ʼಮುಡಾʼ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ | ತನಿಖಾ ವರದಿ ಬಂದ ಬಳಿಕ ತೀರ್ಮಾನ : ಸಿಎಂ ಸಿದ್ದರಾಮಯ್ಯ

Update: 2024-07-03 10:49 GMT

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆಗಿದೆಯೋ ಇಲ್ಲವೋ ಎಂದು ಪತ್ತೆ ಹಚ್ಚಲು ತನಿಖೆ ಮಾಡಲಾಗುತ್ತಿದ್ದು, ಎಲ್ಲಾ ನಿವೇಶನಗಳನ್ನು ಅಮಾನತ್ತಿನಲ್ಲಿಡಲಾಗಿದೆ. ಹಾಗಾಗಿ ಸರಕಾರಕ್ಕೆ ನಷ್ಟವಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂದು ಬಿಜೆಪಿ ಆರೋಪ ಮಾಡಿ, ಸಿಬಿಐಗೆ ಪ್ರಕರಣ ಹಸ್ತಾಂತರ ಮಾಡಲು ಒತ್ತಾಯಿಸಿರುವ ಬಗ್ಗೆ ಮಾತನಾಡಿದ ಅವರು, "ಎಲ್ಲವನ್ನೂ ಸಿಬಿಐಗೆ ಹಸ್ತಾಂತರಿಸಲು ಏಕೆ ಹೇಳುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು ಎಂದು ಪ್ರಶ್ನಿಸಿದರು. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ ಎಂದರು.

ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ :

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, "ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಅವರ ಕಾಲದಲ್ಲಿ ಅಕ್ರಮ ಸಕ್ರಮ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ಆರೋಪ ಕೇಳಿ ಬಂದಾಗ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಅದಕ್ಕೆ ರಾಜಿನಾಮೆ ಕೊಡಿ ಅಂದರೆ ಕೊಡುತ್ತಾರೆಯೇ" ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಅಕ್ರಮಗಳ ಬಗ್ಗೆ ತನಿಖೆ :

ವಾಲ್ಮೀಕಿ ನಿಗಮದ ಪ್ರಕರಣವನ್ನು ಎಸ್‍ಐಟಿಗೆ ವಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸಚಿವರಾಗಿದ್ದ ನಾಗೇಂದ್ರ ಅವರಿಂದ ರಾಜಿನಾಮೆ ಪಡೆಯಲಾಗಿದೆ. ಡೆತ್ ನೋಟಿನಲ್ಲಿ ಮಂತ್ರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಮೌಖಿಕ ಆದೇಶ ನೀಡಿದ್ದರು ಎಂದು ಬರೆದಿರುವ ಕಾರಣ ರಾಜಿನಾಮೆ ಪಡೆದೆವು. ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News