ರಾಜ್ಯದಲ್ಲಿ ಲಿಂಗಾಯತ ಕಾಂಗ್ರೆಸ್, ಒಕ್ಕಲಿಗ ಕಾಂಗ್ರೆಸ್ ಅನ್ನುವುದಿದೆಯೆ?

Update: 2023-11-23 03:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಡಿನ ಜನತೆ ಜಾತಿ, ಧರ್ಮಗಳನ್ನು ಮೀರಿ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸಿದೆ. ಸಿದ್ದರಾಮಯ್ಯ ನೇತೃತ್ವದ ಮೇಲೆ ತಳಸ್ತರದ ಮತದಾರರು ಅಚಲ ನಂಬಿಕೆಯನ್ನಿಟ್ಟಿದ್ದರು. ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಮಹಿಳೆಯರು, ದಲಿತರು, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತರ ಪರವಾಗಿ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವ ಭರವಸೆಗಳನ್ನು ನೀಡಿತು. ಅದರಲ್ಲಿ ಬಹುಮುಖ್ಯವಾದುದು ‘ಸಾಮಾಜಿಕ,ಆರ್ಥಿಕ ಸಮೀಕ್ಷಾ ವರದಿಯ ಅಂಗೀಕಾರ. ಮುಖ್ಯಮಂತ್ರಿ ಸಿದ್ದರಾಯ್ಯ ಅವರೇ ಅಂಗೀಕರಿಸುವ ಕುರಿತು ಹೇಳಿಕೆಯನ್ನು ನೀಡಿದ್ದರು. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿರಲಿಲ್ಲ, ಬದಲಾಗಿ ಹೊಸದಾಗಿ ರಚನೆಯಾಗಿರುವ ಸರಕಾರದ ನಿಲುವಾಗಿತ್ತು. ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಜಾತಿಗಣತಿಯ ಪರವಾಗಿದೆ. ‘ದೇಶದ ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ಜಾತಿ ಗಣತಿಯಲ್ಲಿ ಪರಿಹಾರವಿದೆ’ ಎಂದು ಕಾಂಗ್ರೆಸ್ನ ರಾಷ್ಟ್ರೀಯ ನಾಯಕರಾಗಿರುವ ರಾಹುಲ್ ಗಾಂಧಿ ಈಗಾಗಲೇ ಹೇಳಿಕೆ ನೀಡಿದ್ದಾರೆ ಮಾತ್ರವಲ್ಲ, ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿಯನ್ನು ನಡೆಸುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಜಾತಿಗಣತಿಯನ್ನು ನಡೆಸುವುದಕ್ಕೆ ಯೋಜನೆ ರೂಪಿಸಿದ್ದೇ ಕಾಂಗ್ರೆಸ್ ಸರಕಾರ. ಈ ಮೂಲಕ ದೇಶದಲ್ಲೇ ಮೊದಲ ಬಾರಿ ಈ ಸಮೀಕ್ಷೆಯನ್ನು ಹಮ್ಮಿಕೊಂಡ ಹೆಗ್ಗಳಿಕೆಗೂ ರಾಜ್ಯ ಪಾತ್ರವಾಗಿತ್ತು. ಆದರೆ ಕರ್ನಾಟಕಕ್ಕಿಂತ ಮೊದಲು ಬಿಹಾರ ವರದಿಯನ್ನು ಅಂಗೀಕರಿಸಿತು. ಗಣತಿ ಮಾಡಲು ತೋರಿಸಿದ ಉತ್ಸಾಹ ವರದಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಇಲ್ಲದೇ ಇದ್ದ ಕಾರಣದಿಂದ ಕಾಂತರಾಜು ವರದಿ ಧೂಳು ತಿನ್ನ ತೊಡಗಿತು. ಇದಾದ ಬಳಿಕ ಮೈತ್ರಿ ಸರಕಾರಗಳ ಕೈಯಲ್ಲಿ ರಾಜ್ಯ ನಜ್ಜು ಗುಜ್ಜಾದ ಕಾರಣದಿಂದ ಈ ವರದಿ ಸ್ವೀಕಾರ ಮುಂದೆ ಹೋಯಿತು. ಇದೀಗ ಕಾಂಗ್ರೆಸ್ ಭರ್ಜರಿ ಬಹುಮತವನ್ನು ಪಡೆದು ಸುಭದ್ರ ಸರಕಾರವನ್ನು ರಚಿಸಿರುವುದರಿಂದ ಕಾಂತರಾಜು ವರದಿ ಸ್ವೀಕಾರವಾಗುತ್ತದೆ ಎಂದು ರಾಜ್ಯ ನಂಬಿದೆ. ಆದರೆ ವರದಿ ಸ್ವೀಕಾರಕ್ಕೆ ಸಂಬಂಧಿಸಿ ಸರಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ.

ಒಂದೆಡೆ ರಾಹುಲ್ ಗಾಂಧಿ ಜಾತಿ ಗಣತಿ ಕಡ್ಡಾಯ ಎಂದು ಹೇಳುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಈ ಕುರಿತಂತೆ ದ್ವಂದ್ವ ನಿಲುವನ್ನು ತಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ಅಂಗೀಕರಿಸಲಿದ್ದೇವೆ’ ಎಂದು ಸ್ಪಷ್ಟ ಹೇಳಿಕೆಯನ್ನು ಈಗಾಗಲೇ ನೀಡಿದ್ದಾರೆ. ಅವರೇನೂ ‘ಕುರುಬ ಮಹಾ ಸಂಘ’ದ ಪ್ರತಿನಿಧಿಯಾಗಿ ಹೇಳಿಕೆ ನೀಡಿರುವುದಲ್ಲ. ಸರಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸರಕಾರದ ಭಾಗವಾಗಿರುವ ಎಲ್ಲರೂ ಆ ನಿರ್ಧಾರದ ಜೊತೆ ನಿಲ್ಲುವುದು ಅವರ ಕರ್ತವ್ಯವಾಗಿದೆ. ಈ ಸಂದರ್ಭದಲ್ಲಿ ಜಾತಿ ಗಣತಿಯ ವರದಿಯನ್ನು ಅಂಗೀಕರಿಸುವ ಕುರಿತಂತೆ ಯಾರಾದರೂ ಭಿನ್ನ ನಿಲುವನ್ನು ತಳೆದದ್ದೇ ಆದರೆ ಆದನ್ನು ಸರಕಾರದ ವಿರುದ್ಧ ತಳೆದ ನಿಲುವು ಎಂದೇ ಭಾವಿಸಬೇಕಾಗುತ್ತದೆ. ಸರಕಾರದ ಭಾಗವಾಗಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಮನೂರು ಸೇರಿದಂತೆ ಹಲವು ನಾಯಕರು ಈ ವರೆಗೆ ಜಾತಿಗಣತಿಯ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದೀಗ ನೋಡಿದರೆ, ರಾಜ್ಯ ಒಕ್ಕಲಿಗರ ಸಂಘವು ಕಾಂತರಾಜು ವರದಿಗೆ ವಿರೋಧ ವ್ಯಕ್ತ ಪಡಿಸಿಪತ್ರವೊಂದನ್ನು ಸಿದ್ಧ ಪಡಿಸಿದೆ ಮತ್ತು ಆ ಪತ್ರಕ್ಕೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಚಿವ ಎಂ. ಸಿ. ಸುಧಾಕರ್ ಸಹಿತ ಹಲವು ಕಾಂಗ್ರೆಸ್ ಮುಖಂಡರು ಸಹಿ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಡಿಕೆಶಿಯವರಾಗಲಿ, ಇತರ ರಾಜಕೀಯ ನಾಯಕರಾಗಲಿ ಅಲ್ಲಗಳೆದಿಲ್ಲ. ಒಂದೆಡೆ ಸರಕಾರ ಜಾತಿ ಗಣತಿಯನ್ನು ಅಂಗೀಕರಿಸುತ್ತದೆ ಎನ್ನುತ್ತಿರುವಾಗಲೇ, ಸರಕಾರದ ಪ್ರಮುಖ ಭಾಗವಾಗಿರುವ ಉಪಮುಖ್ಯಮಂತ್ರಿ, ಸಚಿವರು ಜಾತಿ ಸಂಘಟನೆಗಳ ಸಭೆಗಳಲ್ಲಿ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿರುವುದು ಏನನ್ನು ಹೇಳುತ್ತದೆ?

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನಾಯಕರು ಎಷ್ಟು ನಿಜವೋ, ಲಿಂಗಾಯತ ಸಮುದಾಯದ ನಾಯಕರು ಎನ್ನುವುದು ಅಷ್ಟೇ ನಿಜ. ಡಿ.ಕೆ. ಶಿವಕುಮಾರ್, ಸುಧಾಕರ್ ಮೊದಲಾದವರೆಲ್ಲ ಒಕ್ಕಲಿಗ ಸಮುದಾಯದ ಬೆಂಬಲದಿಂದ ರಾಜಕೀಯವಾಗಿ ಬೆಳೆದವರು ಎನ್ನುವುದರಲ್ಲೂ ಎರಡು ಮಾತಿಲ್ಲ. ಸರಕಾರದ ಹೊರಗೆ ಅವರು ಬೇರೆ ಬೇರೆ ಸಂಘಟನೆಗಳು, ಸಮುದಾಯವನ್ನು ಪ್ರತಿನಿಧಿಸುತ್ತಿದ್ದರೂ, ಸರಕಾರದ ಭಾಗವಾಗಿ ಅವರಿಗೆ ಕೆಲವು ಹೊಣೆಗಾರಿಕೆಗಳಿವೆ. ನಾಳೆ ಒಕ್ಕಲಿಗ, ಲಿಂಗಾಯತರಂತೆಯೇ ಸರಕಾರದೊಳಗಿರುವ ಇತರ ಸಮುದಾಯಗಳೂ ತಮ್ಮ ತಮ್ಮ ಜಾತಿ, ಸಮುದಾಯಗಳ ಮೂಗಿನ ನೇರಕ್ಕೆ ಸರಕಾರದ ನಿಲುವುಗಳನ್ನು ವಿರೋಧಿಸಿದರೆ ಏನಾದೀತು? ಇಷ್ಟಕ್ಕೂ ಲಿಂಗಾಯತ ಕಾಂಗ್ರೆಸ್, ಒಕ್ಕಲಿಗ ಕಾಂಗ್ರೆಸ್ ಎನ್ನುವ ವಿಭಜನೆ ಸರಕಾರದೊಳಗಿದೆ ಎನ್ನುವುದು ಈ ಮೂಲಕ ಸ್ಪಷ್ಟಪಡಿಸಿದಂತಾಗಲಿಲ್ಲವೆ? ಶಾಮನೂರು ಶಿವಶಂಕರಪ್ಪ, ಡಿ.ಕೆ. ಶಿವಕುಮಾರ್ ತಮ್ಮ ತಮ್ಮ ಜಾತಿ ಸಂಘಗಳಲ್ಲಿ ಭಾಗವಹಿಸಲಿ. ಆದರೆ ಅಲ್ಲಿ ಅವರು ಸರಕಾರವನ್ನು ಪ್ರತಿನಿಧಿಸುವ ಅಗತ್ಯವಿತ್ತು. ಜಾತಿ ಜನಗಣತಿ ಈ ನಾಡಿನ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ನೀಡುವ ಕೊಡುಗೆಗಳ ಬಗ್ಗೆ ಸಮುದಾಯದ ಜನರಿಗೆ ಮನವರಿಕೆ ಮಾಡಿಕೊಡುವ ಮಹತ್ತರ ಹೊಣೆಗಾರಿಕೆಯಿತ್ತು. ಆ ಹೊಣೆಗಾರಿಕೆಯನ್ನು ನಿರ್ವಹಿಸದೇ ಸಂಘದೊಳಗಿರುವ ಸಂಘಪರಿವಾರದ ಮನಸ್ಸುಗಳಿಗೆ ತಲೆಬಾಗಿ ಇವರು ಸಹಿ ಹಾಕಿದ್ದಾರೆ. ಜಾತಿ ಗಣತಿಯನ್ನು ವಿರೋಧಿಸುತ್ತಿರುವುದು ತಳಸ್ತರದ ಜನರ ಅಭಿವೃದ್ಧಿಯ ವಿರೋಧಿಗಳು ಮಾತ್ರ. ಆರೆಸ್ಸೆಸ್ನ ನಿರ್ದೇಶನದಂತೆ ಜಾತಿಗಣತಿಯ ವಿರುದ್ಧ ಬಿಜೆಪಿ ಸಂಚು ರೂಪಿಸುತ್ತಾ ಬಂದಿದೆ. ವಿವಿಧ ಜಾತಿ ಸಂಘಗಳ ಮುಖಂಡರಿಗೆ ತಪ್ಪು ಮಾಹಿತಿಗಳನ್ನು ನೀಡಿ ಆರೆಸ್ಸೆಸ್ ನಾಯಕರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದೀಗ ಆರೆಸ್ಸೆಸ್ ಸಂಚಿನ ಜೊತೆಗೆ ಕಾಂಗ್ರೆಸ್ನ ಹಿರಿಯ ನಾಯಕರೇ ಕೈ ಜೋಡಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ, ಸರಕಾರಕ್ಕೆ ಮತ್ತು ನಾಡಿನ ಜನತೆಗೆ ಏಕಕಾಲದಲ್ಲಿ ದ್ರೋಹ ಬಗೆದ ದ್ರೋಹವಾಗಿದೆ.

ಲಿಂಗಾಯತ ಮತ್ತು ಒಕ್ಕಲಿಗ ಸಂಘಗಳು ಜಾತಿ ಗಣತಿಯ ಸಮೀಕ್ಷೆಗಳನ್ನು ವಿರೋಧಿಸುತ್ತಿರುವುದಾದರೂ ಯಾಕೆ? ತಮ್ಮನ್ನು ತಾವು ಹಿಂದುಳಿದ ವರ್ಗ ಎಂದು ಕರೆದುಕೊಂಡು ಸಂವಿಧಾನ ಪಡೆದುಕೊಂಡಿರುವ ಹಲವು ಸವಲತ್ತುಗಳನ್ನು ತಮ್ಮದಾಗಿಸಿಕೊಂಡು ಬಲಿಷ್ಟವಾಗಿರುವ ಈ ಸಮುದಾಯ, ಹಿಂದುಳಿದ ವರ್ಗದಲ್ಲಿರುವ ಇನ್ನಷ್ಟು ದುರ್ಬಲ ವರ್ಗಗಳನ್ನು ಮೇಲೆತ್ತಲು ಸಹಾಯ ಮಾಡುವ ಜಾತಿ ಗಣತಿಯನ್ನು ವಿರೋಧಿ

ಸುವುದರಲ್ಲಿ ಏನು ಅರ್ಥವಿದೆ? ಜಾತಿ ಗಣತಿಯಿಂದ ರಾಜ್ಯದಲ್ಲಿ ತಮ್ಮ ಸ್ಥಾನಮಾನದ ಬಗ್ಗೆ ಒಂದು ಸ್ಪಷ್ಟತೆ ಎಲ್ಲ ಜಾತಿಗಳಿಗೂ ಸಿಗುತ್ತದೆ. ಯಾವ ಜಾತಿಗಳು ಸಂಖ್ಯೆಯಲ್ಲಿ ಅಧಿಕವಿದ್ದೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಹಿಂದುಳಿದಿದೆಯೋ ಅವರಿಗೆ ಸವಲತ್ತುಗಳನ್ನು ತಲುಪಿಸಲು ಇದರಿಂದ ಸರಕಾರಕ್ಕೆ ಸಾಧ್ಯವಾಗುತ್ತದೆ. ‘ಜಾತಿ ರಾಜಕೀಯ’ ಮಾಡುತ್ತಿರುವ ಸಣ್ಣ ಸಂಖ್ಯೆಯ ಬಲಾಢ್ಯ ಜಾತಿಗಳ ಅಸಲಿಯತ್ತು ಕೂಡ ಹೊರ ಬೀಳುತ್ತದೆ. ಸಮ ಸಮಾಜದ ಕನಸಿನ ಜೊತೆಗೆ ಲಿಂಗಾಯತ ಧರ್ಮ ಹುಟ್ಟಿಕೊಂಡಿತು. ಇದೀಗ ಅದೇ ಸಮುದಾಯ ಕೆಳಜಾತಿಯ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದು ಎಷ್ಟು ಸರಿ? ಇಂದು ಸರಕಾರದೊಳಗಿರುವ ಲಿಂಗಾಯತ, ಒಕ್ಕಲಿಗ ನಾಯಕರು ತಮ್ಮ ತಮ್ಮ ಸಮುದಾಯಕ್ಕೆ ಈ ವಿಷಯವನ್ನು ಮನವರಿಕೆ ಮಾಡಿ

ಕೊಡಬೇಕು. ಇದೇ ಸಂದರ್ಭದಲ್ಲಿ, ರಾಜ್ಯ ಸರಕಾರ ಜಾತಿ ಗಣತಿಯ ಅಂಗೀಕಾರದ ಕುರಿತಂತೆ ತನ್ನ ನಿರ್ಧಾರದಿಂದ ಯಾವ ಕಾರಣಕ್ಕೂ ಹಿಂದಕ್ಕೆ ಸರಿಯಬಾರದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News