ಅತಿವೃಷ್ಟಿ ಅನಾಹುತ ಮತ್ತು ಅಭಿವೃದ್ಧಿಯ ಮಾನದಂಡ

Update: 2023-07-26 05:14 GMT

ಸಾಂರ್ಭಿಕ ಚಿತ್ರ Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಐದು ದಿನಗಳಿಂದ ಕರ್ನಾಟಕದಲ್ಲಿ ಬೀಳುತ್ತಿರುವ ಮುಂಗಾರು ಮಳೆಯಿಂದ ಬಹುತೇಕ ಜಲಾಶಯಗಳು ತುಂಬಿವೆ. ಅನೇಕ ಕಡೆ ರಸ್ತೆ, ಸೇತುವೆಗಳು ನೀರಿನಲ್ಲಿ ಮುಳುಗಿವೆ. ಮನೆಗಳು ನೆಲಸಮಗೊಂಡಿವೆ. ನಾಲ್ವರು ಅಸುನೀಗಿದ್ದಾರೆ. ಒಬ್ಬರು ಜಲಪಾತದಲ್ಲಿ ಕೊಚ್ಚಿ ಹೋಗಿದ್ದಾರೆ.

ಕೊಡಗು, ಕರಾವಳಿ ಮಾತ್ರವಲ್ಲ ಉತ್ತರ ಕರ್ನಾಟಕದ ಅನೇಕ ಕಡೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರು, ಹಾಸನ ಮುಂತಾದ ಕಡೆ ಭೂ ಕುಸಿತದ ಭೀತಿ ಉಂಟಾಗಿದೆ. ಒಂದೆಡೆ ಅತಿವೃಷ್ಟಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದರೆ ಇನ್ನೊಂದು ಕಡೆ ಮಧ್ಯ ಕರ್ನಾಟಕದ ಕೆಲವು ತಾಲೂಕುಗಳು ಸೇರಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದೆ. ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಕಳೆದ ವಾರ ಬಿಡುಗಡೆ ಮಾಡಿದ ವರದಿಯಂತೆ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತೆ ಕಡಿಮೆಯಾಗಿದೆ. 101 ತಾಲೂಕುಗಳಲ್ಲಿ ಮಳೆ ಬೀಳದೆ ಕುಡಿಯುವ ನೀರಿಗೂ ಕೊರತೆ ಕಾಣಿಸಿಕೊಂಡಿದೆ. ಕೊಳವೆ ಬಾವಿಗಳು ಬರಿದಾಗಿವೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಎದುರಾಗಿದೆ.

ಕರ್ನಾಟಕದಲ್ಲಿ ಈ ಪರಿಸ್ಥಿತಿ ಉಂಟಾಗಿದ್ದರೆ ಉತ್ತರ ಭಾರತದಲ್ಲಿ ವರ್ಷಧಾರೆಯಿಂದ ಏಳು ರಾಜ್ಯಗಳ ಜನರು ತತ್ತರಿಸಿ ಹೋಗಿದ್ದಾರೆ. ಜಲಪ್ರಳಯದಿಂದ ಮನೆ, ಸೇತುವೆ, ರಸ್ತೆ, ವಿದ್ಯುತ್ ಗೋಪುರ ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ಮತ್ತು ರಾಜಸ್ಥಾನ ಎಲ್ಲೆಡೆ ಮೇಘಸ್ಫೋಟದಿಂದ ಐವತ್ತಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಕುಲು ಮನಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಹುದೊಡ್ಡ ಭಾಗ ಕುಸಿದು ಅನೇಕ ಪ್ರವಾಸಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಉತ್ತರಾಖಂಡದಲ್ಲಿ ಬದರಿನಾಥದ ಹೆದ್ದಾರಿ ಹಾಳಾಗಿ ಹೋಗಿದೆ. ದಿಲ್ಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಮಳೆ ಬೀಳುವುದು ಸೃಷ್ಟಿಯ ನಿಯಮ.ಮಳೆಯಾಗದಿದ್ದರೆ ಜೀವ ಜಗತ್ತು ಬದುಕಿ ಉಳಿಯುವುದು ಕಷ್ಟ. ಹಾಗಾಗಿ ಮಳೆಯನ್ನು ನಾವು ಶಪಿಸಬೇಕಾಗಿಲ್ಲ. ‘ಮಳೆ ಅವಾಂತರ’ ಎಂದು ಮಾಧ್ಯಮಗಳು ಬರೆಯುವುದೂ ಸರಿಯಲ್ಲವೆನಿಸುತ್ತದೆ. ತಪ್ಪು ಮಳೆಯದಲ್ಲ ಮನುಷ್ಯನದು. ತನ್ನ ಸುತ್ತಲಿನ ಪ್ರಕೃತಿಯೊಂದಿಗೆ ಬದುಕುವುದನ್ನು ಮನುಷ್ಯ ಕಲಿಯಲೇ ಇಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಮಾಡಿಕೊಂಡ ಅವಾಂತರಗಳು ಇದಕ್ಕೆಲ್ಲ ಕಾರಣ. ನಾವೆಂದರೆ ಇಡೀ ಜನ ಸಮೂಹವಲ್ಲ ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಯ ಅಭಿವೃದ್ಧಿಯ ಅವಾಂತರಗಳು ಇದಕ್ಕೆ ಕಾರಣ.

ನಮ್ಮ ಅನುಕೂಲಕ್ಕಾಗಿ, ರಸ್ತೆ ಅಗಲೀಕರಣಕ್ಕಾಗಿ, ಕಟ್ಟಡಗಳ ನಿರ್ಮಾಣಕ್ಕಾಗಿ ಗಿಡ ಮರಗಳನ್ನು ಕಡಿಯುುತ್ತೇವೆ. ಗುಡ್ಡ,ಬೆಟ್ಟಗಳನ್ನು ನಾಶ ಮಾಡಿ ಗಣಿಗಾರಿಕೆ ಗೆ ಅವಕಾಶ ಮಾಡಿಕೊಡುವ ಪ್ರಭುತ್ವ ನಮ್ಮಲ್ಲಿ ಇದೆ. ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಮಳೆಯಾದಾಗ ಆದ ಅನಾಹುತ ಎಲ್ಲರಿಗೂ ಗೊತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಮಿತಿ ಮೀರಿ ನಿರ್ಮಾಣಗೊಂಡ ರೆಸಾರ್ಟ್ಗಳು, ಹೋಂ ಸ್ಟೇಗಳು ಅಲ್ಲಿ ಅನಾಹುತಕ್ಕೆ ಕಾರಣವಾದವು. ನಾವು ಮಾಡುವ ತಪ್ಪಿಗೆ ನೈಸರ್ಗಿಕ ಪ್ರಕೋಪ ಎಂದು ದೂರುತ್ತೇವೆ.

ಇತ್ತೀಚಿನ ಎರಡು ದಶಕಗಳಲ್ಲಿ ಅದರಲ್ಲೂ ಮುಖ್ಯವಾಗಿ ಜಗತ್ತು ಮಾರುಕಟ್ಟೆ ಆರ್ಥಿಕತೆಯನ್ನು ಒಪ್ಪಿ, ಅಪ್ಪಿಕೊಂಡ ನಂತರ ಚಂಡ ಮಾರುತ, ಕಾಡ್ಗಿಚ್ಚು, ಹಿಮ ಕುಸಿತ, ಭೂ ಕುಸಿತ, ಅತಿವೃಷ್ಟಿ ಇವು ಜಾಸ್ತಿಯಾಗಿವೆ. ಇವುಗಳಿಗೆಲ್ಲ ಜಾಗತಿಕ ತಾಪಮಾನ ಏರಿಕೆ ಕಾರಣ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ.ಜಾಗತಿಕ ತಾಪಮಾನ ಕಡಿಮೆ ಮಾಡಲು ಜಾಗತಿಕ ಪ್ರಯತ್ನ ನಡೆದಿದೆಯಾದರೂ ಮುಂದುವರಿದ ಬಂಡವಾಳಶಾಹಿ ದೇಶಗಳು ಇದಕ್ಕೆ ಸಹಕರಿಸುತ್ತಿಲ್ಲ. ಅವುಗಳ ಲಾಭಕೋರತನ ಮಿತಿ ಮೀರಿದೆ.

ಮನುಷ್ಯ ನಿಸರ್ಗದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾಗಿದೆ.ಅದನ್ನು ಮಣಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು. ನಾವು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾರ್ಗವನ್ನು ಬದಲಿಸುವ ದಿಕ್ಕಿನಲ್ಲಿ ಚಿಂತಿಸಬೇಕಾಗಿದೆ.ಜಲಮೂಲಗಳನ್ನು ನಾಶ ಮಾಡುವ ಯೋಜನೆಗಳನ್ನು ಕೈ ಬಿಡಬೇಕಾಗಿದೆ.

ನಿತ್ಯ ಹರಿದ್ವರ್ಣದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅಪಾಯಕಾರಿ ಉದ್ಯಮಗಳ ಸ್ಥಾಪನೆಗೆ ಅವಕಾಶ ನೀಡಬಾರದು.

ನಮ್ಮ ಅಭಿವೃದ್ಧಿಯ ಮಾನದಂಡಗಳು ಬದಲಾಗದೆ ಜಲ ಪ್ರಳಯದಂಥ ಸನ್ನಿವೇಶವನ್ನು ಎದುರಿಸಲು ಸಾಧ್ಯವಿಲ್ಲ. ಅಣೆಕಟ್ಟುಗಳ ನಿರ್ಮಾಣ, ಸುರಂಗ ಮತ್ತು ಸೇತುವೆಗಳ ನಿರ್ಮಾಣ ಹಾಗೂ ರಸ್ತೆಗಳ ವಿಸ್ತರಣೆಯ ಸಂದರ್ಭದಲ್ಲಿ ನಮ್ಮ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಸೂತ್ರಗಳನ್ನು ಪರಿಸರ ಸ್ನೇಹಿಯಾಗಿ ಮಾರ್ಪಡಿಸುವುದು ಇಂದಿನ ಅಗತ್ಯವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಅತ್ಯಂತ ಎಚ್ಚರದಿಂದ ಹೆಜ್ಜೆ ಇಡಬೇಕಾಗಿದೆ. ಆಗ ಮಾತ್ರ ಮುಂಗಾರು ಸಂದರ್ಭದಲ್ಲಿ ಜಲ ಪ್ರಳಯದಂಥ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

ನಮ್ಮ ಸರಕಾರಗಳು ಜನಸಾಮಾನ್ಯರನ್ನು ಕೋಮು ಆಧಾರದಲ್ಲಿ ವಿಭಜಿಸಿ ವೋಟಿನ ರಾಜಕಾರಣ ಮಾಡುವ ಬದಲಾಗಿ ಜನೋಪಕಾರಿ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ. ಸರಕಾರದ ತಪ್ಪು ನೀತಿಗಳಿಂದ ಮಣಿಪುರದಂಥ ರಾಜ್ಯಗಳು ಹೊತ್ತಿ ಉರಿಯುತ್ತಿವೆ. ಇನ್ನಾದರೂ ಸರಕಾರ ಅತಿವೃಷ್ಟಿ ಮತ್ತು ಅನಾವೃಷ್ಟಿಯಂಥ ಸಮಸ್ಯೆಗಳನ್ನು ಎದುರಿಸಲು ಪರಿಣಾಮಕಾರಿಯಾದ, ವೈಜ್ಞಾನಿಕ ಮಾರ್ಗವನ್ನು ಕಂಡು ಹಿಡಿಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News