ನಟಿಯರ ಮೇಲೆ ದೌರ್ಜನ್ಯ: ಇತರ ರಾಜ್ಯಗಳಲ್ಲೂ ಸಮಿತಿ ರಚನೆಯಾಗಲಿ

Update: 2024-08-30 05:05 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗಷ್ಟೇ ರಾಷ್ಟ್ರೀಯ ಅತ್ಯುತ್ತಮ ಸಿನೆಮಾ ಪ್ರಶಸ್ತಿಯನ್ನು ಮಲಯಾಳಂನ ‘ಆಟ್ಟಂ’ ತನ್ನದಾಗಿಸಿಕೊಂಡಿತು. ವಿಪರ್ಯಾಸವೆಂದರೆ, ತನಗೆ ಸಿಕ್ಕಿದ ಈ ಪ್ರಶಸ್ತಿಯನ್ನು ಹೇಗೆ ಸ್ವೀಕರಿಸಬೇಕು ಎನ್ನುವ ಗೊಂದಲದಲ್ಲಿದೆ ಮಲಯಾಳಂ ಚಿತ್ರರಂಗ. ನಟಿಯೊಬ್ಬಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಅದರ ವಿರುದ್ಧ ಧ್ವನಿಯೆತ್ತುವ ಸಂದರ್ಭದಲ್ಲಿ ಸಹ ಕಲಾವಿದರ ಆಷಾಢಭೂತಿತನವೇ ‘ಆಟ್ಟಂ’ ಚಿತ್ರದ ಕೇಂದ್ರ ವಸ್ತು. ಸಹ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ತನ್ನ ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಳ್ಳುವ ನಟ ಒಬ್ಬನಾದರೆ, ಲಾಭ-ನಷ್ಟಗಳನ್ನು ಅಳೆದು ತೂಗಿ ಅದರ ವಿರುದ್ಧ ಪ್ರತಿಭಟಿಸುವ ನಟರು ಇನ್ನೊಂದಿಷ್ಟು. ದೌರ್ಜನ್ಯಕ್ಕೊಳಗಾದವಳು ಹವ್ಯಾಸಿ ರಂಗಭೂಮಿಯ ನಟಿಯಾಗಿದ್ದು, ಆರೋಪಿ ಸಿನೆಮಾ ನಟ ಮಾತ್ರವಲ್ಲದೆ, ಪ್ರಭಾವಿ ವ್ಯಕ್ತಿಯಾಗಿರುವುದು ಕಲಾವಿದರ ‘ಮಹಿಳಾ ಪರ ಧೋರಣೆಗಳಲ್ಲಿ’ ಸಾಕಷ್ಟು ಏರುಪೇರು ಉಂಟಾಗಲು ಕಾರಣವಾಗುತ್ತದೆ. ಈ ಪುರುಷರ ರಾಜಕೀಯದಲ್ಲಿ ಸಂತ್ರಸ್ತೆ ಒಂಟಿಯಾಗಬೇಕಾಗುತ್ತದೆ ಮಾತ್ರವಲ್ಲ, ಆಕೆಯೇ ಅಂತಿಮವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಇದೀಗ ಈ ಆಟ್ಟಂ ಚಿತ್ರಕತೆ, ಮಲಯಾಳಂ ಚಿತ್ರರಂಗದ ನಿಜಕತೆಯಾಗಿ ಬದಲಾಗಿದ್ದು, ಸಿನೆಮಾ ನಾಯಕ ನಟರ ಒಳಗಿರುವ ವಿಲನ್‌ಗಳು ಒಬ್ಬೊಬ್ಬರಾಗಿ ಬೆಳಕಿಗೆ ಬರತೊಡಗಿದ್ದಾರೆ.

ಮಲಯಾಳಂ ಚಿತ್ರರಂಗ ಸದಭಿರುಚಿಯ ಸಿನೆಮಾಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಹತ್ತು ಹಲವು ಪ್ರತಿಭಾವಂತ ಕಲಾವಿದರು ಈ ಸಿನೆಮೋದ್ಯಮದಿಂದ ಹೊರಬಂದಿದ್ದಾರೆ. ಹಲವು ರಾಷ್ಟ್ರಪ್ರಶಸ್ತಿಗಳನ್ನು ಮಲಯಾಳಂ ಚಿತ್ರಗಳು ತನ್ನದಾಗಿಸಿಕೊಂಡಿವೆ. ಕಡಿಮೆ ಬಂಡವಾಳ ಹೂಡಿ ಅತ್ಯುತ್ತಮ ಕಲಾತ್ಮಕ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆಯೂ ಮಲಯಾಳಂ ಚಿತ್ರನಿರ್ದೇಶಕರದ್ದು. ‘ಸ್ಲಂ ಡಾಗ್ ಮಿಲಿಯನೇರ್’ ಗಾಗಿ ಆಸ್ಕರ್ ಪ್ರಶಸ್ತಿ ಪಡೆದ ರಸೂಲ್ ಪೂಕುಟ್ಟಿ ಮಲಯಾಳಿಗರು. ಕೊಡಿಯೇಟ್ಟಂ, ಪೆರುಂದಚ್ಚನ್, ವಿಧೇಯನ್, ಚೆಮ್ಮೀನ್, ಮದಿಲುಗಳ್, ಆದಮಿಂಡೆ ಮಗನ್ ಅಬ್ಬು....ಸಾಲು ಸಾಲು ಕಲಾತ್ಮಕ ಚಿತ್ರಗಳನ್ನು ಕೊಡುವ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದ ಬುದ್ಧಿಜೀವಿ ವಲಯದ ಗಮನವನ್ನು ಮಲಯಾಳಂ ಚಿತ್ರರಂಗ ತನ್ನ್ನೆಡೆಗೆ ಸೆಳೆದಿದೆ. ಇಂತಹ ಮಲಯಾಳಂ ಚಿತ್ರರಂಗ ಹಾದು ಬಂದ ಹಾದಿ ಸರಳವಾಗಿಯೇನೂ ಇಲ್ಲ. ಆರಂಭದಲ್ಲಿ ಇತರ ಭಾಷೆಗಳಲ್ಲಿ ಮಲಯಾಳಂ ಚಿತ್ರರಂಗ ಪರಿಚಯಿಸಲ್ಪಟ್ಟಿದ್ದೇ ಅಶ್ಲೀಲ ಚಿತ್ರಗಳ ಮೂಲಕ. ‘ವಯಸ್ಕರಿಗೆ ಮಾತ್ರ’ ಸೂಚನೆಯಿರುವ ಚಿತ್ರಗಳಿಗಾಗಿ ಒಂದು ಕಾಲದಲ್ಲಿ ಮಲಯಾಳಂ ಕುಖ್ಯಾತಿಯನ್ನು ಪಡೆದಿತ್ತು. ಆ ಕಳಂಕವನ್ನು ತೊಡೆದು ಹಂತ ಹಂತವಾಗಿ ಬೆಳೆಯುತ್ತಾ ಇಂದು ಮಲಯಾಳಂ ಚಿತ್ರಗಳು ಇತರ ಭಾಷಿಗರಿಗೆ ಮಾದರಿಯಾಗಿ ಬೆಳೆದು ನಿಂತಿದೆ. ಇಂತಹ ಚಿತ್ರೋದ್ಯಮ ಇದೀಗ ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳಿಗಾಗಿ ಗುರುತಿಸಲ್ಪಡುತ್ತಿರುವುದು, ಹಲವು ನಟರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬರುತ್ತಿರುವುದು ಆಘಾತಕಾರಿಯಾಗಿದೆ.

ಮಲಯಾಳಂ ಸಿನೆಮಾ ರಂಗದ ಕುರಿತು ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ಕೆ.ಹೇಮಾ ನೇತೃತ್ವದ ಸಮಿತಿಯ ವರದಿಯು ಆ.19ರಂದು ಬಹಿರಂಗಗೊಂಡಿದೆ. 2017ರಲ್ಲಿ ನಟ ದಿಲೀಪ್ ಪ್ರಚೋದನೆಯ ಮೇರೆಗೆ ನಟಿಯೋರ್ವಳ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಬಳಿಕ ಕೇರಳ ಸರಕಾರವು ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸತ್ಯಶೋಧನಾ ಅಧ್ಯಯನಕ್ಕಾಗಿ ಹೇಮಾ ಸಮಿತಿಯನ್ನು ರಚಿಸಿತ್ತು.ಖ್ಯಾತ ನಟಿಯರಿಂದ ಹಿಡಿದು ಕಿರಿಯ ಕಲಾವಿದೆಯರವರೆಗೆ ಕನಿಷ್ಠ 80 ಮಹಿಳೆಯರ ಅನಾಮಧೇಯ ಸಾಕ್ಷ್ಯಗಳನ್ನು ದಾಖಲಿಸಿಕೊಂಡಿರುವ ಸಮಿತಿಯ ವರದಿ ಕಳೆದ ವಾರ ಬಿಡುಗಡೆಗೊಂಡ ಬೆನ್ನಿಗೇ ಹಲವು ನಟರ ಮೇಲೆ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ದಾಖಲಾಗಿವೆ. ಹಲವು ಚಿತ್ರನಟಿಯರು ತಮ್ಮ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಹಲವು ಮಲಯಾಳಂ ನಟರು ಈ ನಟಿಯರಿಗೆ ಬೆಂಬಲವಾಗಿ ನಿಂತಿದ್ದರೆ, ಕೆಲವರು ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸುತ್ತಿದ್ದಾರೆ. ಕೆಲವರು ಇದರ ಹಿಂದೆ ರಾಜಕೀಯವನ್ನು ಗುರುತಿಸುತ್ತಿದ್ದಾರೆ. ಕಲಾವಿದರ ಸಂಘಟನೆಯಾಗಿರುವ ‘ಅಮ್ಮ’ ಇದೀಗ ಅನಾಥವಾಗಿದೆ. ಅಮ್ಮ ಸಂಘಟನೆಯಲ್ಲಿರುವ ಹಿರಿಯರೇ ಈ ದೌರ್ಜನ್ಯದಲ್ಲಿ ಶಾಮೀಲಾಗಿರುವ ಆರೋಪಗಳು ಇಡೀ ಚಿತ್ರೋದ್ಯಮವನ್ನು ತೀವ್ರ ಮುಜುಗರಕ್ಕೆ ತಳ್ಳಿದೆ.

ಹಾಗೆ ನೋಡಿದರೆ ಲೈಂಗಿಕ ಶೋಷಣೆಗಳು ಮಲಯಾಳಂ ಚಿತ್ರರಂಗದಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ‘ಮೀ ಟೂ’ ಆಂದೋಲನದ ಸಂದರ್ಭದಲ್ಲಿ ಬಾಲಿವುಡ್‌ನ ಹಲವು ನಟಿಯರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಮನ ಸೆಳೆದಿದ್ದರು. ಅಂದಿನ ಮೀಟೂ ದೂರುಗಳೆಲ್ಲ ಇದೀಗ ಕಸದ ಬುಟ್ಟಿ ಸೇರಿವೆ. ಇಷ್ಟಕ್ಕೂ ಚಿತ್ರೋದ್ಯಮ ನಟಿಯರ ದೇಹ ಸೌಂದರ್ಯವನ್ನೇ ತನ್ನ ಬಂಡವಾಳವಾಗಿಸಿಕೊಂಡು, ಅವರನ್ನು ಸರಕುಗಳಂತೆ ಬಳಸಿಕೊಂಡ ದಿನದಿಂದಲೇ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ವಿಪರ್ಯಾಸವೆಂದರೆ ಈ ದೌರ್ಜನ್ಯವನ್ನು ನಟಿಯರು ಪರೋಕ್ಷವಾಗಿ ಸಮ್ಮತಿಸಿಕೊಂಡು ಬಂದಿದ್ದಾರೆ. ಅವಕಾಶಕ್ಕಾಗಿ ಈ ದೌರ್ಜನ್ಯಗಳನ್ನು ಒಪ್ಪಿಕೊಂಡು, ಅದನ್ನು ಕಲೆಯ ಭಾಗವೆಂದು ಅವರು ಸ್ವೀಕರಿಸುತ್ತಾ ಬಂದಿರುವುದೇ ಎಲ್ಲ ಅನಾಹುತಗಳಿಗೆ ಕಾರಣ. ಅವಕಾಶಗಳಿಗಾಗಿ ಎಲ್ಲ ಲೈಂಗಿಕ ದೌರ್ಜನ್ಯಗಳನ್ನು ಸಹಿಸುತ್ತಾ, ವೃತ್ತಿಯ ಕೊನೆಯ ದಿನಗಳಲ್ಲಿ ತಮಗಾಗಿರುವ ಅನ್ಯಾಯವನ್ನು ಹೇಳಿಕೊಂಡರೆ ಅದು ಎಷ್ಟು ವಿಶ್ವಾಸಾರ್ಹ ಎನ್ನುವ ಪ್ರಶ್ನೆ ಎದುರಾಗುತ್ತದೆ. ಆರೋಪಿಗಳು ಸುಲಭದಲ್ಲಿ ಪಾರಾಗುತ್ತಾರೆ. ಅನೇಕ ಸಂದರ್ಭದಲ್ಲಿ ವೈಯಕ್ತಿಕ ಸೇಡು, ವೃತ್ತಿಯಲ್ಲಿರುವ ಭಿನ್ನಾಭಿಪ್ರಾಯಗಳು ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಕಾರಣವಾಗುತ್ತವೆ. ಮುಕ್ತ ಲೈಂಗಿಕತೆಯ ಬಗ್ಗೆ ಸಿನೆಮಾ ಕಲಾವಿದರಲ್ಲನೇಕರಿಗೆ ಇರುವ ಉದಾರಭಾವ ಕೂಡ ಅಂತಿಮವಾಗಿ ಮಹಿಳೆಯರನ್ನುದೌರ್ಜನ್ಯಗಳಿಗೆ ತಳ್ಳುತ್ತದೆ.

ವರ್ಷಗಳ ಹಿಂದೆ ನಟಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಗಂಭೀರವಾಗಿ ತೆಗೆದುಕೊಂಡು, ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ತನಿಖೆಗಾಗಿ ಕೇರಳ ಸರಕಾರ ಸಮಿತಿಯೊಂದನ್ನು ರಚಿಸಿದ ಕಾರಣದಿಂದ ಅದರೊಳಗಿರುವ ಹುಳುಕುಗಳು ಬಹಿರಂಗವಾದವು. ಹೇಮಾ ಸಮಿತಿಯನ್ನು ರಚನೆ ಮಾಡದೇ ಇದ್ದಿದ್ದರೆ ಈ ಸತ್ಯ ಹೊರ ಬರುವುದಕ್ಕೆ ಸಾಧ್ಯವಿರಲಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯವನ್ನು ಗಂಭೀರವಾಗಿ ತೆಗೆದುಕೊಂಡು ಅದರ ತನಿಖೆಗಾಗಿ ಸಮಿತಿ ರಚಿಸಿದ ಅಲ್ಲಿನ ಸರಕಾರವನ್ನು ನಾವು ಅಭಿನಂದಿಸಬೇಕು. ಇಂದು ಕನ್ನಡವೂ ಸೇರಿದಂತೆ ಇತರ ಭಾಷೆಯ ಸಿನೆಮಾ ಉದ್ಯಮಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಬಹಿರಂಗಗೊಂಡಿಲ್ಲ ಎನ್ನುವುದರ ಅರ್ಥ, ಅಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿಲ್ಲ ಎಂದಲ್ಲ. ಕೇರಳ ಸರಕಾರ ಹೇಮಾ ಸಮಿತಿಯನ್ನು ರಚನೆ ಮಾಡಿದ ಹಾಗೆ ಇತರ ರಾಜ್ಯಗಳು ಚಿತ್ರೋದ್ಯಮದ ಅಸಲಿಯತನ್ನು ಬಹಿರಂಗಗೊಳಿಸಲು ಸಮಿತಿಯನ್ನು ರಚಿಸಬೇಕು. ಆಗ ಕನ್ನಡ ಚಿತ್ರೋದ್ಯಮವೂ ಸೇರಿದಂತೆ ಎಲ್ಲ ಭಾಷೆಗಳ ಸಿನೆಮಾದ್ಯೋಮದೊಳಗಿರುವ ನಟರ ಅಸಲಿ ಮುಖಗಳು ಬಹಿರಂಗವಾಗುತ್ತವೆ. ಆದುದರಿಂದ, ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಎಲ್ಲ ಭಾಷೆಯ ಸಿನೆಮಾ ಉದ್ಯಮದೊಳಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಮಲಯಾಳಂನಲ್ಲಿ ರಚಿಸಿದಂತೆಯೇ ಸಮಿತಿಯೊಂದನ್ನು ರಚಿಸಿ, ನಟಿಯರಿಂದ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ನಡೆಯಬೇಕು. ಈ ನಿಟ್ಟಿನಲ್ಲಿ ಕೇರಳದಲ್ಲಿ ರಚನೆಯಾದ ಸಮಿತಿ ಇತರ ರಾಜ್ಯಗಳಿಗೂ ಮಾದರಿಯಾಗಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News