅಮಿತ್ ಶಾ ನೇತೃತ್ವದ ಆಯೋಗ’ ಎಂದು ಕರೆದಿದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬಣ ನಿಜವಾದ ಎನ್ಸಿಪಿ ಎಂದು ಪರಿಗಣಿಸುವ ನಿರ್ಧಾರದ ಮೂಲಕ ಚುನಾವಣಾ ಆಯೋಗ ಪ್ರಜಾಪ್ರಭುತ್ವಕ್ಕೆ ಹಿಂದಿನಿಂದ ಇರಿದಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಅವರು ಆರೋಪಿಸಿದ್ದಾರೆ. ಆಯೋಗ ತೆಗೆದುಕೊಳ್ಳುತ್ತಿರುವ ಎಲ್ಲ ನಿರ್ಧಾರಗಳನ್ನು ಸುಪ್ರೀಂಕೋರ್ಟ್ ಮೂಲಕ ಪ್ರಶ್ನಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಸತ್ತೆಯನ್ನು ಉಳಿಸಲು ಚುನಾವಣಾ ಆಯೋಗದ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಸಂಘಟಿತವಾಗಬೇಕಾಗಿದೆ. ಈಗಾಗಲೇ ಈ.ಡಿ.ಯಂತಹ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಕಣ್ಣಿಡುವುದಕ್ಕೆ ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಕಣ್ಣಿಡುವುದಕ್ಕಾಗಿಯೂ ಇದೀಗ ಸ್ವತಂತ್ರ ವ್ಯವಸ್ಥೆಯೊಂದರ ಅಗತ್ಯವನ್ನು ಚಂಡಿಗಡ ಮೇಯರ್ ಚುನಾವಣೆಯ ಅಕ್ರಮ ಎತ್ತಿ ಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News