ಬಿಜೆಪಿಯಲ್ಲಿ ನಿಲ್ಲದ ಬಣ ರಾಜಕೀಯ | ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೇ ಸ್ಪರ್ಧಿಸುವೆ : ವಿಜಯೇಂದ್ರ

Update: 2025-01-31 20:42 IST
ಬಿಜೆಪಿಯಲ್ಲಿ ನಿಲ್ಲದ ಬಣ ರಾಜಕೀಯ | ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೇ ಸ್ಪರ್ಧಿಸುವೆ : ವಿಜಯೇಂದ್ರ

ಯತ್ನಾಳ್/ವಿಜಯೇಂದ್ರ

  • whatsapp icon

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಭುಗಿಲೆದ್ದಿರುವ ಬೆನ್ನಲ್ಲೇ ‘ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೇ ಸ್ಪರ್ಧೆ ಮಾಡಲಿದ್ದು, ಈ ಬಾರಿಯೂ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ’ ಎಂದು ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದರೆ, ‘ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತೇವೆ’ ಎಂದು ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಸದಾಶಿವನಗರದಲ್ಲಿನ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಯತ್ನಾಳ್ ಬಣದ ನಾಯಕರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಹೊಳಲ್ಕೆರೆ ಚಂದ್ರಪ್ಪ, ಮಾಜಿ ಸಂಸದರಾದ ಬಿ.ವಿ.ನಾಯಕ್, ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಇನ್ನಿತರರು ‘ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ’ ಸಂಬಂಧ ಸಮಾಲೋಚನೆ ನಡೆಸಿದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ‘ಬಿಜೆಪಿ ರಾಜ್ಯಾಧ್ಯಕ್ಷನಾಲು ನಾನು ಶೇ.100ಕ್ಕೆ ನೂರರಷ್ಟು ಸಿದ್ದನಿದ್ದೇನೆ. ಎರಡು ಹಂತದಲ್ಲಿ ಸಭೆ ನಡೆಯಲಿದ್ದು, ತಟಸ್ಥ ಗುಂಪು ಪರಿವರ್ತನೆಯಾಗಿ ಪಕ್ಷ ನಿಷ್ಠರ ಗುಂಪು ಆಗಿ ಬದಲಾಗುತ್ತಿದೆ. ಪಕ್ಷವನ್ನು ಉಳಿಸುವ ಗುಂಪು ದೊಡ್ಡದಾಗುತ್ತಿದೆ’ ಎಂದು ತಿಳಿಸಿದರು.

‘ವಿಜಯೇಂದ್ರ ಅಧ್ಯಕ್ಷತೆಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಇಳಿಸಬೇಕೆಂದು ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ.  ಸರ್ವಾಧಿಕಾರಿ ಮನಸ್ಥಿತಿಯ ನಾಯಕತ್ವವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಇದು ಅಂತ್ಯ ಆಗಲೇಬೇಕು. ಹೀಗಾಗಿ ನಾವು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸನ್ನದ್ಧವಾಗಿದ್ದೇವೆ’ ಎಂದು ಯತ್ನಾಳ್ ಗುಡುಗಿದರು.

ವಿಜಯೇಂದ್ರಗೆ ದುಡ್ಡಿನ ದುರಂಕಾರ ಇದೆ. ಮುಡಾ ಹಗರಣ ವಿಚಾರದಲ್ಲಿ ಸಿಎಂ ರಾಜೀನಾಮೆ ಕೇಳಿ ಪಾದಯಾತ್ರೆ ಮಾಡಿದ್ದು, ಮೈಸೂರು ತಲುಪುವ ವೇಳೆಗೆ ರಾಜೀನಾಮೆ ನೀಡಬೇಕು ಎಂದು ವಿಜಯೇಂದ್ರ ಹೇಳಿದ್ದ. ಸಿದ್ದರಾಮಯ್ಯ ಮತ್ತು ಇವರದ್ದು ಎಲ್ಲ ಹೊರಗೆ ಬರಬೇಕು ಎಂದು ವಾಗ್ದಾಳಿ ನಡೆಸಿದರು.

ನಡ್ಡಾ ಭೇಟಿ: ಈ ಮಧ್ಯೆ ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ವಕ್ಫ್‌ಗೆ ಸಂಬಂಧಿಸಿದ ವರದಿಯೊಂದನ್ನು ಸಲ್ಲಿಕೆ ಮಾಡಿದ್ದು, ರಾಜ್ಯ ಬಿಜೆಪಿಯಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಕಷ್ಟ, ಸಂಕಷ್ಟ ಇದ್ದದ್ದೇ: ‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೇ ಸ್ಪರ್ಧೆ ಮಾಡುತ್ತೇವೆ. ರಾಜ್ಯಾಧ್ಯಕ್ಷನಾಗಿ ಮುಂದುವರಿಯುವ ವಿಶ್ವಾಸವಿದೆ. ರಾಜಕೀಯ ಪಕ್ಷ ಅಂದಮೇಲೆ ಕಷ್ಟ ಸಂಕಷ್ಟ ಎರಡು ಇರುತ್ತದೆ. ನಾಲ್ಕೈದು ಮಂದಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಆಗಿಲ್ಲ. ನನ್ನ ಬಳಿಯೂ ಕೆಲ ನ್ಯೂನತೆಗಳು ಇರಬಹುದು’ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಲಬುರ್ಗಿಯಲ್ಲಿ ತಿಳಿಸಿದ್ದಾರೆ.

‘ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಬಳಿಕ ಪಕ್ಷದಲ್ಲಿನ ಎಲ್ಲ ಸಮಸ್ಯೆಗಳಿಗೆ, ಭಿನ್ನಮತಕ್ಕೆ ಉತ್ತರ ಸಿಗಲಿದೆ. ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಲ್ಲಿ ಬೇಸರವಿದೆ. ಜಿಲ್ಲಾಧ್ಯಕ್ಷರ ನೇಮಕದ ಬಳಿಕ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಎಲ್ಲ ಸಮುದಾಯದವನ್ನು ಒಟ್ಟಿಗೆ ಕೊಂಡೊಯ್ಯುವ ಅಗತ್ಯವಿದೆ ಎಂದು ವಿಜಯೇಂದ್ರ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News