ಬಹಿರಂಗವಾಗುತ್ತಿರುವ ರಾಜಕಾರಣಿಗಳ ‘ಬಂಡವಾಳ’
ಮೋದಿಯವರು ದೇಶದ ಪ್ರಧಾನಿಯಾದ ಇಷ್ಟು ವರ್ಷಗಳಲ್ಲಿ ದೇಶ ಶ್ರೀಮಂತವಾಗದೇ ಇದ್ದರೂ ಬಿಜೆಪಿ ವಿಶ್ವದಲ್ಲೇ ಅತಿ ಶ್ರೀಮಂತ ಪಕ್ಷವಾಗಿ ಹೊರ ಹೊಮ್ಮಿದೆ. ನೋಟು ನಿಷೇಧದ ಬಳಿಕ ನಿರೀಕ್ಷಿಸಿದ ಕಪ್ಪು ಹಣ ಬಹಿರಂಗವಾಗದೇ ಇದ್ದುದು ಮತ್ತು ಬಿಜೆಪಿಯ ಸಂಪತ್ತು ಏಕಾಏಕಿ ಹೆಚ್ಚಳವಾದದ್ದು ಕಾಕತಾಳೀಯವಂತೂ ಅಲ್ಲ. ಇದೀಗ ಚುನಾವಣಾ ಬಾಂಡನ್ನು ಅಕ್ರಮವೆಂದು ಸುಪ್ರೀಂಕೋರ್ಟ್ ಘೋಷಿಸಿದ ದಿನದಿಂದ ಬಿಜೆಪಿಯ ಇನ್ನಷ್ಟು ‘ಬಂಡವಾಳ’ಗಳು ಹೊರ ಬೀಳುತ್ತಿವೆ. ಹೇಗೆ ಕೇಂದ್ರ ಸರಕಾರ ಕೆಲವು ಸಂಸ್ಥೆಗಳ ಅಕ್ರಮಗಳನ್ನು ಮುಂದಿಟ್ಟು ಬೆದರಿಸಿ ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿಯ ಖಜಾನೆಯನ್ನು ತುಂಬಿಸಿಕೊಂಡಿತು ಎನ್ನುವುದು ಹೊರ ಬೀಳುತ್ತಿವೆ. ಕೇಂದ್ರ ಸರಕಾರದ ವಿವಿಧ ತನಿಖಾ ಸಂಸ್ಥೆಗಳಿಂದ ತನಿಖೆ, ದಾಳಿಗೊಳಗಾಗಿದ್ದ 30ಕ್ಕೂ ಅಧಿಕ ಕಂಪೆನಿಗಳು ಬಿಜೆಪಿಗೆ ಚುನಾವಣಾ ಬಾಂಡ್ ಹೆಸರಿನಲ್ಲಿ ಭಾರೀ ದೇಣಿಗೆಗಳನ್ನು ನೀಡಿರುವುದನ್ನು ಮಾಧ್ಯಮಗಳು ಬಹಿರಂಗಗೊಳಿಸಿವೆ. ಚುನಾವಣಾ ಬಾಂಡ್‌ನ ಹೆಸರಿನಲ್ಲಿ ಉಳಿದೆಲ್ಲಾ ಪಕ್ಷಗಳಿಂದ ಹಲವು ಪಟ್ಟು ಹೆಚ್ಚು ದೇಣಿಗೆಗಳನ್ನು ಸ್ವೀಕರಿಸಿರುವುದು ಬಿಜೆಪಿ. 2022-23ರ ಪಕ್ಷಗಳ ಆದಾಯವನ್ನು ತುಲನೆ ಮಾಡಿದರೆ ಬಿಜೆಪಿಯು ಭಾರತೀಯ ಕಂಪೆನಿಗಳಿಂದ ನೂರು ರೂಪಾಯಿ ಸ್ವೀಕರಿಸಿದರೆ, ಕಾಂಗ್ರೆಸ್ ಸ್ವೀಕರಿಸಿದ್ದು ಬರೇ 19 ಪೈಸೆ ಮತ್ತು ಈ ದೇಣಿಗೆಯನ್ನು ಬಿಜೆಪಿಯು ಕೇಂದ್ರ ಸರಕಾರದ ಬಲದಿಂದಲೇ ತನ್ನದಾಗಿಸಿಕೊಂಡಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕೆಲವೊಮ್ಮೆ ತನಿಖಾ ಸಂಸ್ಥೆಗಳ ದಾಳಿಗಳಿಗೆ ಬೆದರಿ ಈ ಕಂಪೆನಿಗಳು ಬಿಜೆಪಿಗೆ ದೇಣಿಗೆಗಳನ್ನು ನೀಡಿರುವ ಸಾಧ್ಯತೆಗಳಿವೆ. ಹಾಗೆಯೇ, ತಮ್ಮ ಅಕ್ರಮಗಳನ್ನು ತನಿಖಾ ಸಂಸ್ಥೆಗಳು ಬಹಿರಂಗ ಪಡಿಸದಂತೆ ಅವುಗಳ ಬಾಯಿ ಮುಚ್ಚಿಸುವುದಕ್ಕಾಗಿಯೂ ಕೇಂದ್ರ ಸರಕಾರಕ್ಕೆ ದೇಣಿಗೆಗಳನ್ನು ನೀಡಿರುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ, ತಮ್ಮ ದೇಣಿಗೆಗಳ ಮೂಲಕವೇ ಸರಕಾರದಿಂದ ನೇರ ಪ್ರಯೋಜನಗಳನ್ನು ಪಡೆದುಕೊಂಡಿರುವ ಕಂಪೆನಿಗಳ ಪಟ್ಟಿ ಬೇರೆಯೇ ಇದೆ. ಮುಂದಿನ ದಿನಗಳಲ್ಲಿ ಆ ವಿವರಗಳೂ ಒಂದೊಂದಾಗಿ ಹೊರ ಬೀಳುವ ಸಾಧ್ಯತೆಗಳಿವೆ.
ಮಧ್ಯ ಪ್ರದೇಶ ಮೂಲದ ಜೆ.ಕೆ. ಅರೋರಾ ಮತ್ತು ಎ.ಕೆ. ಅರೋರಾ ಒಡೆತನದ ಸೋಮ್ ಡಿಸ್ಟಿಲ್ಲರಿಸ್ 2018-19ರಲ್ಲಿ ನಾಲ್ಕು ಕೋಟಿ ರೂಪಾಯಿಗೂ ಅಧಿಕ ದೇಣಿಗೆಯನ್ನು ನೀಡಿತ್ತು. 2020ರಲ್ಲಿ ಜಿಎಸ್‌ಟಿ ಗುಪ್ತಚರ ಅಧಿಕಾರಿಗಳು ಅರೋರ ಸೋದರರನ್ನು ಬಂಧಿಸಿದರು. ಅವರು ಸುಮಾರು ಎಂಟು ಕೋಟಿ ರೂಪಾಯಿ ತೆರಿಗೆ ವಂಚನೆಯನ್ನು ಮಾಡಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದರು. ಪ್ರಕರಣ ಎಷ್ಟು ಗಂಭೀರವಾಗಿತ್ತು ಎಂದರೆ ಎರಡು ಬಾರಿ ಅವರಿಗೆ ಜಾಮೀನು ತಿರಸ್ಕರಿಸಲಾಗಿತ್ತು. ಆ ದರೆ ಮೂರನೇ ಬಾರಿ ಜಾಮೀನು ದೊರಕಿತು. ವಿಪರ್ಯಾಸವೆಂದರೆ ಈ ಜಾಮೀನು ಪಡೆದ ಹತ್ತೇ ದಿನಗಳಲ್ಲಿ ಕಂಪೆನಿ ಬಿಜೆಪಿಗೆ ಒಂದು ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿತು. ಅದೇ ಹಣಕಾಸು ವರ್ಷದಲ್ಲಿ ಮತ್ತೆ ಒಂದು ಕೋಟಿ ರೂಪಾಯಿಯನ್ನು ಎರಡು ಕಂತುಗಳಲ್ಲಿ ನೀಡಿತ್ತು. ಮೇ 2021ರಲ್ಲಿ ಮತ್ತೆ ಎರಡು ಕೋಟಿ ರೂಪಾಯಿಯನ್ನು ಬಿಜೆಪಿಗೆ ದೇಣಿಗೆಯಾಗಿ ಕೊಟ್ಟಿತ್ತು. 2022ರ ಜೂನ್‌ನಲ್ಲಿ ಬಿಜೆಪಿಗೆ ಇನ್ನೂ ಒಂದು ಕೋಟಿ ರೂಪಾಯಿ ಸಂದಾಯವಾಯಿತು. ಇವೆಲ್ಲವೂ ಚುನಾವಣಾ ಬಾಂಡ್ ಹೆಸರಿನಲ್ಲಿ ಮಾನ್ಯತೆಯನ್ನು ಪಡೆಯಿತು. ಆದರೆ ನಿಜಕ್ಕೂ ಈ ಸಂಸ್ಥೆ ದೇಣಿಗೆಯನ್ನು ನೀಡುವ ಮೂಲಕವೇ ಜಾಮೀನನ್ನು ಪಡೆದುಕೊಂಡಿತು ಎನ್ನುವ ಆರೋಪಗಳಿವೆ. ತನಿಖಾ ಸಂಸ್ಥೆಗಳು ಕ್ರಮ ತೆಗೆದುಕೊಳ್ಳದಂತೆ ನೆರವು ಪಡೆಯುವುದಕ್ಕಾಗಿ ಸರಕಾರಕ್ಕೆ ಈ ಸಂಸ್ಥೆ ಪರೋಕ್ಷವಾಗಿ ತನ್ನ ಹಪ್ತಾವನ್ನು ಒಪ್ಪಿಸುತ್ತಿತ್ತು ಎಂದು ಮಾಧ್ಯಮಗಳು ಇದನ್ನು ವಿಶ್ಲೇಷಿಸಿವೆ. ವಿಪರ್ಯಾಸವೆಂದರೆ, ದೇಶದ ಸುಮಾರು 30 ಕಂಪೆನಿಗಳು ಇದೇ ರೀತಿ ತನಿಖಾ ಸಂಸ್ಥೆಗಳಿಂದ ದಾಳಿಯನ್ನು, ತನಿಖೆಯನ್ನು ಎದುರಿಸುವ ಮೊದಲು ಮತ್ತು ಬಳಿಕ ಬಿಜೆಪಿಯ ಚುನಾವಣಾ ಬಾಂಡನ್ನು ಖರೀದಿಸಿವೆ.
ಹೀಗೆ ಬಿಜೆಪಿಯನ್ನು ಅತ್ಯಂತ ಶ್ರೀಮಂತವಾಗಿಸಲು ಹಗಲು ರಾತ್ರಿ ದುಡಿಯುತ್ತಿರುವ ಕೇಂದ್ರ ಸರಕಾರದ ಜೊತೆಗೆ ರಾಜ್ಯಗಳು ತನ್ನ ಹಕ್ಕಿನ ಹಣವನ್ನು ಕೇಳಿದರೆ ಅದು ತಪ್ಪಾಗುವುದಾದರೂ ಹೇಗೆ? ಕನಿಷ್ಠ ಕರ್ನಾಟಕ ರಾಜ್ಯಕ್ಕೆ ಬರಬೇಕಾಗಿರುವ ಹಕ್ಕಿನ ಹಣದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಸಂಸದರು ಕರ್ನಾಟಕದ ಪರವಾಗಿ ಮಾತನಾಡುವುದು ಕರ್ತವ್ಯವಾಗಿದೆ. ಬೇಕಾದಲ್ಲಿ ಬಿಜೆಪಿಯ ಸಂಸದರೇ ಒಂದಾಗಿ, ಕೇಂದ್ರ ಸರಕಾರದೊಂದಿಗೆ ಖಾಸಗಿ ಮಾತುಕತೆ ನಡೆಸಿ ಈ ಬಗ್ಗೆ ಒತ್ತಡ ಹೇರುವ ಅವಕಾಶವಿದೆ. ಆದರೆ ಇಂದು ಬಿಜೆಪಿ ಸಂಸದರು ‘‘ಕರ್ನಾಟಕಕ್ಕೆ ತೆರಿಗೆ ಹಣ ಬರಬೇಕಾಗಿಲ್ಲ’’ ಎನ್ನುವ ಋಣಾತ್ಮಕ ಮಾತುಗಳನ್ನು ಆಡುತ್ತಾ, ಕೇಂದ್ರ ಸರಕಾರಕ್ಕೆ ಧೈರ್ಯವನ್ನು ತುಂಬುತ್ತಿದ್ದಾರೆ. ವಿಪರ್ಯಾಸವೆಂದರೆ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಎಷ್ಟು ಶ್ರೀಮಂತವಾಗಿದೆಯೋ, ಅಷ್ಟೇ ಪ್ರಮಾಣದಲ್ಲಿ ಈ ರಾಜ್ಯದ ಬಿಜೆಪಿ ಸಂಸದರೂ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಆಯ್ಕೆಯಾಗುತ್ತಿರುವ ಈ ಸಂಸದರ ಆಸ್ತಿ ಹಲವು ಪಟ್ಟು ಹೆಚ್ಚಳವಾಗಿವೆ. ಒಟ್ಟಾರೆ ಆಸ್ತಿ 35 ಕೋಟಿ ರೂಪಾಯಿಯಿಂದ 402 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎನ್ನುವ ಅಂಶವನ್ನು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಸಂಸತ್‌ನಲ್ಲಿ ಬಾಯಿ ತೆರೆಯದ ಅನಂತಕುಮಾರ್ ಹೆಗಡೆಯವರು ಸಾರ್ವಜನಿಕ ವೇದಿಕೆಗಳಲ್ಲಿ ದ್ವೇಷ ಭಾಷಣವನ್ನು ಉಗುಳುತ್ತಾರೆ. ರಾಷ್ಟ್ರೀಯತೆ, ಹಿಂದೂ ಧರ್ಮವೆಂದು ಬೊಬ್ಬಿರಿಯುತ್ತಾರೆ. ಆದರೆ ಇವರ ಸಂಪತ್ತು 6,928 ಶೇ. ದಷ್ಟು ಏರಿಕೆಯಾಗಿದೆ ಎಂದು ವರದಿ ಹೇಳುತ್ತದೆ. ವಿಪರ್ಯಾಸವೆಂದರೆ ಹೀಗೆ ಸಂಪತ್ತನ್ನು ಹೆಚ್ಚಿಸಿಕೊಂಡಿರುವ ಇವರು ಸಂಸತ್‌ನಲ್ಲಿ ಪ್ರಶ್ನೆಯನ್ನೇ ಕೇಳದ ಸಂಸದರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸಂಸತ್‌ನಲ್ಲಿ ಕರ್ನಾಟಕದ ಪರವಾಗಿ ಪ್ರಶ್ನೆಯನ್ನು ಕೇಳಿದರೆ ಅದರಿಂದ ಕೇಂದ್ರದ ವರಿಷ್ಠರಿಗೆ ಇರಿಸು ಮುರಿಸಾಗಬಹುದು ಎನ್ನುವುದು ಇವರ ಭಯ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಪರವಾಗಿ ಧ್ವನಿಯೆತ್ತಿದರೆ, ಮುಂದಿನ ಚುನಾವಣೆಯಲ್ಲಿ ವರಿಷ್ಠರು ಟಿಕೆಟ್ ನೀಡದಿರುವ ಸಾಧ್ಯತೆಗಳಿವೆ ಎನ್ನುವ ಆಂತಕವೂ ಇವರಿಗಿದೆ.
ದೇಶವನ್ನು ಬಲಿಕೊಟ್ಟು ಬಿಜೆಪಿ ಮತ್ತು ಆರೆಸ್ಸೆಸ್‌ನ್ನು ಶ್ರೀಮಂತವಾಗಿಸಲು ಕರ್ನಾಟಕದ ಜನತೆ ತೆರಿಗೆ ಕಟ್ಟಬೇಕೆ ಎನ್ನುವ ಪ್ರಶ್ನೆಯನ್ನು ರಾಜ್ಯದ ಜನತೆ ಕೇಳುತ್ತಿದ್ದಾರೆ. ಜನಸಾಮಾನ್ಯರು ಸಾಲಸೋಲಗಳಿಂದ ಕಂಗೆಟ್ಟು ನಿಂತಿರುವಾಗ ಬಿಜೆಪಿ ಸಂಸದರು ತಮ್ಮ ಸಂಪತ್ತನ್ನು ಹಲವು ಪಟ್ಟು ಹೆಚ್ಚಿಸಿಕೊಂಡು ಕರ್ನಾಟಕದ ವಿರುದ್ಧ ಮಾತನಾಡುತ್ತಿದ್ದಾರೆ. ಕರ್ನಾಟಕಕ್ಕೆ ಸಲ್ಲಬೇಕಾದ ಹಕ್ಕಿನ ತೆರಿಗೆ ಹಣ ಬರದಂತೆ ತಡೆಗೋಡೆಯಾಗಿ ನಿಂತಿದ್ದಾರೆ ಮಾತ್ರವಲ್ಲ, ಜನರಿಗೆ ನೀಡಿದ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಹೆಸರಿನಲ್ಲಿ, ಅಮಿತ್ ಶಾ ಹೆಸರಿನಲ್ಲಿ, ರಾಮ ಮಂದಿರದ ಹೆಸರಿನಲ್ಲಿ ಮತ ಯಾಚಿಸಿ ಗೆಲ್ಲಬಹುದು ಎನ್ನುವ ಧೈರ್ಯ ಇವರಿಗೆ ಇರುವಂತಿದೆ. ಆದುದರಿಂದಲೇ ಕರ್ನಾಟಕಕ್ಕೆ ಸಲ್ಲಬೇಕಾದ ತೆರಿಗೆಯ ಹಕ್ಕಿನ ಹಣವನ್ನು ಕೇಳುವ ಸಂದರ್ಭದಲ್ಲಿ ಇವರು ಕರ್ನಾಟಕದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನರಿಗೆ ಗ್ಯಾರಂಟಿಗಳನ್ನು ನೀಡುವುದು ಇವರಿಗೆ ಬೇಡವಾಗಿದೆ. ಈ ಅನ್ಯಾಯವನ್ನು ಜನತೆ ಸಂಘಟಿತರಾಗಿ ಪ್ರಶ್ನಿಸಬೇಕಾಗಿದೆ.
ಕರ್ನಾಟಕದ ಹಿತಾಸಕ್ತಿಯೇ ಈ ಬಾರಿಯ ಲೋಕಸಭಾ ಚುನಾವಣೆಯ ವಿಷಯವಾಗಬೇಕಾಗಿದೆ. ರಾಜಕೀಯ ನಾಯಕರ ‘ಬಂಡವಾಳ’ ಈ ಚುನಾವಣೆಯ ಫಲಿತಾಂಶದಲ್ಲಿ ಬಹಿರಂಗವಾಗಬೇಕಾಗಿದೆ.