ಹೈನೋದ್ಯಮದ ನಷ್ಟ ತುಂಬಲು ಹಾಲಿನ ದರ ಹೆಚ್ಚಳ ಪರಿಹಾರವೇ?

Update: 2023-07-24 06:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಆಲ್ಕೋಹಾಲಿನ ದರ ಹೆಚ್ಚಿಸಿದಾಗ ಬಂದಷ್ಟು ಟೀಕೆಗಳು ‘ನಂದಿನಿ ಹಾಲಿ’ಗೆ ದರ ಹೆಚ್ಚಿಸಿದಾಗ ಬರದೇ ಇರುವುದು ಖೇದಕರ. ಗ್ಯಾರಂಟಿ ಯೋಜನೆಗಳಿಂದ ಬಡವರು ಪಡೆದುಕೊಂಡಿರುವುದನ್ನು ಆಲ್ಕೋಹಾಲಿನ ಮೂಲಕ ಕಳೆದುಕೊಳ್ಳುತ್ತಾರೆ ಎನ್ನುವ ಟೀಕೆಗಳನ್ನು ಹಲವರು ಮಾಡಿದ್ದರು. ಮದ್ಯವನ್ನು ಸಂಪೂರ್ಣ ನಿಷೇಧ ಮಾಡದೆ ಅದರ ಬೆಲೆಯನ್ನು ಹೆಚ್ಚಿಸಿದರೆ, ಕುಡಿತವನ್ನು ಚಟವಾಗಿಸಿ ಕೊಂಡವರು ಮನೆಯ ಅಕ್ಕಿ, ಪಾತ್ರೆಗಳನ್ನು ಮಾರಿ ಹಣವನ್ನು ಭರ್ತಿ ಮಾಡಿಕೊಳ್ಳುವ ಸಾಧ್ಯತೆ ಗಳಿವೆ. ಇದು ನೇರವಾಗಿ ಕುಟುಂಬದ ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ. ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಿದ್ದೇ ಆದರೆ, ಲಕ್ಷಾಂತರ ಮನೆಗಳಿಗೆ ಶಾಂತಿ, ನೆಮ್ಮದಿಯನ್ನು ಸರಕಾರ ‘ಗ್ಯಾರಂಟಿ’ಯಾಗಿ ಕೊಟ್ಟಂತಾಗುತ್ತಿತ್ತು. ಅಕ್ಕಿ ಕೊಟ್ಟ ರಾಜ್ಯ ಸರಕಾರ ಇದೀಗ ಬಡವರ ಮಕ್ಕಳ ಕೈಯಿಂದ ಹಾಲಿನ ಲೋಟ ಕಿತ್ತುಕೊಳ್ಳಲು ಮುಂದಾಗಿದೆ. ಒಂದೆಡೆ ಹಾಲು ಉತ್ಪಾದನೆ ಇಳಿಕೆಯಾಗುತ್ತಿದೆ. ಇನ್ನೊಂದೆಡೆ ಹೈನೋದ್ಯಮ ನಷ್ಟದಾಯಕವಾಗುತ್ತಿದೆ. ರೈತರನ್ನು ನಷ್ಟದಿಂದ ಮೇಲೆತ್ತುವುದಕ್ಕೆ ಹಾಲಿನ ದರ ಹೆಚ್ಚಿಸುವುದು ಅನಿವಾರ್ಯ ಎಂದು ಹಾಲು ಒಕ್ಕೂಟಗಳು ಪ್ರತಿಪಾದಿಸುತ್ತಿವೆ. ಆದರೆ ಇಂದು ಕರ್ನಾಟಕ ಅಪೌಷ್ಟಿಕತೆಗಾಗಿ ಸುದ್ದಿಯಲ್ಲಿದೆ. ರಾಜ್ಯದಲ್ಲಿ 3 ವರ್ಷದೊಳಗಿನ ಏಳು ಸಾವಿರ ಮಕ್ಕಳು ತೀವ್ರ ಅಪೌಷ್ಟಿಕತೆಯ ರೋಗದಿಂದ ನರಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳುತ್ತದೆ. ಸುಮಾರು ನಾಲ್ಕು ಲಕ್ಷ ಮಕ್ಕಳು ಮಧ್ಯಮ ಅಪೌಷ್ಟಿಕತೆಯಿಂದಾಗಿ ಕಾಯಿಲೆ ಬಿದ್ದಿದ್ದಾರೆ. ಮೂರರಿಂದ ಆರು ವರ್ಷದ ಮಕ್ಕಳನ್ನು ಸಮೀಕ್ಷೆ ಮಾಡಿದಾಗ, ಎರಡೂವರೆ ಲಕ್ಷ ಮಕ್ಕಳು ರಾಜ್ಯದಲ್ಲಿ ಮಧ್ಯಮ ಅಪೌಷ್ಟಿಕತೆಯಿಂದ ನರಳುತ್ತಿರುವುದು ಬೆಳಕಿಗೆ ಬಂದಿದೆ. ಐದು ಸಾವಿರಕ್ಕೂ ಅಧಿಕ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವೆಲ್ಲವೂ ತೀರಾ ಬಡವರ ಮಕ್ಕಳ ಪಾಡು. ಮಧ್ಯಮ ವರ್ಗ ಅದು ಹೇಗೋ ಕಷ್ಟದಿಂದ ಹಾಲು, ಮೊಟ್ಟೆಗಳನ್ನು ಹೊಂದಿಸಿ ಮಕ್ಕಳನ್ನುು ಆರೋಗ್ಯದಿಂದಿರಿಸಲು ಹೋರಾಟ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಿಸಿದರೆ ಅದು ಈ ಮಕ್ಕಳ ಬಾಯಿಯಿಂದ ಹಾಲಿನ ಲೋಟ ಕಿತ್ತುಕೊಂಡಂತೆಯೇ ಸರಿ. ಸರಕಾರ ನೀಡುವ ಅಕ್ಕಿ ಹಸಿವನ್ನು ನೀಗಿಸಬಹುದು. ಆದರೆ ಅಪೌಷ್ಟಿಕತೆಯನ್ನು ಇಲ್ಲವಾಗಿಸಲು ಮಕ್ಕಳ ಪಾಲಿಗೆ ಹಾಲಿನ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈಗಾಗಲೇ ಹಾಲಿನ ಕೊರತೆಯಿಂದ ಹೆಚ್ಚಿನ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಕ್ಷೀರಭಾಗ್ಯವನ್ನು ಸ್ಥಗಿತಗೊಳಿಸಲಾಗಿದೆ.ನಗರ ಮತ್ತು ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಮೊಟ್ಟೆಯ ಜೊತೆಗೆ ಬಿಸಿ ಹಾಲು ನೀಡುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುವ ಸಂದರ್ಭದಲ್ಲೇ ಹಾಲಿನ ದರ ಹೆಚ್ಚಾಗಿದೆ.

ಲೀಟರ್ ಗೆ 8 ರೂಪಾಯಿ ಹೆಚ್ಚಿಸಬೇಕು ಎಂದು ಹಾಲು ಒಕ್ಕೂಟಗಳು ಆರಂಭದಲ್ಲಿ ಬೇಡಿಕೆಯಿಟ್ಟಿದ್ದವಂತೆ. ಸರಕಾರ ಒಪ್ಪದೇ ಇದ್ದಾಗ ಕನಿಷ್ಠ 5 ರೂಪಾಯಿಯನ್ನಾದರೂ ಹೆಚ್ಚಿಸಬೇಕು ಎಂದು ಕೆಎಂಎಫ್ ಅಧ್ಯಕ್ಷರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದರು. ಅಂತಿಮವಾಗಿ ಮೂರು ರೂಪಾಯಿಯನ್ನು ಹೆಚ್ಚಿಸಲಾಗಿದ್ದು, ಈ ಹಣ ನೇರವಾಗಿ ರೈತರಿಗೆ ತಲುಪಿಸೇಕು ಎಂದು ಸೂಚನೆ ನೀಡಲಾಗಿದೆ. ಒಕ್ಕೂಟ ಈ ಹಣವನ್ನು ರೈತರಿಗೆ ಒದಗಿಸುತ್ತದೆಯೇ ಅಥವಾ ಒಕ್ಕೂಟದ ನಷ್ಟವನ್ನು ತುಂಬಿಸಲು ಬಳಸುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಇಂದು ಹಾಲಿನ ದರ ಏರಿಕೆ ಅನಿವಾರ್ಯವಾಗಿಸುವುದಕ್ಕೆ ಹಲವು ಕಾರಣಗಳಿವೆ. ಹಾಲು ಉತ್ಪಾದನೆ ಇಳಿಕೆಯಾಗಿರುವುದು ಅದರಲ್ಲಿ ಒಂದು ಮುಖ್ಯ ಕಾರಣ. ರಾಜ್ಯದಲ್ಲಿ 2022ರಿಂದ ದಿನಕ್ಕೆ 10 ಲಕ್ಷ ಲೀಟರ್ ಹಾಲು ಸಂಗ್ರಹಣೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಮೂಲಗಳು ಹೇಳುತ್ತವೆ. ಗೋವುಗಳಿಗೆ ಅಂಟಿದ ಸಾಂಕ್ರಾಮಿಕ ಕಾಯಿಲೆಗಳನ್ನು ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆಯಾದರೂ ಕೆಎಂಎಫ್ಗೆ ಅಂಟಿರುವ ಕಾಯಿಲೆಗಳನ್ನು ಈ ಸಂದರ್ಭದಲ್ಲಿ ಮುಚ್ಚಿಡಲಾಗುತ್ತಿದೆ. ಕೆಎಂಎಫ್ ತನ್ನ ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸುತ್ತಿರುವ ಕಾರಣದಿಂದ ರೈತರು ಖಾಸಗಿ ಡೈರಿಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳಿವೆ. ಇದೇ ಸಂದರ್ಭದಲ್ಲಿ ಹಲವು ಜಿಲ್ಲೆಗಳಲ್ಲಿ ರೈತರಿಗೆ ನೀಡಬೇಕಾಗಿರುವ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಬಿಜೆಪಿ ಸರಕಾರ ಜಾನುವಾರು ಮಾರಾಟ ನಿಯಂತ್ರಣಕ್ಕೆ ಕಾನೂನು ಜಾರಿಗೆ ತಂದ ದಿನದಿಂದ ರೈತರು ತಮ್ಮ ಗೋವುಗಳನ್ನು ಮಾರುವ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ರೈತರ ಗೋಸಾಕಣಾ ವೆಚ್ಚ ಅಧಿಕವಾಗುತ್ತಿದೆ. ಇದೇ ಸಂದರ್ಭದಲ್ಲಿ ಹಾಲು ಕೊಡದ ಹಸುಗಳನ್ನು ಹಟ್ಟಿಯಲ್ಲಿಟ್ಟು ಸಾಕುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಜೊತೆ ಜೊತೆಗೇ ನಕಲಿ ಗೋರಕ್ಷಕರ ಕಾಟವೂ ರೈತರಿಗೆ ಹೆಚ್ಚುತ್ತಿದೆ. ಈ ಎಲ್ಲ ಕಿರುಕುಳಗಳ ಪರಿಣಾಮದಿಂದಾಗಿ ರೈತರು ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಗೋವುಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಸಹಜವಾಗಿಯೇ ಹಾಲು ಉತ್ಪಾದನೆಯಲ್ಲೂ ಕೊರತೆ ಕಂಡು ಬರುತ್ತಿದೆ.

2021-22ರಲ್ಲಿ ಕರ್ನಾಟಕ ಮಾರುಕಟ್ಟೆಗೆ ಕೆಎಂಎಫ್ ತಿಂಗಳಿಗೆ ಸುಮಾರು 2,000 ಟನ್ ತುಪ್ಪವನ್ನು ಪೂರೈಸುತ್ತಿತ್ತು. ಹಾಲಿನ ಕೊರತೆಯಿಂದಾಗಿ ತುಪ್ಪ ಪೂರೈಕೆಯಲ್ಲಿ ಸುಮಾರು 500 ಟನ್ ಇಳಿಕೆಯಾಗಿದೆ. ಇದರ ಲಾಭವನ್ನು ಅಮುಲ್ನಂತಹ ಸಂಸ್ಥೆಗಳು ತಮ್ಮದಾಗಿಸಿಕೊಳ್ಳುತ್ತಿವೆ. ಸೂಪರ್ ಬಝಾರ್ಗಳಲ್ಲಿ ನಂದಿನಿ ತುಪ್ಪದ ಬಾಟಲುಗಳು ಕಣ್ಮರೆಯಾಗುತ್ತಿವೆ. ಆ ಸ್ಥಾನಗಳನ್ನು ಇತರ ಕಂಪೆನಿಗಳು ತುಂಬುತ್ತಿವೆ. ಹಾಲಿನ ದರ ಹೆಚ್ಚಳವಾಗುವುದರ ಲಾಭಗಳನ್ನು ಕೂಡ ಹೊರಗಿನ ರಾಜ್ಯದ ಹಾಲಿನ ಸಂಸ್ಥೆಗಳು ತಮ್ಮದಾಗಿಸಿಕೊಳ್ಳುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ನಂದಿನಿಯು ಇತರ ಕಂಪೆನಿಗಳ ಜೊತೆಗೆ ಒಳಒಪ್ಪಂದಗಳನ್ನು ಮಾಡಿಕೊಂಡು ಆ ಸಂಸ್ಥೆಗಳಿಗೆ ಲಾಭ ಮಾಡಿಕೊಡುತ್ತಿವೆ ಎನ್ನುವ ಆರೋಪಗಳೂ ಇವೆ. ಇಂದು ಕೆಎಂಎಫ್ ಅನ್ನು ಮೇಲೆತ್ತಬೇಕಾದರೆ ಮೊತ್ತ ಮೊದಲು ರೈತರಿಗೆ ಹೈನೋದ್ಯಮವನ್ನು ಲಾಭದಾಯಕವಾಗಿ ಮಾಡಿಸಿಕೊಡಬೇಕು. ಹೆಚ್ಚು ಪ್ರೋತ್ಸಾಹ ಧನವನ್ನು ನೀಡುವುದು ಲಾಭದಾಯಕವಾಗಿಸಲು ಇರುವ ಒಂದು ವಿಧಾನ. ಇದು ಸರಕಾರಕ್ಕೆ ಮತ್ತು ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆಗಳಿವೆ.ಬದಲಿಗೆ ಗೋಸಾಕಣೆಯ ವೆಚ್ಚ ಇಳಿಕೆಯಾಗುವಂತೆ ಮಾಡುವುದೇ ಹೈನೋದ್ಯಮ ಉಳಿಸುವುದಕ್ಕಿರುವ ಅತ್ಯುತ್ತಮ ಮಾರ್ಗವಾಗಿದೆ.

ಮುಖ್ಯವಾಗಿ ತನ್ನ ಹಟ್ಟಿಯಲ್ಲಿರುವ ಗೋವುಗಳನ್ನು ಯಾವಾಗ, ಯಾರಿಗೆ ಮಾರಬೇಕು ಎನ್ನುವ ಹಕ್ಕನ್ನು ಸಂಪೂರ್ಣ ರೈತರಿಗೆ ಮರಳಿಸುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಹಾಲು ಒಕ್ಕೂಟಗಳು ಮಾಡಬೇಕು. ರೈತರು ಸಾಕಿ ಬೆಳೆಸಿದ ಹಸುಗಳ ಮೇಲೆ ಸಾರ್ವಜನಿಕ ಗೋಶಾಲೆಗಳು ಅಥವಾ ನಕಲಿ ಗೋರಕ್ಷಕರು ಹಕ್ಕು ಸಾಧಿಸುವುದು ನಿಲ್ಲಬೇಕು. ಹಾಲು ನೀಡದ ಹಸುಗಳನ್ನು ಮಾರಾಟ ಮಾಡುವ ಸಂಪೂರ್ಣ ಸ್ವಾತಂತ್ರ ರೈತರಿಗಿರಬೇಕು. ಹಾಗೆ ಮಾರಿ ಬಂದ ಹಣದಿಂದ, ಹೈನೋದ್ಯಮದ ಇತರ ವೆಚ್ಚಗಳನ್ನು ತುಂಬಲು ರೈತರಿಗೆ ಸಾಧ್ಯವಾಗುತ್ತದೆ. ಸಹಜವಾಗಿಯೇ ಗೋಸಾಕಣೆಯ ವೆಚ್ಚ ಇಳಿಕೆಯಾಗುತ್ತದೆ. ಹೆಚ್ಚು ಗೋವುಗಳನ್ನು ಸಾಕಲು ಅವರಿಗೆ ಈ ಮೂಲಕ ಸಾಧ್ಯವಾಗುತ್ತದೆ. ಆದುದರಿಂದ ರಾಜ್ಯದಲ್ಲಿರುವ ಎಲ್ಲ ಹಾಲು ಒಕ್ಕೂಟಗಳು ಸಂಘಟಿತವಾಗಿ ಗೋಹತ್ಯಾ ನಿಷೇಧ ಕಾನೂನಿನ ಹೆಸರಿನಲ್ಲಿ ರೈತರಿಗೆ ಜಾನುವಾರುಗಳನ್ನು ಮಾರಾಟ ಮಾಡಲು ವಿಧಿಸಿರುವ ನಿರ್ಬಂಧಗಳನ್ನು ಹಿಂದೆಗೆಯಲು ಸರಕಾರವನ್ನು ಒತ್ತಾಯಿಸಬೇಕು. ಆದರೆ ಕೆಎಂಎಫ್ ಈ ಕಾನೂನಿನ ಬಗ್ಗೆ ವೌನವಾಗಿರುವುದು ನಿಗೂಢವಾಗಿದೆ. ಈ ಕಾನೂನು ಕಿತ್ತೊಗೆದರೆ ಗ್ರಾಹಕರು-ರೈತರು ಏಕಕಾಲದಲ್ಲಿ ಸಂತುಷ್ಟರಾಗುತ್ತಾರೆ. ಗೋಶಾಲೆಗಳಿಂದ ಕದ್ದು ಮುಚ್ಚಿ ಬೃಹತ್ ಸಂಸ್ಕರಣಾ ಘಟಕಗಳಿಗೆ ಗೋವುಗಲು ರವಾನೆಯಾಗುವ ಬದಲು, ರೈತರೇ ತಮ್ಮ ತಮ್ಮ ಗೋವುಗಳನ್ನು ಮುಕ್ತವಾಗಿ ಮಾರುವಂತಹ ವಾತಾವರಣ ನಿರ್ಮಾಣವಾಗಲಿ. ಹಾಲು-ಮಾಂಸ ಎರಡೂ ಪೌಷ್ಟಿಕತೆಗೆ ಅತ್ಯಗತ್ಯ. ಇವುಗಳನ್ನು ದುಬಾರಿಯಾಗಿಸುವುದಕ್ಕಾಗಿಯೇ ಹೈನೋದ್ಯಮದೊಂದಿಗೆ ಯಾವ ಸಂಬಂಧವೂ ಇಲ್ಲದ ರಾಜಕೀಯ ಗುಂಪುಗಳು ಮಾಡಿರುವ ಕಾನೂನನ್ನು ರದ್ದುಗೊಳಿಸುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಗೋಸಾಕಣೆಗೆ ಸಂಬಂಧವೇ ಇಲ್ಲದವರು ಈ ಕ್ಷೇತ್ರದೊಳಗೆ ಮೂಗು ತೂರಿಸುವುದನ್ನು ನಿಲ್ಲಿಸುವಂತೆ ಕೆಎಂಎಫ್ ಸರಕಾರಕ್ಕೆ ದೊಡ್ಡ ಧ್ವನಿಯಲ್ಲಿ ಒತ್ತಾಯಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News