ಬಿಡಿಎ ಮಾದರಿಯಲ್ಲಿ ಮುಡಾಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸಂಪುಟ ಅಸ್ತು?
ಬೆಂಗಳೂರು : ಬಿಡಿಎ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಪ್ರತ್ಯೇಕ ಕಾಯ್ದೆ ರಚನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ವಾರ ಅಧಿವೇಶನದಲ್ಲಿ ಬಿಲ್ ಮಂಡನೆಯಾಗಲಿದೆ ಎಂದು ತಿಳಿದು ಬಂದಿದೆ.
ಇದೂವರೆಗೂ ಮುಡಾ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರದ ಅಧೀನದಲ್ಲಿದ್ದತ್ತು. ಈಗ ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸರಕಾರ ಮುಂದಾಗಿದೆ.
12 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು 54.66 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪರಿಶಿಷ್ಟ ಪಂಗಡಗಳ 14 ವಿದ್ಯಾರ್ಥಿ ನಿಲಯಗಳಿಗೆ 72 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ-2024 ಹಾಗೂ ಕರ್ನಾಟಕ ಜಲಸಾರಿಗೆ ಅಭಿವೃದ್ಧಿ ನೀತಿ-2024ಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಎಸ್.ಎಂ.ಕೃಷ್ಣಗೆ ಮರಣೋತ್ತರ ಕರ್ನಾಟಕ ರತ್ನ? :
ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.