ನೇಶನ್ಸ್ ಲೀಗ್ | ಫಿನ್‌ಲ್ಯಾಂಡ್ ವಿರುದ್ಧ ಅವಳಿ ಗೋಲು ಗಳಿಸಿ 100ನೇ ಪಂದ್ಯ ಸ್ಮರಣೀಯವಾಗಿಸಿಕೊಂಡ ಹ್ಯಾರಿ ಕೇನ್

Update: 2024-09-11 20:12 IST
ನೇಶನ್ಸ್ ಲೀಗ್ | ಫಿನ್‌ಲ್ಯಾಂಡ್ ವಿರುದ್ಧ ಅವಳಿ ಗೋಲು ಗಳಿಸಿ 100ನೇ ಪಂದ್ಯ ಸ್ಮರಣೀಯವಾಗಿಸಿಕೊಂಡ ಹ್ಯಾರಿ ಕೇನ್

ಹ್ಯಾರಿ ಕೇನ್ | PC : X  \ @HKane

  • whatsapp icon

ಲಂಡನ್ : ಫಿನ್‌ಲ್ಯಾಂಡ್ ವಿರುದ್ಧ ವೆಂಬ್ಲಿಯಲ್ಲಿ ಮಂಗಳವಾರ ನಡೆದ ನೇಶನ್ಸ್ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ಫುಟ್ಬಾಲ್ ತಂಡ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ. ಇಂಗ್ಲೆಂಡ್ ಪರ ತಾನಾಡಿದ 100ನೇ ಪಂದ್ಯದ ದ್ವಿತೀಯಾರ್ಧದಲ್ಲಿ ಅವಳಿ ಗೋಲುಗಳನ್ನು ಗಳಿಸಿದ ನಾಯಕ ಹ್ಯಾರಿ ಕೇನ್ ತನ್ನ ಶತಕದ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಕೇನ್ ಅವರು 57ನೇ ನಿಮಿಷದಲ್ಲಿ ಟ್ರೆಂಟ್ ಅಲೆಕ್ಸಾಂಡರ್-ಅರ್ನಾಲ್ಡ್ ಪಾಸ್ ನೆರವಿನಿಂದ ಮೊದಲ ಗೋಲು ಗಳಿಸಿದರು. ಆ ನಂತರ 76ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ವೇಯ್ನ್ ರೂನಿ ಹಾಗೂ ಬಾಬಿ ಚಾರ್ಲ್‌ಟನ್ ನಂತರ ರಾಷ್ಟ್ರೀಯ ತಂಡದ ಪರ ಆಡಿರುವ 100ನೇ ಪಂದ್ಯದಲ್ಲಿ ಗೋಲು ಗಳಿಸಿದ ಇಂಗ್ಲೆಂಡ್‌ನ ಮೂರನೇ ಆಟಗಾರನೆಂಬ ಹಿರಿಮೆಗೆ ಹ್ಯಾರಿ ಕೇನ್ ಪಾತ್ರರಾದರು.

ಇಂಗ್ಲೆಂಡ್ ಪರ 100ನೇ ಪಂದ್ಯವನ್ನು ಆಡಿರುವ 31ರ ಹರೆಯದ ಹ್ಯಾರಿ ಕೇನ್ ಅವರು ಡೇವಿಡ್ ಬೆಕ್‌ಹ್ಯಾಮ್ ಹಾಗೂ ಬಾಬ್ಬಿ ಮೂರ್ ಅವರನ್ನೊಳಗೊಂಡ 10 ಆಟಗಾರರ ಇಲೈಟ್ ಗ್ರೂಪ್‌ಗೆ ಸೇರ್ಪಡೆಯಾದರು.

ಸದ್ಯ ಬೇಯರ್ನ್ ಮ್ಯೂನಿಚ್ ಫುಟ್ಬಾಲ್ ಕ್ಲಬ್ ಪರ ಆಡುತ್ತಿರುವ ಕೇನ್ ಅವರು ವೇಯ್ನ್ ರೂನಿ(120 ಪಂದ್ಯಗಳು)ಹಾಗೂ ಗೋಲ್‌ಕೀಪರ್ ಪೀಟರ್ ಶಿಲ್ಟನ್ ಅವರ ದಾಖಲೆ(125 ಪಂದ್ಯಗಳು)ಯನ್ನು ಮುರಿಯುವ ಹಾದಿಯಲ್ಲಿದ್ದಾರೆ.

2023ರ ಮಾರ್ಚ್‌ನಲ್ಲಿ ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಎನಿಸಿಕೊಂಡಿರುವ ಕೇನ್ ಅವರು ತನ್ನ ಅಂತರ್ರಾಷ್ಟ್ರೀಯ ಗೋಲುಗಳ ಸಂಖ್ಯೆಯನ್ನು 68ಕ್ಕೆ ತಲುಪಿಸಿದ್ದಾರೆ.

ಇತ್ತೀಚೆಗೆ ವೃತ್ತಿಬದುಕಿನಲ್ಲಿ 901ನೇ ಗೋಲು ಗಳಿಸಿರುವ ಪೋರ್ಚುಗಲ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಎನ್‌ಎಫ್‌ಎಲ್ ಆಟಗಾರ ಟಾಮ್ ಬ್ರಾಡಿ ಅವರಿಂದ ಸ್ಫೂರ್ತಿ ಪಡೆದಿರುವ ಕೇನ್ ಹೊಸ ದಾಖಲೆ ನಿರ್ಮಿಸುವುದನ್ನು ಮುಂದುವರಿಸಿದ್ದಾರೆ.

ಚಿನ್ನದ ಬೂಟ್‌ಗಳನ್ನು ಧರಿಸಿ ತನ್ನ ಇಬ್ಬರು ಮಕ್ಕಳೊಂದಿಗೆ ಇಂಗ್ಲೆಂಡ್ ತಂಡವನ್ನು ಪಿಚ್‌ನೊಳಗೆ ಕರೆದೊಯ್ದ ಕೇನ್ ಅವರು ಈ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸಿಕೊಂಡರು. ಮಾಜಿ ಆಟಗಾರರಾದ ಫ್ರಾಂಕ್ ಲ್ಯಾಂಪಾರ್ಡ್ ಹಾಗೂ ಅಶ್ಲೆ ಕೋಲ್ ಅವರಿಂದ ಗೋಲ್ಡ್ ಕ್ಯಾಪ್ ಸ್ವೀಕರಿಸಿದರು.ಕೇನ್ ಅವರ ವೃತ್ತಿಪರತೆ ಹಾಗೂ ಸ್ಥಿರ ಪ್ರದರ್ಶನವನ್ನು ಇಂಗ್ಲೆಂಡ್‌ನ ಹಂಗಾಮಿ ಕೋಚ್ ಲೀ ಕಾರ್ಸ್ಲಿ ಶ್ಲಾಘಿಸಿದರು.

ಐರ್‌ಲ್ಯಾಂಡ್ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದ ನಂತರ ಇಂಗ್ಲೆಂಡ್ ಮತ್ತೊಂದು ಗೆಲುವು ದಾಖಲಿಸಿದೆ. ಕೋಚ್ ಆಗಿ ಕಾರ್ಸ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ತಂಡ ಯುರೋ 2024ರ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತ ನಂತರ ಮಾಜಿ ಮ್ಯಾನೇಜರ್ ಗರೆತ್ ಸೌತ್‌ಗೇಟ್ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News