ಪೆಟ್ರೋಲ್ ಬೆಲೆಯೇರಿಕೆ: ಎತ್ತಿಗೆ ಜ್ವರ-ಎಮ್ಮೆಗೆ ಬರೆ
ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಿಗೇ ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಳ ಮಾಡಿದೆ. ಪೆಟ್ರೋಲ್ ಪ್ರತೀ ಲೀಟರ್ಗೆ ಮೂರು ರೂ. ಹಾಗೂ ಡೀಸೆಲ್ ಲೀಟರ್ಗೆ 3.50 ರೂಪಾಯಿ ಹೆಚ್ಚಿಸಿದೆ. ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ಗೆ ರಾಜ್ಯದಲ್ಲಿ ನಿರೀಕ್ಷಿತ ಸ್ಥಾನಗಳು ದೊರಕದೇ ಇರುವುದನ ಪರಿಣಾಮ ಇದು ಎಂದು ವಿರೋಧ ಪಕ್ಷಗಳು ತಮ್ಮದೇ ದೃಷ್ಟಿಕೋನದಲ್ಲಿ ಬೆಲೆಯೇರಿಕೆಯನ್ನು ವ್ಯಾಖ್ಯಾನಿಸತೊಡಗಿವೆ. ಮತದಾರರ ಮೇಲೆ ಸರಕಾರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಒಬ್ಬರು ಹೇಳಿಕೆ ನೀಡಿದ್ದರೆ, ಖಜಾನೆ ದಿವಾಳಿಯಾಗಿರುವುದನ್ನು ಇದು ಬಹಿರಂಗ ಪಡಿಸಿದೆ ಎಂದು ಇನ್ನೊಬ್ಬರು ಅರ್ಥ ಹಚ್ಚಿದ್ದಾರೆ. ಸರಕಾರ ರಚನೆಯಾದ ಒಂದು ವರ್ಷದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷಕ್ಕೆ ದಾಳಿ ನಡೆಸಲು ಒಂದು ಗಟ್ಟಿ ಅಸ್ತ್ರ ಸಿಕ್ಕಿದೆ. ಮುಳುಗುವವನಿಗೆ ಹುಲ್ಲುಕಡ್ಡಿ ಎಂಬಂತೆ ವಿರೋಧ ಪಕ್ಷದ ನಾಯಕರು ಈ ಕಡ್ಡಿಯನ್ನೀಗ ಗುಡ್ಡೆ ಮಾಡಲು ಹೊರಟಿದ್ದಾರೆ. ಈಗಾಗಲೇ ಬೆಲೆಯೇರಿಕೆಯ ವಿರುದ್ಧ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದು, ಸೋಮವಾರ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಒಂದು ಹುಲ್ಲುಕಡ್ಡಿ ಅಲುಗಾಡಿದರೂ ಅದಕ್ಕಾಗಿ ‘ಬಡವರಿಗೆ ಸರಕಾರ ನೀಡುತ್ತಿರುವ ಗ್ಯಾರಂಟಿ’ಯನ್ನು ವಿರೋಧ ಪಕ್ಷಗಳು ಹೊಣೆ ಮಾಡುತ್ತಾ ಬಂದಿವೆ. ಇದೀಗ ಪೆಟ್ರೋಲ್ ಬೆಲೆಯೇರಿಕೆಯಾಗುತ್ತಿದ್ದಂತೆಯೇ, ಅದನ್ನು ಖಂಡಿಸುವ ಹೆಸರಿನಲ್ಲಿ ಮತ್ತೆ ಗ್ಯಾರಂಟಿಗಳ ಮೇಲೆ ವಿರೋಧ ಪಕ್ಷ ನಾಯಕರು ಮುಗಿ ಬಿದ್ದಿದ್ದಾರೆ. ಗ್ಯಾರಂಟಿಗಳಿಂದಾಗಿ ಸರಕಾರ ದಿವಾಳಿಯಾಗುತ್ತಿದೆ ಎನ್ನುವುದನ್ನು ಅವರು ಮತ್ತೆ ಪ್ರತಿಪಾದಿಸತೊಡಗಿದ್ದಾರೆ. ಉಚಿತ ಗ್ಯಾರಂಟಿಗಳನ್ನು ಯಾವುದೇ ವಿದೇಶಿ ಶಕ್ತಿಗಳಿಗೆ ಅಥವಾ ಹೊರ ರಾಜ್ಯದ ಜನರಿಗೆ ನೀಡಲಾಗುತ್ತಿದೆ ಎನ್ನುವಂತಿದೆ ಅವರ ವರ್ತನೆ. ವಿದೇಶಿ ಬಂಡವಾಳಹೂಡಿಕೆದಾರರಿಗೆ, ಬೃಹತ್ ಕಾರ್ಪೊರೇಟ್ ಶಕ್ತಿಗಳಿಗೆ ಸರಕಾರ ನೀಡುತ್ತಾ ಬಂದಿರುವ ಉಚಿತಗಳಿಗೆ ಹೋಲಿಸಿದರೆ, ಇದೀಗ ತನ್ನದೇ ರಾಜ್ಯದ ಮಧ್ಯಮವರ್ಗಕ್ಕೆ ಸರಕಾರ ನೀಡುತ್ತಿರುವ ಸವಲತ್ತು ಏನೇನೂ ಅಲ್ಲ. ಜನರು ನೀಡುತ್ತಿರುವ ಪರೋಕ್ಷ ತೆರಿಗೆಯನ್ನು ಅವರಿಗೇ ಮರಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಈ ನಾಡಿನ ನೆಲ ಜಲದ ಸಕಲ ಪ್ರಯೋಜನ ಪಡೆದು, ಸರಕಾರದಿಂದ ವಿವಿಧ ಸಬ್ಸಿಡಿಗಳನ್ನು ದೋಚಿ ಈ ಕಾರ್ಪೊರೇಟ್ ಸಂಸ್ಥೆಗಳು ಪ್ರತಿಯಾಗಿ ನೀಡಿದ್ದು ಏನೇನೂ ಇಲ್ಲ.
ಇಷ್ಟಕ್ಕೂ ಈ ಉಚಿತ ಗ್ಯಾರಂಟಿಗಳು ವಿರೋಧ ಪಕ್ಷಗಳನ್ನು ಯಾಕೆ ಚುಚ್ಚುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಿಲ್ಲ. ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರಿಗೆ ಯಾವ ಉಚಿತಗಳನ್ನು ನೀಡದೆಯೂ ಖಜಾನೆಯನ್ನು ಲೂಟಿ ಮಾಡಲಾಗಿತ್ತು. ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಯೇನೂ ಇದ್ದಿರಲಿಲ್ಲ. ಬರ ಪರಿಹಾರ ನೀಡುವುದಕ್ಕೆ ಖಜಾನೆಯಲ್ಲಿ ಕಾಸಿಲ್ಲದೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಲವು ಬಾರಿ ದಿಲ್ಲಿಗೆ ಎಡತಾಗಿದ್ದರು. ಆದರೆ ಬಿಜೆಪಿ ಸಂಸದರು ಯಡಿಯೂರಪ್ಪ ಪರ ನಿಂತಿರಲಿಲ್ಲ. ಒಂದು ವೇಳೆ ಈ ಗ್ಯಾರಂಟಿಗಳನ್ನು ನೀಡಿಯೂ ಕಾಂಗ್ರೆಸ್ ಸರಕಾರ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದರೆ, ಈ ಹಿಂದಿನ ಸರಕಾರಕ್ಕೆ ಇದು ಯಾಕೆ ಸಾಧ್ಯವಾಗಿರಲಿಲ್ಲ? ಎನ್ನುವ ಪ್ರಶ್ನೆಯೇಳುತ್ತದೆ. ಅಷ್ಟೇ ಅಲ್ಲ, ಉಚಿತವಾಗಿ ಮಹಿಳೆಯರಿಗೆ ಬಸ್ ಪ್ರಯಾಣ, ಉಚಿತ ವಿದ್ಯುತ್ ಇವೆಲ್ಲವನ್ನು ನೀಡಲು ಸಾಧ್ಯ ಎಂದಾದರೆ, ಈ ಜನರ ಹಣವನ್ನು ಹಿಂದಿನ ಸರಕಾರ ಏನು ಮಾಡಿತ್ತು? ಎನ್ನುವ ಪ್ರಶ್ನೆಯನ್ನು ಜನರು ಕೇಳ ತೊಡಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಜನಸಾಮಾನ್ಯರಿಗೆ ನೀಡುತ್ತಿದ್ದ ಎಲ್ಲ ಸಬ್ಸಿಡಿಗಳನ್ನು ಕಿತ್ತುಕೊಂಡರೂ ಮೋದಿ ಸರಕಾರಕ್ಕೆ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಹೀಗಿರುವಾಗ, ಈ ಉಚಿತ ಗ್ಯಾರಂಟಿಗಳು ಮೋದಿಗೆ ಹಾಕಿದ ಬಹುದೊಡ್ಡ ಸವಾಲು ಎನ್ನುವ ಆತಂಕವೂ ಬಿಜೆಪಿ ನಾಯಕರಿಗಿದೆ. ಈ ಗ್ಯಾರಂಟಿ ಯಶಸ್ವಿಯಾದರೆ, ಅದು ಪರೋಕ್ಷವಾಗಿ ಪ್ರಧಾನಿ ಮೋದಿ ವರ್ಚಸ್ಸಿಗೆ ಬಹಳಷ್ಟು ಧಕ್ಕೆಯನ್ನುಂಟು ಮಾಡುತ್ತದೆ. ಈ ಕಾರಣದಿಂದ ಗ್ಯಾರಂಟಿ ಯೋಜನೆಗಳನ್ನು ಹೇಗಾದರೂ ಮಾಡಿ ಸ್ಥಗಿತಗೊಳ್ಳುವಂತೆ ಮಾಡಬೇಕಾಗಿದೆ. ಆದುದರಿಂದ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದಂತೆಯೇ, ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಸರಕಾರ ನೀಡಿರುವ ಉಚಿತ ಗ್ಯಾರಂಟಿಗಳು ಎಂದು ಹುಯಿಲೆಬ್ಬಿಸ ತೊಡಗಿದ್ದಾರೆ. ಇವರು ಪರೋಕ್ಷವಾಗಿ ಬೀದಿಗಿಳಿದಿರುವುದು ಗ್ಯಾರಂಟಿಗಳ ವಿರುದ್ಧವೇ ಹೊರತು ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಅಲ್ಲ. ಇದೊಂದು ರೀತಿಯಲ್ಲಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಿದೆ.
ಗ್ಯಾರಂಟಿಯ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಜೊತೆಗೆ ಕೈ ಜೋಡಿಸಿರುವುದು ಅತ್ಯಂತ ವಿಪರ್ಯಾಸವಾಗಿದೆ. ರಾಜ್ಯ ಸರಕಾರದ ಮೇಲೆ ಆರ್ಥಿಕ ಹೊರೆ ಬೀಳಬೇಕು ಎನ್ನುವ ದೃಷ್ಟಿಯಿಂದಲೇ ಕೇಂದ್ರ ಸರಕಾರ ರಾಜ್ಯಕ್ಕೆ ನೀಡಲೇಬೇಕಾದ ಅನುದಾನಗಳಿಗೆ ಕತ್ತರಿ ಹಾಕುತ್ತಾ ಬಂದಿದೆ. ತನ್ನದೇ ಜಿಎಸ್ಟಿಹಣಕ್ಕಾಗಿ ಭಿಕ್ಷೆ ಬೇಡಬೇಕಾದ ಸ್ಥಿತಿ ರಾಜ್ಯದ್ದಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಪರವಾಗಿ ಬಿಜೆಪಿ ಸಂಸದರು ಕೇಂದ್ರದಲ್ಲಿ ಧ್ವನಿಯೆತ್ತಬೇಕಾಗಿತ್ತು. ಆದರೆ ಅವರು ರಾಜ್ಯದ ಜನರ ಹಿತಾಸಕ್ತಿಯನ್ನು ಬಲಿಕೊಟ್ಟು ಕೇಂದ್ರದ ವರಿಷ್ಠರಿಗೆ ‘ಛತ್ರಿ’ ಹಿಡಿಯುತ್ತಾ ಬಂದಿದ್ದಾರೆ. ಪೆಟ್ರೋಲ್ ಬೆಲೆಯೇರಿಕೆಯಲ್ಲಿ ಕೇಂದ್ರ ಸರಕಾರವೇನೂ ಹಿಂದೆ ಬಿದ್ದಿಲ್ಲ. ಕೊರೋನ ಕಾಲದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆಯಾದಾಗ ಅದರ ಸಂಪೂರ್ಣ ಲಾಭವನ್ನು ಕೇಂದ್ರ ಸರಕಾರ ತನ್ನದಾಗಿಸಿಕೊಂಡಿತ್ತು. ಪೆಟ್ರೋಲ್ ಬೆಲೆಯೇರಿಕೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗೆ ಅನುಸಾರವಾಗಿ ಅದು ನಿರ್ಧಾರವಾಗುತ್ತದೆ ಎಂದಿದ್ದ ಸರಕಾರವೇ ದೇಶದ ಜನತೆಗೆ ವಂಚನೆ ಮಾಡಿತ್ತು. ಈ ಸಂದರ್ಭದಲ್ಲಿ ಎಲ್ಲ ರಾಜ್ಯಗಳು ಇದರ ವಿರುದ್ಧ ಧ್ವನಿಯೆತ್ತಿದವು. ಆಗ ಬಾಯಿ ಮುಚ್ಚಿ ಕೂತಿದ್ದು ಮಾತ್ರವಲ್ಲ, ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದ ರಾಜ್ಯದ ಬಿಜೆಪಿ ನಾಯಕರು ಇದೀಗ ಪೆಟ್ರೋಲ್ ಬೆಲೆಯೇರಿಕೆಯ ಬಗ್ಗೆ ಆತಂಕದ ಮಾತುಗಳನ್ನಾಡುತ್ತಿರುವುದು ತಮಾಷೆಯಾಗಿದೆ.
ಇದೇ ಸಂದರ್ಭದಲ್ಲಿ ಅನಿರೀಕ್ಷಿತ ಪೆಟ್ರೋಲ್ ಬೆಲೆಯೇರಿಕೆಯ ಬಗ್ಗೆ ರಾಜ್ಯ ಸರಕಾರದ ಸಮರ್ಥನೆ ಬಾಲಿಶವಾಗಿದೆ. ‘‘ರಾಜ್ಯ ಸರಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.29.84ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.18.44ಕ್ಕೆ ಹೆಚ್ಚಳ ಮಾಡಿದೆ. ಈ ಏರಿಕೆಯ ನಂತರವೂ ಕರ್ನಾಟಕವು ತೈಲೋತ್ಪ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ’’ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ನೆರೆಯ ಪಾಕಿಸ್ತಾನದ ಆರ್ಥಿಕತೆಯ ಕಡೆಗೆ ಬೆಟ್ಟು ಮಾಡಿ, ಭಾರತದ ಆರ್ಥಿಕ ಕುಸಿತವನ್ನು ಪ್ರಧಾನಿ ಮೋದಿ ಸಮರ್ಥಿಸಿದಂತೆಯೇ ಇದು ಕೂಡ. ಕರ್ನಾಟಕದ ಆಡಳಿತ ಇಡೀ ದೇಶಕ್ಕೆ ಮಾದರಿ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ಬೇರೆ ರಾಜ್ಯಗಳ ಪೆಟ್ರೋಲ್ ದರವನ್ನು ತೋರಿಸಿ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವುದು ಯಾವರೀತಿಯಲ್ಲೂ ಸರಿಯಾದ ಕ್ರಮವಲ್ಲ. ಇದೊಂದು ರೀತಿಯಲ್ಲಿ, ಗ್ಯಾರಂಟಿಯ ಮೂಲಕ ಜನತೆಗೆ ನೀಡಿದ ಉಚಿತವನ್ನು ವಾಮಮಾರ್ಗದಲ್ಲಿ ಕಿತ್ತುಕೊಂಡಂತೆಯೇ ಸರಿ. ಈ ಭಾಗ್ಯಕ್ಕೆ ಉಚಿತ ಗ್ಯಾರಂಟಿಗಳನ್ನು ಯಾಕೆ ನೀಡಬೇಕಾಗಿತ್ತು ಎನ್ನುವ ಬಿಜೆಪಿಯ ನಾಯಕರ ಮಾತುಗಳಿಗೆ ಬಲ ನೀಡಿದಂತೆ ಆಗುತ್ತದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಬೇಕಾಗಿದೆ ಎಂದಾದರೆ, ಅದಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳ ಮೇಲೆ, ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಅವಕಾಶ ಸರಕಾರಕ್ಕಿತ್ತು. ಇದೇ ಸಂದರ್ಭದಲ್ಲಿ ಸರಕಾರದೊಳಗಿನ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಿ, ಸೋರಿಕೆಯನ್ನು ತಪ್ಪಿಸುವುದರ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬಹುದಾಗಿತ್ತು. ಇದೀಗ ಅನಿರೀಕ್ಷಿತ ಪೆಟ್ರೋಲ್ ಬೆಲೆಯೇರಿಕೆೆ ಇತರೆಲ್ಲ ಕ್ಷೇತ್ರಗಳ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆಗಳಿವೆ. ಗ್ಯಾರಂಟಿ ಯೋಜನೆಯಿಂದ ಮುರಿದ ಬದುಕನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಮಧ್ಯಮ ವರ್ಗಕ್ಕೆ ಈ ಪೆಟ್ರೋಲ್ ಬೆಲೆಯೇರಿಕೆೆ ಒಂದು ಅನಿರೀಕ್ಷಿತ ಆಘಾತ ಎನ್ನುವುದರಲ್ಲಿ ಎರಡು ಮಾತಿಲ್ಲ.